Site icon Vistara News

Sagara Marikamba Jatra: ರಾತ್ರಿ 11ಕ್ಕೆ ಅಂಗಡಿ ಮುಚ್ಚಲು ಪೊಲೀಸರಿಂದ ಒತ್ತಡ, ಧ್ವನಿ ಎತ್ತದ ಶಾಸಕರು; ಗೋಪಾಲಕೃಷ್ಣ ಬೇಳೂರು ಅಸಮಾಧಾನ

Gopalakrishna Belur KPCC spokesperson Sagara Marikamba Jatra

#image_title

ಸಾಗರ: ಜಾತ್ರೆಯಲ್ಲಿ ಪೊಲೀಸರ ಹಿಟ್ಲರ್ ನಡೆ ಖಂಡನೀಯ. ಸಾಲ ಮಾಡಿಕೊಂಡು ಜಾತ್ರೆಯಲ್ಲಿ (Sagara Marikamba Jatra) ಅಂಗಡಿ ಹಾಕಿದವರಿಗೆ ರಾತ್ರಿ 11ಕ್ಕೆ ಬಂದ್ ಮಾಡುವಂತೆ ದಬ್ಬಾಳಿಕೆ ನಡೆಸುತ್ತಿರುವ ಇಲಾಖೆಯ ವರ್ತನೆಯ ವಿರುದ್ಧ ಶಾಸಕರು, ನಗರಸಭೆ ಆಡಳಿತವು ಧ್ವನಿ ಎತ್ತದೆ ಇರುವುದು ದುರದೃಷ್ಟಕರ ಸಂಗತಿ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾರಿಕಾಂಬಾ ಜಾತ್ರೆಯ ಹಿನ್ನೆಲೆಯಲ್ಲಿ ಶುಕ್ರವಾರ (ಫೆ.೧೦) ದೇವಿ ದರ್ಶನ ಮಾಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ʼಎರಡು ದಿನಗಳ ಕಾಲ ನಡೆದ ಕೆರೆ ಹಬ್ಬ ಸಂದರ್ಭದಲ್ಲಿ ಬೆಳಗ್ಗಿನವರೆಗೆ ವ್ಯಾಪಾರ ವಹಿವಾಟು ನಡೆಸಿ, ಈಗ ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ರಾತ್ರಿ 11ಕ್ಕೆ ಅಂಗಡಿ ಬಾಗಿಲು ಮುಚ್ಚಲು ಪೊಲೀಸರು ಒತ್ತಡ ಹೇರಲು ಕಾರಣ ಏನುʼ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Valentines Day E-Greeting Cards: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ವರ್ಚುವಲ್‌ ಇ-ಗ್ರೀಟಿಂಗ್‌ ಕಾರ್ಡ್‌ಗಳ ಹವಾ

ʼಬೇರೆ ಬೇರೆ ಊರುಗಳಿಂದ ಭಕ್ತರು ಜಾತ್ರೆ ನೋಡಲು ರಾತ್ರಿ ವೇಳೆ ಬರುತ್ತಾರೆ. ಅವರನ್ನು ನಿರಾಶೆಗೊಳಿಸುವ ಕೆಲಸವನ್ನು ಆಡಳಿತ ಮಾಡಬಾರದು. ಶಾಸಕರು, ನಗರಸಭೆ ಆಡಳಿತ ಮತ್ತು ಸಮಿತಿಯು ಸಾಗರ ಜಾತ್ರೆಯ ಮಹತ್ವವನ್ನು ಪೊಲೀಸರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಬೇಕು. ಜಾತ್ರೆಯಲ್ಲಿ ಎಲ್ಲ ಆಟಿಕೆಗಳ ಪ್ರವೇಶ ಶುಲ್ಕ 50 ರೂಪಾಯಿ ಎಂದು ಶಾಸಕರು ಭಾಷಣ ಮಾಡಿದ್ದರು. ಈಗ 100 ರೂ. ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ದೂರುಗಳಿದ್ದು, ಇಲ್ಲಿಯೂ ಶೇ. 40 ಕಮಿಷನ್ ವ್ಯವಹಾರ ನಡೆಯುತ್ತಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಏನೇ ಆದರೂ ಅಮ್ಮನ ದುಡ್ಡು ತಿಂದವರಿಗೆ ಉಳಿಗಾಲವಿಲ್ಲ. ಇದೆಲ್ಲದರ ನಡುವೆ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ನಾಡಿಗೆ ದೇವಿಯ ದರ್ಶನದಿಂದ ಸನ್ಮಂಗಲವನ್ನುಂಟು ಮಾಡಲಿʼ ಎಂದು ಹೇಳಿದರು.

ಇದನ್ನೂ ಓದಿ: 7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

ʼಮಾರಿಕಾಂಬಾ ಜಾತ್ರೆಗೆ ಅಂಕೆ ಹಾಕಿದ ಮೇಲೆ ಯಾವುದೇ ಶುಭ ಕಾರ್ಯ ಮಾಡಬಾರದು ಎನ್ನುವ ಪ್ರತೀತಿ ಇದ್ದರೂ ಶಾಸಕರು, ನಗರಸಭೆ ಆಡಳಿತ ಕೆರೆ ಹಬ್ಬ ಮಾಡುವ ಮೂಲಕ ಸಂಪ್ರದಾಯವನ್ನು ಮುರಿದಿದೆ. ಕೆರೆ ಹಬ್ಬದ ಹೆಸರಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಕರೆಸಿಕೊಂಡು ಶಾಸಕರು ಪೋಸ್ ಕೊಟ್ಟಿರುವುದು ನಾಚಿಕೆಗೇಡಿನ ಸಂಗತಿ. ಕೆರೆ ಹಬ್ಬದ ಬದಲು ನಗರ ವ್ಯಾಪ್ತಿಯಲ್ಲಿ ಹಾಳಾಗಿರುವ ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸಲು ಹಣ ವಿನಿಯೋಗ ಮಾಡಿದ್ದರೆ ಚೆನ್ನಾಗಿರುತಿತ್ತುʼ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರ ಲ್ಯಾವಿಗೆರೆ, ಸ್ವರೂಪ್ ಐ.ಜಿ., ಅನ್ವರ್ ಭಾಷಾ, ಶ್ರೀನಾಥ್, ಯಶವಂತ್ ಪಣಿ, ಮನೋಜ್ ಕುಗ್ವೆ, ಚಿಂಟು ಸಾಗರ್, ಚಿನ್ಮಯ್, ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕೆ.ಎನ್.ನಾಗೇಂದ್ರ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ: Ravindra Jadeja : ಮುಲಾಮು ಹಚ್ಚುವ ವೇಳೆ ಜಡೇಜಾ ಚೆಂಡನ್ನು ಕೈಯಲ್ಲಿ ಹಿಡಿದುಕೊಂಡಿದ್ದು ತಪ್ಪು ಎಂದ ಮೈಕೆಲ್​ ಕ್ಲಾರ್ಕ್​

Exit mobile version