Site icon Vistara News

Marikamba Jatra: ವೈಭವದ ರಾಜಬೀದಿ ಮೆರವಣಿಗೆಯೊಂದಿಗೆ ಗಂಡನ ಮನೆಗೆ ಆಗಮಿಸಿದ ಶ್ರೀ ಮಾರಿಕಾಂಬಾ ದೇವಿ

Marikamba Jatra sagara

#image_title

ಸಾಗರ: ಇಲ್ಲಿನ ಶ್ರೀ ಮಾರಿಕಾಂಬಾ ದೇವಿಯ ತವರು ಮನೆಯಲ್ಲಿ ಮಂಗಳವಾರ (ಫೆ.೭) ಪ್ರತಿಷ್ಠಾಪಿಸಲಾಗಿದ್ದ ಶ್ರೀದೇವಿಯನ್ನು ರಾತ್ರಿ ವೈಭವದ ರಾಜಬೀದಿ ಮೆರವಣಿಗೆಯೊಂದಿಗೆ ಗಂಡನ ಮನೆಗೆ ಬುಧವಾರ (ಫೆ.೮) ಬೆಳಗ್ಗೆ ಕರೆ ತರಲಾಯಿತು. ಮೆರವಣಿಗೆಯಲ್ಲಿ 25 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಂಡು ಅಮ್ಮನಿಗೆ ಜೈಕಾರ ಹಾಕುವ ಮೂಲಕ ಮಾರಿಕಾಂಬೆಯನ್ನು (Marikamba Jatra) ಅದ್ಧೂರಿಯಾಗಿ ಗಂಡನ ಮನೆಗೆ ಸ್ವಾಗತಿಸಿದರು.

ತವರು ಮನೆಯಲ್ಲಿ ಪೋತರಾಜನಿಂದ ಚಾವಟಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮವು ಮಂಗಳವಾರ ರಾತ್ರಿ 11 ಗಂಟೆಗೆ ನಡೆಯಿತು. ನಂತರ ಹೆಣ್ಣು ಒಪ್ಪಿಸುವ ಧಾರ್ಮಿಕ ಪೂಜಾ ವಿಧಾನಗಳು ವಿವಿಧ ಸಮುದಾಯದ ಪ್ರಮುಖರ ಸಮ್ಮುಖದಲ್ಲಿ ನಡೆಯಿತು. ನಂತರ ಸಿಡಿಮದ್ದು ಸೇರಿದಂತೆ ವಿವಿಧ ಕಲಾ ತಂಡಗಳ ಪಾಲ್ಗೊಳ್ಳುವಿಕೆ ಮೂಲಕ ಶ್ರೀ ಮಾರಿಕಾಂಬಾ ದೇವಿಯ ದಂಡಿನ ಮೆರವಣಿಗೆ ಪ್ರಾರಂಭಗೊಂಡಿತು.

ಬೆಳ್ತಂಗಡಿಯ ಸೃಷ್ಟಿ ಆರ್ಟ್ಸ್‌ನ ಕಲಾವಿದರ ತಂಡ, ಕೀಲುಕುದುರೆ, ಕರಗ, ರಾಜ, ರಾಣಿ, ಸಿಂಹ ಸೇರಿದಂತೆ ವಿವಿಧ ವೇಷಧಾರಿಗಳು, ಹುಬ್ಬಳ್ಳಿಯ ಬ್ಯಾಂಡ್ ಬಳಗ, ಶಿರಸಿಯ ಮುಖೇಶ್ ಆರ್ಟ್ಸ್ ಬೇಡರ ವೇಷದ ಕಲಾವಿದರು, ಅರಸೀಕೆರೆಯ ಶ್ರೀ ರಾಮ ಯುವಕ ಕಲಾ ಸಂಘದ ಸದಸ್ಯರು ಸೋಮನ ಕುಣಿತ, ನಂದಿಕೋಲು ಮೆರವಣಿಗೆಯ ವೈಭವತೆಗೆ ಸಾಕ್ಷಿಯಾದವು.

ಇದನ್ನೂ ಓದಿ: Parliament Budget Session: 50 ಸಾವಿರ ರೂ. ಮೌಲ್ಯದ ದುಬಾರಿ ಸ್ಕಾರ್ಫ್ ಧರಿಸಿದ ಖರ್ಗೆ, ಬಿಜೆಪಿ ತೀವ್ರ ವಾಗ್ದಾಳಿ

ವಿದ್ಯುದ್ದೀಪಗಳಿಂದ, ಹೂವಿನಿಂದ ಸಿಂಗಾರಗೊಂಡ ರಥದಲ್ಲಿ ಶ್ರೀ ಮಾರಿಕಾಂಬೆಯ 18 ಅಡಿ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಬುಧವಾರ (ಫೆ.೮) ಬೆಳಗಿನ ಜಾವ 6 ಗಂಟೆ ಸುಮಾರಿಗೆ ಗಂಡನ ಮನೆಗೆ ತಂದು ಬೃಹತ್ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಗಂಡನ ಮನೆ ದೇವಸ್ಥಾನದಲ್ಲಿ ಶ್ರೀ ಮಾರಿಕಾಂಬಾ ದೇವಿಯ ದರ್ಶನಕ್ಕೆ ಜನರಿಗೆ ಬುಧವಾರದಿಂದ ಅವಕಾಶ ಕಲ್ಪಿಸಲಾಗಿದೆ. ಗಂಡನ ಮನೆ ದೇವಸ್ಥಾನದಲ್ಲಿ ಶ್ರೀ ದೇವಿಯ ಘಟೇವು ಪ್ರವೇಶ ನಂತರ ಮಂಗಳಾರತಿ ನಡೆಸಲಾಯಿತು. ಫೆ.15ರವರೆಗೂ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Exit mobile version