Site icon Vistara News

Marikamba Fair: 8 ದಿನಗಳ ಹೊಸನಗರ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

Marikamba Fair Hosanagara

ಹೊಸನಗರ: ಪಟ್ಟಣದ ದ್ಯಾವರ್ಸದಲ್ಲಿರುವ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ಮಂಗಳವಾರ (ಜ.24) ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ (Marikamba Fair) ಚಾಲನೆ ನೀಡಲಾಗಿದ್ದು, ಬೆಳಗ್ಗೆ 9 ಗಂಟೆಯಿಂದ ಪೂಜಾ ಕಾರ್ಯ ಆರಂಭಿಸಲಾಯಿತು.

ಬೆಳಗ್ಗೆ 8 ಗಂಟೆಗೆ ಹೊಸನಗರದ ಗಣಪತಿ ದೇವಸ್ಥಾನದ ಮುಂಭಾಗ ಗಣಪತಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಮಾರಿಯಮ್ಮನವರಿಗೆ ಕೃಷ್ಣಮೂರ್ತಿ ಭಟ್ ಮತ್ತು ಸಹೋದರರಿಂದ ಪೂಜೆ ಸಲ್ಲಿಸಲಾಯಿತು. ಶಿವಪ್ಪ ನಾಯಕ ರಸ್ತೆಯ ಮಾರ್ಗವಾಗಿ ಶ್ರೀ ದುರ್ಗಾಂಬಾ ದೇವಸ್ಥಾನಕ್ಕೆ ಮೆರವಣಿಗೆಯ ಮೂಲಕ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕ ಪೂಜೆಗೆ ದುರ್ಗಾಂಬಾ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಯಿತು.

ಮಾರಿಯಮ್ಮನವರ ಗಂಡನ ಮನೆಯೆಂದೇ ಕರೆಸಿಕೊಳ್ಳುವ ಮಾರಿಗುಡ್ಡದಲ್ಲಿರುವ ಮಾರಿಯಮ್ಮ ದೇವಸ್ಥಾನದ ಆವರಣದಲ್ಲಿ ಬುಧವಾರದಿಂದ (ಜ.೨೫) ಜಾತ್ರೆ ಆರಂಭವಾಗಿದ್ದು, ಒಟ್ಟು 8 ದಿನಗಳ ಕಾಲ ಅದ್ಧೂರಿಯಾಗಿ ಜಾತ್ರೆ ನಡೆಯಲಿದೆ.

ಪ್ರತಿದಿನ ಸಂಜೆ 8 ಗಂಟೆಯಿಂದ ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲಾ ಮಕ್ಕಳಿಂದ ವಿವಿಧ ಬಗೆಯ ಪಿರಮಿಡ್ ರಚನೆ, ಹಾಡು, ನೃತ್ಯಗಳು, ಪರಸ್ಥಳದಿಂದ ಆಗಮಿಸುವ ಕಲಾವಿದರಿಂದ ಆರ್ಕೆಸ್ಟ್ರಾಗಳು ನಡೆಯಲಿವೆ. ಇವುಗಳ ಜತೆಗೆ ವಿವಿಧ ಬಗೆಯ ಮನೋರಂಜನೆಯ ಆಟಗಳಾದ ಬ್ರೇಕ್ ಡ್ಯಾನ್ಸ್, ಶ್ವಾನ ಸಾಹಸಗಳು, ತೊಟ್ಟಿಲುಗಳು ಜನರನ್ನು ಆಕರ್ಷಿಸಲು ಮುಂದಾಗಿವೆ. ಇನ್ನು ಆಟಿಕೆ ಸೇರಿದಂತೆ ಇತರ ವ್ಯಾಪಾರಿಗಳ ದಂಡೇ ಜಾತ್ರೆಯಲ್ಲಿ ಸೇರಿವೆ. ಒಟ್ಟಾರೆ 8 ದಿನಗಳ ಕಾಲ ಹೊಸನಗರ ಮಾರಿ ಜಾತ್ರೆ ಅದ್ಧೂರಿಯಾಗಿ ನಡೆಯಲಿದ್ದು, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ | Kannada New Movie: ಮಾಲಾಶ್ರೀ-ಭೂಮಿ ಶೆಟ್ಟಿ ಅಭಿನಯದ ಕಾದಂಬರಿ ಆಧಾರಿತ ‘ಕೆಂಡದ ಸೆರಗು’ ಸಿನಿಮಾ ಟೀಸರ್ ರಿಲೀಸ್

Exit mobile version