ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ಜಾತ್ರೆಯ (Marikamba Fair) ಹಿನ್ನೆಲೆಯಲ್ಲಿ ಇಡೀ ಸಾಗರ ಪಟ್ಟಣವೇ ಸಿಂಗಾರಗೊಳ್ಳುತ್ತಿದ್ದು, ಎಲ್ಲ ಕಡೆಯಲ್ಲಿಯೂ ಜಾತ್ರೆಯ ವೈಭವದ ಸಿದ್ಧತೆ ಮನೆ ಮಾಡಿದೆ. ಒಂಬತ್ತು ದಿನಗಳ ಕಾಲ ನಡೆಯುವ ಶ್ರೀ ಮಾರಿಕಾಂಬ ಜಾತ್ರೆಯಲ್ಲಿ ಲಕ್ಷಾಂತರ ಜನರು ದೇವಿಯ ದರ್ಶನ ಪಡೆಯಲಿದ್ದಾರೆ.
ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಮಾರಿಕಾಂಬ ಜಾತ್ರೆಗೆ ಎರಡು ಮೂರು ತಿಂಗಳಿನಿಂದಲೇ ಸಿದ್ಧತೆ ಆರಂಭಗೊಳ್ಳುತ್ತದೆ. ಧಾರ್ಮಿಕ ವಿಧಿ ವಿಧಾನಗಳು ತಿಂಗಳ ಮುಂಚೆಯೇ ಶುರುವಾಗುತ್ತದೆ. ಜ. 31ರ ರಾತ್ರಿ ಅಂಕೆ ಹಾಕುವ ಮುಖಾಂತರ ಜಾತ್ರೆಯ ಆಚರಣೆಗೆ ಚಾಲನೆ ನೀಡಲಾಯಿತು. ಎರಡು ದಿನ ಮುಂಚಿತವಾಗಿ ಭಾನುವಾರದಿಂದ (ಫೆ. 5) ಪೂಜಾ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ.
ದೇವಿಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ
ಸೋಮವಾರ (ಫೆ.೬) ರಾತ್ರಿ 10ಕ್ಕೆ ಚಿಕ್ಕಮ್ಮನನ್ನು ಹೊರಡಿಸುವ ಕಾರ್ಯಕ್ರಮ ಮುಗಿದ ಬಳಿಕ 9 ಮನೆಗಳಿಂದ ಘಟೇವು ತರಲಾಗುತ್ತದೆ. ಮಂಗಳವಾರ (ಫೆ. 7)ಬೆಳಗ್ಗೆ 2ಕ್ಕೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ದೇವಿಯ ಮಾಂಗಲ್ಯ ಪೂಜೆ ನಡೆಸಲಾಗುತ್ತದೆ. ಪುರೋಹಿತರ ಮನೆಯಲ್ಲಿ ಪೂಜೆ ಸಲ್ಲಿಸಿ ಮಂಗಳ ವಾದ್ಯದೊಂದಿಗೆ ತಾಯಿಯ ಮನೆ ಆವರಣಕ್ಕೆ ಮೆರವಣಿಗೆ ಆಗಮಿಸಲಿದೆ.
ಫೆ. 7ರಂದು ಬೆಳಗ್ಗೆ 5ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀದೇವಿಗೆ ದೃಷ್ಟಿ ಇಡುವುದು, ಮಾಂಗಲ್ಯ ಧಾರಣೆ ಹಾಗೂ ಶ್ರೀ ಮಾರಿಕಾಂಬ ದೇವಿಯ ಪ್ರತಿಷ್ಠಾಪನೆ ಜರುಗಲಿದೆ. ಫೆ. 7ರ ರಾತ್ರಿ 10ಕ್ಕೆ ಶ್ರೀ ಪೋತರಾಜನಿಂದ ಚಾಟಿ ಸೇವೆ ನಂತರ ಹೆಣ್ಣು ಒಪ್ಪಿಸುವ ಕಾರ್ಯಕ್ರಮ ನಡೆಯಲಿದ್ದು, ಇದೇ ದಿನ ರಾತ್ರಿ ಶ್ರೀದೇವಿಯ ದಂಡಿನ ಮೆರವಣಿಗೆಯು ಪ್ರಸಿದ್ಧ ಜಾನಪದ ಕಲಾ ತಂಡಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ.
ಸಾಗರದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಸಾಗಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಹಾಗೂ ಕಲಾತಂಡಗಳು ಪಾಲ್ಗೊಳ್ಳಲಿವೆ. ಫೆ. 8ರ ಬೆಳಗ್ಗೆ ಶ್ರೀ ಮಾರಿಕಾಂಬ ದೇವಿಯ ಗಂಡನ ಮನೆ ದೇವಸ್ಥಾನದಲ್ಲಿ ಶ್ರೀ ದೇವಿಯ ಮೂರ್ತಿ ಕೂರಿಸಲಾಗುತ್ತದೆ. ಎಂಟು ದಿನಗಳ ಕಾಲ ಫೆ. 15ರವರೆಗೂ ದೇವಿಯ ದರ್ಶನ ಮಾಡಲು ಸಾರ್ವಜನಿಕರಿಗೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಜಾತ್ರಾ ಸಮಿತಿಯು ಎಲ್ಲ ರೀತಿ ಪೂಜೆಗಳಿಗೆ ಅನುಕೂಲವಾಗುವಂತೆ ಕ್ರಮ ವಹಿಸುತ್ತಿದೆ.
ಇದನ್ನೂ ಓದಿ: BKS Varma Death | ಬಿ.ಕೆ.ಎಸ್. ವರ್ಮ ಅವರಿಗೆ ಕೊನೆಗೂ ಗೌರವ ನೀಡಿತ್ತು ಕನ್ನಡ ಸಾಹಿತ್ಯ ಪರಿಷತ್ತು
ಶ್ರೀ ದೇವಿಯ ಹರಕೆ ಸಲ್ಲಿಸಲು ವಿಶೇಷ ಸೇವೆ, ಉಡಿ ಸೇವೆ, ಪಂಚ ಕಜ್ಜಾಯ ಪ್ರಸಾದ, ದೇವಿಗೆ ಹೂವಿನ ಅಲಂಕಾರ ಸೇವೆ, ತುಲಾಭಾರ ಸೇರಿದಂತೆ ವಿವಿಧ ಸೇವೆ ಸಲ್ಲಿಸಲು ಅವಕಾಶವಿದೆ. ಫೆ. 7 ರಿಂದ 15 ರವರೆಗೂ ಪ್ರತಿ ದಿನ ಬೆಳಗ್ಗೆ 8 ಗಂಟೆಯಿಂದ ಮಹಾಮಂಗಳಾರತಿ, ರಾತ್ರಿ 9.30 ರವರೆಗೆ ಶ್ರೀ ದೇವಿಗೆ ಪೂಜಾ ಕಾರ್ಯಕ್ರಮ, ಪ್ರಸಾದ ವಿನಿಯೋಗ ಇರುತ್ತದೆ.
ಶ್ರೀ ಮಾರಿಕಾಂಬ ಕಲಾ ವೇದಿಕೆ (ಗಂಡನ ಮನೆ)ಯಲ್ಲಿ ಪ್ರತಿದಿನ ಸಂಜೆ 5.30ರಿಂದ ವಿವಿಧ ಸಂಘಟನೆಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ವಿವಿಧ ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಒಂಬತ್ತು ದಿನಗಳ ವೈವಿಧ್ಯಮಯ ಪೂಜಾ ವಿಧಾನಗಳ ನಂತರ ಫೆ. 15ರ ರಾತ್ರಿ 10.30ಕ್ಕೆ ಅಮ್ಮನವರಿಗೆ ಚಾಟಿ ಸೇವೆ, ಅಮ್ಮನವರಿಗೆ ನೈವೇದ್ಯ ಮಹಾಪ್ರಸಾದ ವಿನಿಯೋಗ, ನಂತರ ರಾತ್ರಿ 12ರಿಂದ ಬೆಳಗ್ಗೆ 5ರವರೆಗೂ ಪ್ರಸಿದ್ಧ ಜಾನಪದ ಕಲಾ ತಂಡಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಶ್ರೀ ಮಾರಿಕಾಂಬ ದೇವಿಯನ್ನು ವನಕ್ಕೆ ಬಿಟ್ಟು ಬರುವ ಮೂಲಕ ಜಾತ್ರೆಯು ಸಂಪನ್ನಗೊಳ್ಳಲಿದೆ.
ಇದನ್ನೂ ಓದಿ: Narendra Modi: ಮೋದಿ ಉದ್ಘಾಟಿಸಲಿರುವ ಎಚ್‌ಎಎಲ್ ಘಟಕದ ವಿಶೇಷತೆ ಏನು?
ಜಾತ್ರಾ ಸಂಭ್ರಮದ ಹಿನ್ನೆಲೆಯಲ್ಲಿ ಇಡೀ ಪಟ್ಟಣದಲ್ಲಿ ವೈವಿಧ್ಯಮಯ ಅಂಗಡಿ, ಮಳಿಗೆ, ಮನೋರಂಜನಾ ಆಟಿಕೆ, ಸಿಹಿತಿಂಡಿಗಳ ಅಂಗಡಿ, ಬಳೆ ಸಾಮಗ್ರಿಗಳ ಅಂಗಡಿ ಸೇರಿದಂತೆ ಸಾಲು ಸಾಲು ಮಳಿಗೆಗಳು ಜಾತ್ರೆಗಾಗಿ ಸಿದ್ಧಗೊಳ್ಳುತ್ತಿವೆ. ಜಿಲ್ಲೆಯ ಜನರು, ಸುತ್ತಮುತ್ತಲಿನ ಜಿಲ್ಲೆ ಹಾಗೂ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರಾ ಸಮಯದಲ್ಲಿ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಸಾವಿರಾರು ಜನರು ಆಗಮಿಸುತ್ತಾರೆ.
ಸಾಗರದ ಶ್ರೀ ಮಾರಿಕಾಂಬಾ ಜಾತ್ರಾ ಹಿನ್ನೆಲೆಯಲ್ಲಿ ಪ್ರತಿನಿತ್ಯ ಆಗಮಿಸುವ ಸಾರ್ವಜನಿಕರಿಗೆ ಸಮಿತಿಯ ವತಿಯಿಂದ ಎಲ್ಲರಿಗೂ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಪಟ್ಟಣದ ಸ್ಥಳೀಯ ಸಂಘ ಸಂಸ್ಥೆಗಳು ಸಹ ಉಚಿತವಾಗಿ ಪಾನೀಯ, ಉಪಾಹಾರ ವ್ಯವಸ್ಥೆ ಮಾಡಿರುತ್ತವೆ. ಸಾಗರ ನಗರಸಭೆ ಆವರಣದಲ್ಲಿ ಮಾರಿಕಾಂಬ ಕಲಾ ವೇದಿಕೆಯಲ್ಲಿ ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ. 8ರಿಂದ 15 ರವರೆಗೂ ಸಂಜೆ 5.30ರಿಂದ ರಾತ್ರಿವರೆಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಾವಿದರು ನಡೆಸಿಕೊಡಲಿದ್ದಾರೆ. ಚಂಡೆ ವಾದನ, ಭರತನಾಟ್ಯ, ರಸಮಂಜರಿ, ಯೋಗ, ಡೊಳ್ಳು ಪ್ರದರ್ಶನ, ಸುಗಮ ಸಂಗೀತ, ಮಲ್ಲಗಂಬ, ಸ್ಯಾಕ್ಸೋಫೋನ್ ವಾದನ ಸೇರಿದಂತೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ: PM Modi Karnataka Visit: ಪ್ರಧಾನಿ ಡ್ಯೂಟಿಯಲ್ಲಿದ್ದ ಪೊಲೀಸರಿಗೆ ನಾಯಿ ಕಾಟ; ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಪರದಾಟ
ಫೆ.7ರ ಸಂಜೆ 5ಕ್ಕೆ ವಸ್ತು ಪ್ರದರ್ಶನ
ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರು ಸಾಗರ ನಗರದ ನೆಹರು ಮೈದಾನದಲ್ಲಿ ಫೆ. 7ರ ಸಂಜೆ 5ಕ್ಕೆ ವಸ್ತು ಪ್ರದರ್ಶನವನ್ನು ಉದ್ಘಾಟಿಸುವರು. ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಅರವಿಂದ ರಾಯ್ಕರ್, ಸಾಗರ ಗ್ರಾಮಾಂತರ ಠಾಣೆ ವೃತ್ತ ನೀರಿಕ್ಷಕ ಕೃಷ್ಣಪ್ಪ, ಸಾಗರ ಠಾಣೆ ವೃತ್ತ ನೀರಿಕ್ಷಕ ಸೀತಾರಾಮ್, ಮೆಸ್ಕಾಂ ಇಇ ವೆಂಕಟೇಶ್, ಎಇಇ ಮಂಜುನಾಥ ಉಪಸ್ಥಿತರಿರುವರು. ಶ್ರೀ ಮಾರಿಕಾಂಬ ಜಾತ್ರಾ ಸಮಿತಿಯ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಸಮಿತಿಯ ಸಂಚಾಲಕ ತಾರಾಮೂರ್ತಿ, ಸಹಸಂಚಾಲಕ ಬಾಲಕೃಷ್ಣ ಗುಳೇದ್, ಮಂಜುನಾಥ್, ಉಪಾಧ್ಯಕ್ಷ ಸುಂದರ್ ಸಿಂಗ್, ವಿ.ಶಂಕರ್, ರಾಮಪ್ಪ, ಸಹ ಕಾರ್ಯದರ್ಶಿ ವಿ.ಕೃಷ್ಣಮೂರ್ತಿ, ಎಂ.ಡಿ.ಆನಂದ್, ಖಜಾಂಚಿ ನಾಗೇಂದ್ರ ಎಸ್.ಕುಮುಟಾ ಉಪಸ್ಥಿತರಿರುವರು.
ಇದನ್ನೂ ಓದಿ: ಅನಿಸಿಕೆ: Indian Democracy: ಪರಮಾಧಿಕಾರ ಮತ್ತು ಸಮಾನತೆ ಎಂಬ ಸವಕಲು ನಾಣ್ಯಗಳು