Site icon Vistara News

Ganesha Chathurhti : ಮುಂಬಯಿಯ ಈ ಗಣೇಶ ಜಗತ್ತಿಗೇ ಶ್ರೀಮಂತ; ಮೈಮೇಲೆ ಇದೆ 69 ಕೆ.ಜಿ ಚಿನ್ನ, 336 ಕೆ. ಜಿ ಬೆಳ್ಳಿ

GSB Ganesh Mandal

ಮುಂಬಯಿ: ಸೆಪ್ಟೆಂಬರ್ 19ರಂದು ಗಣೇಶ ಚತುರ್ಥಿ (Ganesha Chathurhti) ಹಬ್ಬ ದೇಶಾದ್ಯಂತ ನಡೆಯಲಿದೆ. ಕರ್ನಾಟಕದಲ್ಲಿ ಸೋಮವಾರವೇ ಈ ಗಣೇಶ ಹಬ್ಬದ ಸಡಗರ ಆರಂಭಗೊಡಿದೆ. ದೇಶದ ನಾನಾ ಭಾಗಗಳಲ್ಲಿ ಬೃಹತ್ ಸಾರ್ವಜನಿಕ ಗಣೇಶೋತ್ಸವಗಳು ನಡೆಯಲಿವೆ. ಅದರಲ್ಲೂ ಮುಂಬಯಿ ಮಹಾನಗರ ಸಾರ್ವಜನಿಕ ಗಣೇಶೋತ್ಸವದ ವಿಚಾರಕ್ಕೆ ಬಂದಾಗ ವಿಶ್ವ ಪ್ರಸಿದ್ಧ. ಅದರಲ್ಲೂ ಇಲ್ಲಿನ ಗೌಡ್ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸೇವಾ ಮಂಡಲ್ ಹೆಚ್ಚು ಜನಪ್ರಿಯ. ಇಲ್ಲಿನ ಗಣಪತಿ ವಿಶ್ವದ ಅತ್ಯಂತ ಶ್ರೀಮಂತ ಗಣೇಶ ಮೂರ್ತಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದು, ಆ ಖ್ಯಾತಿಯನ್ನೂ ಈ ವರ್ಷ ಇನ್ನಷ್ಟು ಹಿಗ್ಗಿಸಿಕೊಂಡಿದೆ. ಮಂಡಲ್​ ನೀಡಿರುವ ಮಾಹಿತಿ ಪ್ರಕಾರ ಈ ವರ್ಷ ಪೂಜೆ ಮಾಡಲಾಗುವ ಗಣೇಶನ ಮೂರ್ತಿ ಮೇಲೆ 69 ಕೆ. ಜಿ ಬಂಗಾರ ಹಾಗೂ 336 ಕೆ. ಜಿ ಚಿನ್ನ ಇರಲಿದೆಯಂತೆ. ಹೀಗಾಗಿ ಶ್ರಿಮಂತ ಗಣೇಶ ಎಂಬ ಖ್ಯಾತಿ ಪಡೆದುಕೊಂಡಿದೆ.

ಇಲ್ಲಿ ಪೂಜೆ ಮಾಡಲಾಗುವ ಗಣೇಶನನ್ನು ಪ್ರತಿ ವರ್ಷಗೂ ಚಿನ್ನ ಮತ್ತು ಬೆಳ್ಳಿ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಅಂತೆಯೇ ಕಿಂಗ್ಸ್ ವೃತ್ತದಲ್ಲಿರುವ ಸ್ಥಾಪನೆಯಾಗುವ ಮೂರ್ತಿ ಪ್ರತಿವರ್ಷ ದಾಖಲೆಯ ಎತ್ತರದ ಬೃಹತ್ ಗಣೇಶ ವಿಗ್ರಹಗಳನ್ನು ಸ್ಥಾಪಿಸುತ್ತಿದೆ. ಜಿಎಸ್​ಬಿ ಮಂಡಲ್ ಈ ವರ್ಷ ತನ್ನ 69 ನೇ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ 69 ಕೆ.ಜಿ ಚಿನ್ನವನ್ನು ಮೂರ್ತಿಗೆ ತೊಡಿಸಲು ಮುಂದಾಗಿದ್ದಾರೆ.

ಈ ಗಣೇಶನಿಗೆ 360.45 ಕೋಟಿ ವಿಮೆ

ಜಿಎಸ್​ಬಿ ಮಂಡಲ್​ ಗಣೇಶನಿಗೆ 69 ಕೆ.ಜಿ ಚಿನ್ನ ಮತ್ತು 336 ಕೆ.ಜಿ ಬೆಳ್ಳಿ ಆಭರಣಗಳಿಂದ ಅಲಂಕಾರ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಬೃಹತ್ ವಿಗ್ರಹಗಳ ಹೊರತಾಗಿ, ಗಣಪತಿ ಮಂಡಲ್ ಪ್ರತಿವರ್ಷ ಗಣೇಶ ಚತುರ್ಥಿ ಹಬ್ಬಕ್ಕಾಗಿ ಭಾರೀ ಮೊತ್ತದ ವಿಮೆಯನ್ನು ಮಾಡುವ ಮೂಲಕ ಖ್ಯಾತಿ ಪಡೆದಿದೆ. ಈ ವರ್ಷ, ಮಂಡಲ್ 360.45 ಕೋಟಿ ರೂ.ಗಳ ವಿಮಾ ಭದ್ರತೆ ತೆಗೆದುಕೊಂಡಿದೆ ಎಂದು ಜಿಎಸ್​ಬಿ ಸೇವಾ ಮಂಡಲದ ಉಪಾಧ್ಯಕ್ಷ ರಾಘವೇಂದ್ರ ಜಿ ಭಟ್ ತಿಳಿಸಿದ್ದಾರೆ.

ಜಿಎಸ್ಬಿ ಸೇವಾ ಮಂಡಲ್ ಹಿಂದಿನ ವರ್ಷ 316.40 ಕೋಟಿ ರೂ.ಗಳ ವಿಮೆ ಖರೀದಿಸಿತ್ತು. ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳಿಗೆ 31.97 ಕೋಟಿ ರೂ.ಗಳ ವಿಮಾ ರಕ್ಷಣೆಯನ್ನು ಒಳಗೊಂಡಿದ್ದರೆ, ಉಳಿದವು ಪೆಂಡಾಲ್, ಸದಸ್ಯರು ಮತ್ತು ಸಂದರ್ಶಕರಿಗೆ ಮಾಡಿಸಿರುವ ವಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.
ವಿಮಾ ರಕ್ಷಣೆಯ ಹೊರತಾಗಿ, ರಾಘವೇಂದ್ರ ಜಿ ಭಟ್ ಅವರು ಪೆಂಡಾಲ್ ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಹೇಳಿದ್ದಾರೆ. ಈ ವರ್ಷ ನಾವು ರಾಷ್ಟ್ರಕ್ಕಾಗಿ ಎರಡು ದೊಡ್ಡ ಹವನಗಳನ್ನು ಆಯೋಜಿಸುತ್ತೇವೆ. ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ಮತ್ತು ಚಂದ್ರಯಾನ ಮತ್ತು ಇಸ್ರೋದ ಯಶಸ್ಸಿಗಾಗಿ ವಿಘ್ನೇಶ್ವರನಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಭಟ್ ಹೇಳಿದ್ದಾರೆ.

ಇದನ್ನೂ ಓದಿ : Ganesha Chaturthi : ಬಣ್ಣ ಬಳಸದೆ ಸಿರಿಧಾನ್ಯದಿಂದಲೇ ಕಲರ್‌ಫುಲ್‌ ಗಣಪನ ಕ್ರಿಯೇಟ್‌ ಮಾಡಿದ ಹಾವೇರಿಯ ಗಣೇಶ

ಈ ವರ್ಷ, ನಾವು ಎಲ್ಲಾ ಸಂದರ್ಶಕರಿಗೆ ಡಿಜಿಟಲ್ ಮುಖ ಗುರುತಿಸುವಿಕೆಯನ್ನು ವ್ಯವಸ್ಥೆಯನ್ನು ಹೊಂದಿದ್ದೇವೆ. ಎಲ್ಲಾ ದೇಣಿಗೆಗಳನ್ನು ಡಿಜಿಟಲ್ ರೂಪದಲ್ಲಿ ಸ್ವೀಕರಿಸುವ ಏಕೈಕ ಮಂಡಲ ನಮ್ಮದು. ನಮ್ಮ ದಾನಿಗಳು ಕ್ಯೂಆರ್ ಕೋಡ್ನೊಂದಿಗೆ ಇ-ರಸೀದಿಗಳನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.

ಜಿಎಸ್ಬಿ ಮಂಡಲ್​​ನ ಪ್ರಸಿದ್ಧ ಪೆಂಡಾಲ್ ಜೊತೆಗೆ, ಮುಂಬೈನ ಲಾಲ್ಬಾಗ್ ಪ್ರದೇಶದಲ್ಲಿರುವ ಲಾಲ್ಬಾಗ್ಚಾ ರಾಜನ ವಿಗ್ರಹವನ್ನು ಸಹ ಇತ್ತೀಚೆಗೆ ಅನಾವರಣಗೊಳಿಸಲಾಗಿದೆ. ಇತ್ತೀಚೆಗೆ ನಿಧನರಾದ ಖ್ಯಾತ ಬಾಲಿವುಡ್ ಕಲಾ ನಿರ್ದೇಶಕ ನಿತಿನ್ ದೇಸಾಯಿ ವಿನ್ಯಾಸಗೊಳಿಸಿದ ಪೆಂಡಾಲ್ ನಲ್ಲಿ 12 ಅಡಿ ಗಣೇಶನನ್ನು ಸ್ಥಾಪಿಸಲಾಗಿದೆ. ಲಾಲ್ಬಾಗ್ ಪೆಂಡಾಲ್ ನಿತಿನ್ ದೇಸಾಯಿ ಅವರ ಕೊನೆಯ ಆರ್ಟ್​ ವರ್ಕ್​ ಎಂದು ಹೇಳಲಾಗುತ್ತದೆ.

Exit mobile version