Site icon Vistara News

Marikamba Jatra: ಸಾಗರದ ಮಾರಿಕಾಂಬಾ ಜಾತ್ರೆ; ಮಾರಿಕಾಂಬೆಯ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

Marikamba Jatra sagara

#image_title

ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಗೆ (Marikamba Jatra) ಮಂಗಳವಾರ (ಫೆ.೭) ಅದ್ಧೂರಿ ಚಾಲನೆ ದೊರೆತಿದ್ದು, ಒಂಬತ್ತು ದಿನಗಳ ಕಾಲ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆಯ ಮೊದಲ ದಿನ ಸಂಪ್ರದಾಯದಂತೆ ನಡೆದುಕೊಂಡು ಬಂದಿರುವ ಧಾರ್ಮಿಕ ವಿಧಿವಿಧಾನಗಳಿಗೆ ಬೆಳಗ್ಗೆ 5ರ ಬ್ರಾಹ್ಮೀ ಮಹೂರ್ತದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕಿ.ಮೀ.ಗಟ್ಟಲೆ ಜನರು ಮಾರಿಕಾಂಬೆ ದರ್ಶನಕ್ಕೆ, ವಿಶೇಷ ಪೂಜೆಗಾಗಿ ಸರತಿ ಸಾಲಿನಲ್ಲಿ ನಿಂತಿದ್ದು ಕಂಡುಬಂದಿತ್ತು.

ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಶ್ರೀ ಮಾರಿಕಾಂಬಾ ದೇವಿಯ ತಾಳಿ ಮತ್ತು ಆಭರಣಗಳಿಗೆ ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಪೂಜೆ ಸಲ್ಲಿಸಲಾಯಿತು. ಧಾರ್ಮಿಕ ವಿಧಿವಿಧಾನಗಳನ್ನು ದೇವಾಲಯದ ಪ್ರಧಾನ ಅರ್ಚಕ ವಿದ್ವಾನ್ ಪಿ.ಎಲ್.ಗಜಾನನ ಭಟ್ ನೆರವೇರಿಸಿದರು. ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ನಂತರ ಸಂಪ್ರದಾಯದಂತೆ ಪುರೋಹಿತ ರಮೇಶ ಭಟ್ಟರ ಮನೆಯಲ್ಲಿ ಪೂಜಾ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

ಶ್ರೀ ಮಹಾಗಣಪತಿ ದೇವಾಲಯದಿಂದ ಮಂಗಳವಾದ್ಯಗಳೊಂದಿಗೆ ಸಾಗರ ನಗರದ ಪ್ರಮುಖ ರಸ್ತೆಗಳಲ್ಲಿ ಅಮ್ಮನವರ ಆಭರಣದ ಮೆರವಣಿಗೆ ಸಾಗಿ ತವರು ಮನೆ ದೇವಸ್ಥಾನಕ್ಕೆ ಆಭರಣಗಳನ್ನು ತರಲಾಯಿತು. ಸಾಗರ ನಗರದ ತವರು ಮನೆಯಲ್ಲಿ ಪ್ರತಿಷ್ಠಾಪಿಸಿದ್ದ 18 ಅಡಿ ಎತ್ತರದ ಶ್ರೀ ಮಾರಿಕಾಂಬಾ ವಿಗ್ರಹಕ್ಕೆ ವಿವಿಧ ಸಾಂಪ್ರಾದಾಯಿಕ ಆಚರಣೆಗಳನ್ನು ನಡೆಸಿ ಆಭರಣಗಳನ್ನು ತೊಡಿಸಲಾಯಿತು.

ಪೂಜಾ ಕಾರ್ಯಕ್ರಮದ ನಂತರ ದೇವಿಯ ವಿಗ್ರಹಕ್ಕೆ ಭಾರಿ ಗಾತ್ರದ ಹಾರ ಸೇರಿದಂತೆ ವೈವಿಧ್ಯಮಯ ಹೂವಿನ ಅಲಂಕಾರ ನಡೆಸಿ ಮಹಾಮಂಗಳಾರತಿ ನಡೆಸಲಾಯಿತು. ನಂತರ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ತವರು ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ಮಧುಕರ್ ಭಟ್, ಪುರೋಹಿತ ರಮೇಶ್ ಭಟ್, ಗಜಾನನ ಜೋಯ್ಸ್, ನೀಲಕಂಠ ಜೋಯ್ಸ್, ಸದಾಶಿವ ಜೋಯ್ಸ್, ರಾಘವೇಂದ್ರ ಭಟ್, ನವೀನ್ ಜೋಯ್ಸ್, ಸುಧೀಂದ್ರ ಜೋಯ್ಸ್, ಲಕ್ಷ್ಮಣ್‍ ಜೋಯ್ಸ್ ಇನ್ನಿತರರು ಸಾರಥ್ಯ ವಹಿಸಿದ್ದರು.

ಇದನ್ನೂ ಓದಿ: RBI MPC Meet 2023 : ಒಬ್ಬ ಗ್ರಾಹಕನಿಂದ ಬ್ಯಾಂಕಿಂಗ್‌ ವ್ಯವಸ್ಥೆಗೆ ಅಪಾಯ ಇಲ್ಲ: ಅದಾನಿ ವಿವಾದದ ಬಗ್ಗೆ ಆರ್‌ಬಿಐ ಗವರ್ನರ್‌

ರಾತ್ರಿಯಿಂದಲೇ ದೇವರ ದರ್ಶನಕ್ಕೆ ಕಾದು ನಿಂತ ಭಕ್ತರು

ಶ್ರೀ ಮಾರಿಕಾಂಬಾ ಜಾತ್ರೆಯ ಮೊದಲ ದಿನದಂದು ತವರುಮನೆಯಲ್ಲಿ ಶ್ರೀ ಮಾರಿಕಾಂಬೆ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೋಮವಾರ (ಫೆ.೬) ರಾತ್ರಿ 2 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು. ಮಂಗಳವಾರ ಬೆಳಗ್ಗೆ ಪೂಜೆಯ ಸಂದರ್ಭದಲ್ಲಿ ದೇವರ ದರ್ಶನಕ್ಕೆ ನಿಂತಿದ್ದ ಸರದಿ ಸಾಲು ಸಾಗರ ಸಣ್ಣಮನೆ ಬಡಾವಣೆಯ ಸೇತುವೆಯನ್ನು ದಾಟಿದ್ದು ವಿಶೇಷವಾಗಿತ್ತು.

ನೀರು ಮತ್ತು ಉಪಾಹಾರ ಪೂರೈಕೆ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು, ಯೋಧನಮನ ಟ್ರಸ್ಟ್, ದೈವಜ್ಞ ಸಮಾಜದ ಯುವಕರು ಹಾಗೂ ಆನಂದ ಸಾಗರ ಟ್ರಸ್ಟ್ ವತಿಯಿಂದ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಚಹಾ, ಕಾಫಿ, ಬಾದಾಮಿ ಹಾಲನ್ನು ಉಚಿತವಾಗಿ ವಿತರಿಸಲಾಯಿತು. ಜಾತ್ರೆಗೆ ಆಗಮಿಸಿದ್ದ ಸಾರ್ವಜನಿಕರಿಗೆ ಜಾತ್ರಾ ಸಮಿತಿಯಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ: B.Y. Vijayendra: ಕಾಂಗ್ರೆಸ್‌ ನಾಯಕರಿಗೆ ಅಡ್ರೆಸ್‌ ಇಲ್ಲ; ನಮ್ಮವರು ವಿಶ್ವ ನಾಯಕರು: ಟೀಕೆಗೆ ಬಿ.ವೈ. ವಿಜಯೇಂದ್ರ ಪ್ರತ್ಯುತ್ತರ

ಸ್ನೇಹಿತರು ಬಳಗದಿಂದ ಊಟ

ಇಲ್ಲಿನ ಸ್ನೇಹಿತರು ಸಾಗರ ಸಂಸ್ಥೆಯ ವತಿಯಿಂದ ಜಾತ್ರಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆಯನ್ನು ನಗರಸಭೆ ಕಾಂಪ್ಲೆಕ್ಸ್‌ನಲ್ಲಿ ಏರ್ಪಡಿಸಲಾಗಿತ್ತು. ಸತತ 15ನೇ ಜಾತ್ರೆಯಲ್ಲಿ ಸ್ನೇಹಿತರು ಸಾಗರ ಸಂಸ್ಥೆಯು ಈ ಸೇವಾ ಕಾರ್ಯವನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದೆ. ಪ್ರತಿದಿನ 8 ರಿಂದ 10 ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನು ಸಂಸ್ಥೆಯು ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಭಕ್ತಾದಿಗಳಿಗೆ ಶುದ್ಧವಾದ ನೀರು ಮತ್ತು ಊಟದ ವ್ಯವಸ್ಥೆಯನ್ನು ಜಾತ್ರೆ ಮುಗಿಯುವವರೆಗೂ ಮಾಡಲಾಗುತ್ತದೆ ಎಂದು ಬಳಗದ ಪರವಾಗಿ ಬಿ.ಎಚ್.ಲಿಂಗರಾಜ್ ತಿಳಿಸಿದರು.

ಇದನ್ನೂ ಓದಿ: Pakistani Brides: ಸಿಕ್ಕಿಬಿದ್ದ ಪಾಕ್‌ ಯುವತಿಯ ಗಡಿಪಾರು ಸಿದ್ಧತೆ ; ಭಟ್ಕಳದಲ್ಲಿರುವ ಪಾಕಿಸ್ತಾನಿ ವಧುಗಳ ಭವಿಷ್ಯ ಏನು?

ಶಾಸಕ ಹಾಲಪ್ಪ, ಮಾಜಿ ಸಚಿವ ಕಾಗೋಡು ದರ್ಶನ

ಶಾಸಕ ಹರತಾಳು ಹಾಲಪ್ಪ ಮತ್ತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಏಕಕಾಲದಲ್ಲಿ ಕುಟುಂಬ ಸಮೇತರಾಗಿ ಬಂದು ಅಮ್ಮನವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಜರಿದ್ದು, ಅಮ್ಮನವರಿಗೆ ಇಬ್ಬರು ಜನಪ್ರತಿನಿಧಿಗಳ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಎರಡನೇ ದಿನವೂ ಹರಿದುಬಂದ ಜನ

ಮಾರಿಕಾಂಬೆ ದರ್ಶನ ಹಾಗೂ ಜಾತ್ರೆ ನಿಮಿತ್ತ ಎರಡನೇ ದಿನವಾದ ಬುಧವಾರವೂ ಜನರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರತಿ ಜಾತ್ರೆ ಸಂದರ್ಭದಲ್ಲಿಯೂ ೯ ದಿನಗಳ ಕಾಲ ಭಾರಿ ಪ್ರಮಾಣದಲ್ಲಿ ಜನ ಸೇರುತ್ತಾರೆ. ಈ ಸಾರಿಯೂ ವಾರಾಂತ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಕಡೆ ಇರುವ ಸ್ಥಳೀಯ ನಾಗರಿಕರು ಜಾತ್ರೆಗೆ ಬರುವ ನಿರೀಕ್ಷೆ ಇದೆ.

Exit mobile version