Site icon Vistara News

Markepunov Fair: ಕಾರವಾರದಲ್ಲಿ ಮಾರ್ಕೆಪೂನಾವ್ ಜಾತ್ರೆ; ಹೊಕ್ಕಳಿಗೆ ಸೂಜಿ ಚುಚ್ಚಿಕೊಂಡು ಆಚರಣೆ

Markepunov Fair karwar

#image_title

ಕಾರವಾರ: ಜಾತ್ರೆಗಳನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಭಿನ್ನ ವಿಭಿನ್ನ ಸಂಪ್ರದಾಯಗಳಿಂದಾಗಿ ಅಲ್ಲಿನ ಆಚರಣೆಗಳೂ ವಿಶಿಷ್ಟವಾಗಿರುತ್ತವೆ. ಅದರಂತೆ ಕರಾವಳಿ ನಗರಿ ಕಾರವಾರದಲ್ಲಿ ಮಂಗಳವಾರ (ಫೆ.6) ಮಾರ್ಕೆಪೂನಾವ್ ಎನ್ನುವ ವಿಭಿನ್ನ ಜಾತ್ರೆ (Markepunov Fair) ನಡೆಯಿತು. ಜಾತ್ರೆಯಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ಸೂಜಿ ಚುಚ್ಚಿಸಿಕೊಂಡು ನೂಲನ್ನು ಪೋಣಿಸಿಕೊಂಡರೆ, ಹೆಣ್ಣುಮಕ್ಕಳು ದೀಪವನ್ನು ಹೊತ್ತು ಹರಕೆಯನ್ನು ಈಡೇರಿಸುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ.

ಕಾರವಾರದ ಗಡಿ ಗ್ರಾಮ ಮಾಜಾಳಿಯಲ್ಲಿ ಪ್ರತಿ ವರ್ಷ ಫೆಬ್ರವರಿ ತಿಂಗಳ ಹುಣ್ಣಿಮೆ ಸಂದರ್ಭದಲ್ಲಿ ಮಾರ್ಕೆಪೂನಾವ್ ಎಂದು ಕರೆಯಲ್ಪಡುವ ವಿಶಿಷ್ಟ ಜಾತ್ರೆ ನಡೆಯುತ್ತದೆ. ಗ್ರಾಮದ ಧಾಡ್ ದೇವರ ದೇವಸ್ಥಾನದ ಬಳಿ ನಡೆಯುವ ಈ ಜಾತ್ರೆಯಲ್ಲಿ ಯುವಕರು ಸೂಜಿಯಿಂದ ದಾರ ಪೋಣಿಸಿಕೊಳ್ಳುವ ಮೂಲಕ ದೇವರಿಗೆ ಹರಕೆಯನ್ನು ಸಲ್ಲಿಸುತ್ತಾರೆ. ಅಲ್ಲದೆ ಯುವತಿಯರು, ನವ ವಿವಾಹಿತೆಯರು ದೇವರಿಗೆ ಸ್ಥಳೀಯವಾಗಿ ದೀವಜ್ ಎಂದು ಕರೆಯುವ 5 ಬತ್ತಿಯಿರುವ ದೀಪವನ್ನು ದೇವರಿಗೆ ಸೇವೆಯಾಗಿ ನೀಡುತ್ತಾರೆ.

ಇದನ್ನೂ ಓದಿ: Border- Gavaskar Trophy : ನಮ್ಮ ತಂಡಕ್ಕೆ ಆರ್​ ಅಶ್ವಿನ್​ ಭಯ ಎಂದ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್​

#image_title

ಹೆಣ್ಣುಮಕ್ಕಳಿಂದ ದೀವಜ್ ಸೇವೆ

ಗ್ರಾಮದ ಯುವತಿಯರು, ಸೊಸೆಯಾಗಿ ಗ್ರಾಮಕ್ಕೆ ಬಂದ ಸ್ತ್ರೀಯರು ಹಾಗೂ ಹರಕೆ ಹೊತ್ತುಕೊಂಡ ಮಹಿಳೆಯರು ದೀಪ ಸೇವೆಯನ್ನು ನೀಡುತ್ತಾರೆ. ಹೀಗೆ ದೀವಜ್ ನೀಡುವವರು ಜಾತ್ರೆಗೂ ಮುನ್ನಾ ದಿನ ಉಪವಾಸ ಇದ್ದು, ಮನೆಯಲ್ಲಿ ದೇವರಿಗೆ ಬೇಡಿಕೊಂಡು ದೀಪವನ್ನು ಇರಿಸುತ್ತಾರೆ. ಮರುದಿನ ಜಾತ್ರೆಯಂದು ಗ್ರಾಮದ ಧಾಡ್ ದೇವರ ದೇವಸ್ಥಾನಕ್ಕೆ ದೀಪವನ್ನು ತಲೆಯ ಮೇಲೆ ಹೊತ್ತು ತರಲಾಗುತ್ತದೆ. ಇಲ್ಲಿ ಪೂಜೆ ನಡೆದು ದೇವರ ಬಂಡಿ ಹೊರಡುವವರೆಗೆ ದೇವಸ್ಥಾನದ ಆವರಣದಲ್ಲೇ ದೀಪವನ್ನು ಇರಿಸಿಕೊಂಡು ಆರದಂತೆ ನೋಡಿಕೊಂಡು ಕುಳಿತುಕೊಳ್ಳಲಾಗುತ್ತದೆ. ಬಳಿಕ ಧಾಡ್ ದೇವಸ್ಥಾನದಿಂದ ಹೊರಡುವ, ಹೂವಿನಿಂದ ಸಿಂಗಾರಗೊಂಡ ಬಂಡಿಯೊಂದಿಗೆ ದೀಪವನ್ನು ಹೊತ್ತ ಮಹಿಳೆಯರು ಸುಮಾರು ಒಂದು ಕಿ.ಮೀ ದೂರವಿರುವ ದೇವತಿ ದೇವಿಯ ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲೇ ಸಾಗುತ್ತಾರೆ. ನಂತರ ಅಲ್ಲಿನ ದೇವತೆ ದೇವಿಗೆ ತಾವು ಹೊತ್ತು ತಂದ ದೀಪವನ್ನು ತೂಗಿ ಭಕ್ತಿಯಿಂದ ನಮಸ್ಕರಿಸಿ ದೀಪಗಳನ್ನು ಅಲ್ಲಿಯೇ ಇಟ್ಟು ಮರಳುತ್ತಾರೆ.

ವಿಶೇಷವಾಗಿ ಹರಕೆ ಹೊತ್ತವರು 10 ಬತ್ತಿಯ ದೀಪವನ್ನು ದೇವರಿಗೆ ಹರಕೆಯಾಗಿ ನೀಡುತ್ತಾರೆ. ಹೀಗೆ ನೀಡುವುದರಿಂದ ಮದುವೆಯಾದ ಮನೆಯಲ್ಲಿ ಯುವತಿಯರು ಉತ್ತಮವಾಗಿ ಜೀವನ ನಡೆಸುತ್ತಾರೆ ಎಂಬ ನಂಬಿಕೆಯಿದೆ ಎನ್ನುತ್ತಾರೆ ದೀವಜ್ ನೀಡಿದ ಭಕ್ತೆ ಆರತಿ ಪವಾರ.

ಇದನ್ನೂ ಓದಿ: Kiara Sidharth Wedding : ಮದುವೆ ಆದ ಮೇಲೆ ಕಿಯಾರಾ ಮತ್ತು ಸಿದ್ದಾರ್ಥ್‌ 70 ಕೋಟಿ ರೂ. ಬೆಲೆ ಬಾಳುವ ಬಂಗಲೆಗೆ ಶಿಫ್ಟ್‌?

#image_title

ಅವಿವಾಹಿತ ಯುವಕರಿಂದ ಸೇಲ್ ಸೇವೆ

ಈ ಜಾತ್ರೆಯಲ್ಲಿ ಹೆಣ್ಣುಮಕ್ಕಳು ದೀವಜ್ ನೀಡುವಂತೆ ಗಂಡು ಮಕ್ಕಳು ಅಂದರೆ ಅವಿವಾಹಿತ ಯುವಕರು ಸೇಲ್ ಸೇವೆಯನ್ನು ನೀಡುತ್ತಾರೆ. ಅಂದರೆ ಯುವಕರು, ಮಕ್ಕಳು ಹೊಕ್ಕುಳ ಬಳಿ ಸೂಜಿಯಿಂದ ದಾರವನ್ನು ಪೋಣಿಸಿಕೊಳ್ಳುವ ಸೇವೆಯಾಗಿದೆ. ಪ್ರೌಢಾವಸ್ಥೆಯ ಪೂರ್ವದಲ್ಲಿ ಗಂಡು ಮಕ್ಕಳು, ಮದುವೆಗೂ ಮುನ್ನ ಯುವಕರು ಹೊಕ್ಕಳ ಬಳಿ ದಾರ ಪೋಣಿಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಅಲ್ಲದೆ, ಮುಂದೆ ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ ಧೈರ್ಯವಾಗಿ ಎದುರಿಸಲು ಇದರಿಂದ ಸಹಾಯವಾಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ಯುವಕರು ಮತ್ತು ಮಕ್ಕಳು ಸೂಜಿ ಚುಚ್ಚಿಸಿಕೊಳ್ಳುವುದು ಇಲ್ಲಿನ ವಾಡಿಕೆಯಾಗಿದೆ. ಹೀಗೆ ಚುಚ್ಚಿಸಿಕೊಂಡಲ್ಲಿ ಮಾತ್ರ ಅವರು ಮದುವೆಯಾಗುವ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ ಎನ್ನುವುದು ಇಲ್ಲಿನವರ ನಂಬಿಕೆಯಾಗಿದೆ. ಅದರಂತೆ ಈ ಬಾರಿ 10ಕ್ಕೂ ಅಧಿಕ ಯುವಕರು ಹಾಗೂ ಮಕ್ಕಳು ಅರ್ಚಕರಿಂದ ದಾರವನ್ನು ಪೋಣಿಸಿಕೊಂಡು ಹರಕೆ ಅರ್ಪಿಸಿದರು.

#image_title

ಇದನ್ನೂ ಓದಿ: KPTCL Recruitment : ಎಂಜಿನಿಯರ್‌ ನೇಮಕದಲ್ಲಿ ಕನ್ನಡಿಗರಿಗೆ ಅನ್ಯಾಯ; ಅಭ್ಯರ್ಥಿಗಳ ದೂರು

ಪುರಾತನ ಕಾಲದಿಂದ ನಡೆದು ಬರುತ್ತಿರುವ ಈ ಜಾತ್ರೆಗೆ ನೆರೆಯ ರಾಜ್ಯ ಗೋವಾ, ಮಹಾರಾಷ್ಟ್ರ, ಮುಂಬೈ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳ ಕಾಲ ಜಾತ್ರೆ ಸರಳವಾಗಿ ನಡೆದಿತ್ತು. ಈ ಬಾರಿ ಯಾವುದೇ ಆತಂಕ ಇಲ್ಲದ ಹಿನ್ನೆಲೆಯಲ್ಲಿ ರಾಜ್ಯ, ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡಿದ್ದು, ಜಾತ್ರೆ ವಿಜೃಂಭಣೆಯಿಂದ ಜರುಗಿದೆ ಎನ್ನುತ್ತಾರೆ ಸ್ಥಳೀಯರಾದ ಸತೀಶ ನಾಯ್ಕ .

ಇದನ್ನೂ ಓದಿ: Turkey Earthquake: ಟರ್ಕಿಯಲ್ಲಿ ಎರಡನೇ ಬಾರಿಗೆ ಕಂಪಿಸಿದ ಭೂಮಿ, ಮೃತರ ಸಂಖ್ಯೆ 1400ಕ್ಕೆ ಏರಿಕೆ

Exit mobile version