Site icon Vistara News

Marikamba Fair: ಫೆ. 7ರಿಂದ ಸಾಗರದ ಮಾರಿಕಾಂಬ ಜಾತ್ರೆ ಆರಂಭ; 5ರಿಂದ ಧಾರ್ಮಿಕ ಪೂಜೆಗೆ ಚಾಲನೆ

Marikamba Fair sagara

#image_title

ಸಾಗರ: ಪ್ರತಿ ಮೂರು ವರ್ಷಗಳಿಗೊಮ್ಮೆ ಸಾಗರದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆ (Marikamba Fair) ಫೆ. 7ರಿಂದ ಆರಂಭಗೊಳ್ಳಲಿದ್ದು, 9 ದಿನಗಳ ಕಾಲ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ರಾಜ್ಯದ ಅತಿ ದೊಡ್ಡ ಜಾತ್ರಾ ಉತ್ಸವ ಆಗಿದ್ದು, ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿಯು ಸಕಲ ಸಿದ್ಧತೆ ನಡೆಸಿದೆ. ಜಾತ್ರಾ ಸಂದರ್ಭದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ಜರುಗಲಿವೆ.

ಫೆ. 5ರಂದು ಬೆಳಗ್ಗೆ 10ಕ್ಕೆ ಶ್ರೀ ದೇವಿಗೆ ಸೀರೆ, ಬಾಸಿಂಗ, ಜಡೆ, ಆಭರಣ ತರುವ ಕಾರ್ಯಕ್ರಮವನ್ನು ಬಾಗಿನ ತೆಗೆದುಕೊಂಡು ಹೋಗುವ ಮೂಲಕ ನಡೆಸಲಾಗುತ್ತದೆ. ಫೆ. 6ರಂದು ರಾತ್ರಿ 10ರಿಂದ ಮರುದಿನ ಬೆಳಗಿನ ಜಾವ 5 ಗಂಟೆವರೆಗೂ ಚಿಕ್ಕಮ್ಮನನ್ನು ಹೊರಡಿಸುವ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: kodi mutt swamiji: ಪಕ್ಷಗಳು ಒಡೆದರೂ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ: ಕೋಡಿಮಠ ಶ್ರೀ ಭವಿಷ್ಯ

ಫೆ. 7ರ ಬೆಳಗ್ಗೆ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಶ್ರೀ ದೇವಿಯ ಮಾಂಗಲ್ಯ ಪೂಜೆ ಮಾಡಿಸಿ ತವರು ಮನೆ ದೇವಸ್ಥಾನಕ್ಕೆ ತರಲಾಗುತ್ತದೆ. ಬೆಳಗ್ಗೆ 5ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ದೇವಿಗೆ ದೃಷ್ಟಿ ಇಡುವುದು, ಮಾಂಗಲ್ಯ ಧಾರಣೆ ಮತ್ತು ಶ್ರೀ ಮಾರಿಕಾಂಬ ದೇವಿಯ ಪ್ರತಿಷ್ಠಾಪನೆ ಜರುಗಲಿದೆ. ನಂತರ ಮಹಾಪೂಜೆ ನಡೆಯಲಿದೆ. ಫೆ. 7ರ ರಾತ್ರಿ 10ಕ್ಕೆ ಶ್ರೀ ಪೋತರಾಜನಿಂದ ಚಾಟಿ ಸೇವೆ ನಂತರ ಹೆಣ್ಣು ಒಪ್ಪಿಸುವ ಕಾರ್ಯಕ್ರಮ ನಡೆಯಲಿದೆ. ಶ್ರೀ ದೇವಿಯ ದಂಡಿನ ಮೆರವಣಿಗೆ ಪ್ರಸಿದ್ಧ ಜಾನಪದ ಕಲಾ ತಂಡದೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ಫೆ. 8ರ ಬೆಳಗ್ಗೆ ಶ್ರೀ ಮಾರಿಕಾಂಬ ದೇವಿಯ ಗಂಡನ ಮನೆ ದೇವಸ್ಥಾನದಲ್ಲಿ ಶ್ರೀ ದೇವಿಯ ಮೂರ್ತಿಯನ್ನು ಕೂರಿಸಲಾಗುತ್ತದೆ. ಫೆ. 15ರವರೆಗೂ ಸಾರ್ವಜನಿಕರ ದರ್ಶನಕ್ಕೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಜಾತ್ರಾ ಸಮಿತಿಯು ಎಲ್ಲ ರೀತಿ ಪೂಜೆಗಳಿಗೆ ಅನುಕೂಲವಾಗುವಂತೆ ಕ್ರಮ ವಹಿಸಿದೆ. ದೇವಿಯ ಹರಕೆ ಸಲ್ಲಿಸಲು ವಿಶೇಷ ಸೇವೆ, ಉಡಿ ಸೇವೆ, ಪಂಚ ಕಜ್ಜಾಯ ಪ್ರಸಾದ, ದೇವಿಗೆ ಹೂವಿನ ಅಲಂಕಾರ ಸೇವೆ, ತುಲಾಭಾರ ಸೇರಿದಂತೆ ವಿವಿಧ ಸೇವೆ ಸಲ್ಲಿಸಲು ಅವಕಾಶವಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಜಾತ್ರಾ ಸಮಿತಿಯ ವತಿಯಿಂದ ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದದ ವ್ಯವಸ್ಥೆ ಇರುತ್ತದೆ. ಸ್ಥಳೀಯ ಸಂಘ ಸಂಸ್ಥೆಗಳು ಸಹ ಉಚಿತವಾಗಿ ಪಾನೀಯ, ಉಪಾಹಾರ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿರುತ್ತವೆ.

ಫೆ. 7ರಿಂದ 15ರವರೆಗೂ ಪ್ರತಿ ದಿನ ಬೆಳಗ್ಗೆ 8 ಗಂಟೆಯಿಂದ ಮಹಾ ಮಂಗಳಾರತಿ, ರಾತ್ರಿ 9.30 ರವರೆಗೆ ಶ್ರೀ ದೇವಿಗೆ ಪೂಜಾ ಕಾರ್ಯಕ್ರಮ, ಪ್ರಸಾದ ವಿನಿಯೋಗ ಇರುತ್ತದೆ. ಶ್ರೀ ಮಾರಿಕಾಂಬ ಕಲಾ ವೇದಿಕೆ (ಗಂಡನ ಮನೆ) ಯಲ್ಲಿ ಪ್ರತಿ ದಿನ ಸಂಜೆ 5.30ರಿಂದ ವಿವಿಧ ಸಂಘಟನೆಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ವಿವಿಧ ಭಜನಾ ತಂಡಗಳು ಪಾಲ್ಗೊಳ್ಳಲಿವೆ.

ಇದನ್ನೂ ಓದಿ: Heart attack : ಕಾರಿನಲ್ಲಿ ಹೋಗುತ್ತಿದ್ದಾಗಲೇ ಹೃದಯಾಘಾತ: ಖ್ಯಾತ ವಿಧಿ ವಿಜ್ಞಾನ ತಜ್ಞ ಡಾ. ಭಗವಾನ್‌ ಎಸ್‌. ಇನ್ನಿಲ್ಲ

ಒಂಬತ್ತು ದಿನಗಳ ವೈವಿಧ್ಯಮಯ ಪೂಜಾ ವಿಧಾನಗಳ ನಂತರ ಫೆ. 15ರ ರಾತ್ರಿ 10.30ಕ್ಕೆ ಅಮ್ಮನವರಿಗೆ ಚಾಟಿ ಸೇವೆ, ಅಮ್ಮನವರಿಗೆ ನೈವೇದ್ಯ ಮಹಾಪ್ರಸಾದ ವಿನಿಯೋಗ, ನಂತರ ರಾತ್ರಿ 12ರಿಂದ ಬೆಳಗ್ಗೆ 5 ರವರೆಗೂ ಪ್ರಸಿದ್ಧ ಜಾನಪದ ಕಲಾ ತಂಡಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಶ್ರೀ ಮಾರಿಕಾಂಬ ದೇವಿಯನ್ನು ವನಕ್ಕೆ ಬಿಟ್ಟು ಬರುವ ಮೂಲಕ ಜಾತ್ರೆಯು ಸಂಪನ್ನಗೊಳ್ಳಲಿದೆ.

Exit mobile version