ಬೆಂಗಳೂರು: ನವರಾತ್ರಿ (Navaratri) ಸಂಭ್ರಮ ಆರಂಭವಾಗಿದೆ. ಜತೆಗೆ ಮಕ್ಕಳು ಪರೀಕ್ಷೆ ಮುಗಿದು ನಿರಾಳರಾಗಿದ್ದಾರೆ. ಹಬ್ಬದ ಹಿನ್ನಲೆಯಲ್ಲಿ ಸಾಲು ಸಾಲು ರಜೆಯೂ ಬರಲಿದೆ. ಹೀಗಾಗಿ ಇದು ಪ್ರವಾಸ ಕೈಗೊಳ್ಳಲು ಪ್ರಸಕ್ತ ಕಾಲವೂ ಹೌದು. ಈ ರಜೆಯಲ್ಲಿ ನೀವು ನೋಡಬಹುದಾದ, ನೋಡಲೇಬೇಕಾದ ಪ್ರವಾಸಿ ತಾಣಗಳ ಪರಿಚಯ ಇಲ್ಲಿದೆ.
ಕೊಡಗು-ಕರ್ನಾಟಕ
ಭಾರತದ ಸ್ಕಾಟ್‌ಲ್ಯಾಂಡ್ ಎಂದು ಕರೆಯಲ್ಪಡುವ ಕೊಡಗು ನೀವು ಭೇಟಿ ಕೊಡಲೇಬೇಕಾದ ಪ್ರವಾಸಿ ತಾಣಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಬೆಟ್ಟಗುಡ್ಡ, ಕಾಫಿ ತೋಟ, ಗದ್ದೆ, ಹಸುರು ನೋಟ ಎಂತಹವರ ಗಮನವನ್ನೂ ಸೆಳೆಯುತ್ತದೆ. ಅದರಲ್ಲೂ ಮಂಜು ಮುಸುಕಿದಾಗ ಕೊಡಗಿನ ನೋಟವೇ ಅದ್ಭುತ. ಇತಿಹಾಸದ ಕಥೆ ಹೇಳುವ ಕೋಟೆ, ಅರಮನೆ, ನಿಸರ್ಗ ಸೌಂದರ್ಯದ ರಾಜಾಸೀಟ್, ಧುಮುಕುವ ಅಬ್ಬಿ ಜಲಪಾತ ಎಲ್ಲವೂ ಪ್ರವಾಸಿಗರನ್ನು ಮೋಡಿ ಮಾಡುತ್ತವೆ. ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೆ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತೆ. ಅದರಲ್ಲೂ ಇತ್ತೀಚೆಗೆ ಮಡಿಕೇರಿ ಹೊರವಲಯದ ಉಡೋತ್‌ನಲ್ಲಿ 31 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಪ್ರವಾಸಿಗರಿಗಾಗಿ ತೆರೆದಿದ್ದು, ಹೊಸ ಆಕರ್ಷಣೆಯಾಗಿದೆ. ಅಲ್ಲದೆ ಕುಶಾಲನಗರ ತಾಲೂಕಿನ ದುಬಾರೆ ಸಾಕಾನೆ ಶಿಬಿರ ಕೂಡ ಎಲ್ಲ ವಯೋಮಾನದವರೂ ಇಷ್ಟಪಡುವ ತಾಣ. ಕಾವೇರಿ ಉಗಮ ಸ್ಥಾನ ತಲಕಾವೇರಿ, ಬೈಲಕುಪ್ಪೆ ಗೋಲ್ಡನ್ ಟೆಂಪಲ್ ಮುಂತಾದ ಕಡೆ ಭೇಟಿ ನೀಡಬಹುದು.
ಮುನ್ನಾರ್-ಕೇರಳ
ದೇವರ ಸ್ವಂತ ನಾಡು ಕೇರಳದಲ್ಲಿ ಹಲವು ನಿಸರ್ಗದತ್ತ ಪ್ರವಾಸಿ ತಾಣಗಳಿವೆ. ಆ ಪೈಕಿ ಮುನ್ನಾರ್ ಕೂಡ ಒಂದು. ಇದು ದೇಶದಲ್ಲೇ ಸುಂದರ ಗಿರಿಧಾಮ. ಸಮುದ್ರ ಮಟ್ಟದಿಂದ ಸುಮಾರು 1,500 ಮೀಟರ್ ಎತ್ತರದಲ್ಲಿರುವ ಮುನ್ನಾರ್ ಮಬ್ಬು ಮಂಜು, ರಮಣೀಯ ಕಣಿವೆಗಳು, ಹಲವಾರು ತೊರೆಗಳು, ಬೃಹತ್ ಜಲಪಾತಗಳು, ವಿಸ್ತಾರವಾದ ಚಹಾ ತೋಟಗಳಿಂದ ಕೂಡಿ ಸ್ವರ್ಗದಂತೆ ಭಾಸವಾಗುತ್ತದೆ. ಎತ್ತ ನೋಡಿದರೂ ಹಸಿರು ಕಣ್ಣಿಗೆ ತಂಪು, ಮನಸ್ಸಿಗೆ ನೆಮ್ಮದಿ ತರುತ್ತದೆ. ಇಲ್ಲಿಗೆ ಸಮೀಪದಲ್ಲಿರುವ ಅಟುಕ್ಕಾಡ್ತ, ಲಕ್ಕಂ ಮತ್ತು ನೈಮಕ್ಕಾಡು ಜಲಪಾತಗಳು ಪ್ರವಾಸಿಗರ ಹಾಟ್ ಸ್ಪಾಟ್. ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಚಹಾ ಬೆಳೆಯುವ ಪ್ರದೇಶ ಮುನ್ನಾರ್. ಕಾರ್ಖಾನೆಯ ಮಳಿಗೆಗಳಿಂದ ತಾಜಾ ಚಹಾವನ್ನೂ ಖರೀದಿಸಬಹುದು. ಇಲ್ಲಿನ ಅಣ್ಣುಮುಡಿ ಶಿಖರವು ದಕ್ಷಿಣ ಭಾರತದ ಅತಿ ಎತ್ತರದ ಪರ್ವತ. ಇದು ಸಮುದ್ರ ಮಟ್ಟದಿಂದ ಸುಮಾರು 8,842 ಅಡಿ ಎತ್ತರದಲ್ಲಿದೆ. ಇಲ್ಲಿನ ಸಲೀಂ ಅಲಿ ಪಕ್ಷಿಧಾಮಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬೇಡಿ.
ಪಚ್ಮರಿ- ಮಹಾರಾಷ್ಟ್ರ
ನಿಸರ್ಗ ರಮಣೀಯ ತಾಣಗಳಿಂದ ಸುತ್ತುವರಿದಿರುವ ಮಹಾರಾಷ್ಟ್ರ ಪಚ್ಮರಿಗೆ ನೀವು ಕುಟುಂಬ ಸಮೇತ ಭೇಟಿ ನೀಡಬಹುದು. ಅಕ್ಟೋಬರ್ ಇಲ್ಲಿಗೆ ಭೇಟಿ ನೀಡಲು ಪ್ರಶಸ್ತ ಸಮಯ. ಅಕ್ಟೋಬರ್ ಚಳಿಗಾಲದ ಆರಂಭ ಎಂದು ಪರಿಗಣಿಸಲಾಗುವುದರಿಂದ ಇದು ಅತ್ಯುತ್ತಮ ನೋಟ ನೀಡುತ್ತದೆ. ಇಲ್ಲಿಗೆ ಭೇಟಿ ನೀಡಿದರೆ ಬೀ ಫಾಲ್ಸ್, ಶ್ರೀ ಪಂಚ ಪಾಂಡವ್ ಗುಹೆಗಳು, ಸತ್ಪುರ ರಾಷ್ಟ್ರೀಯ ಉದ್ಯಾನ, ಸತ್ಪುರ ಹುಲಿ ಮೀಸಲು ಅರಣ್ಯಕ್ಕೂ ತೆರಳಬಹುದು. ಈ ತಾಣದಲ್ಲಿ 65ಕ್ಕೂ ಹೆಚ್ಚು ಜಲಪಾತಗಳಿವೆ ಎನ್ನುವುದು ವೈಶಿಷ್ಟ್ಯ. ಇದು ಪ್ರಕೃತಿ ಪ್ರಿಯರಿಗೆ ಮತ್ತು ಸಾಹಸ ಪ್ರಿಯರಿಗೆ ಸ್ವರ್ಗ.
ಲೇಹ್ & ಲಡಾಕ್
ಭಾರತದ ಇನ್ನೊಂದು ಸ್ವರ್ಗ ಸದೃಶ್ಯ ಸ್ಥಾನ. ಲಡಾಕ್‌ಗೆ ನವ ದೆಹಲಿಯಿಂದ ವಿಮಾನ ಪ್ರಯಾಣ ದರ 7,000 ರೂ. ಲೇಹ್ ಅರಮನೆ, ಪಾಂಗೊಂಗ್ ತ್ಸೋ, ಖರ್ದುಂಗ್ ಲಾ, ತ್ಸೊ ಮೋರಿ, ಮ್ಯಾಗ್ನೆಟಿಕ್ ಹಿಲ್, ಹೆಮಿಸ್ ರಾಷ್ಟ್ರೀಯ ಉದ್ಯಾನವನ ಇತ್ಯಾದಿ ಇಲ್ಲಿ ಭೇಟಿ ನೀಡಬಹುದಾದ ಸ್ಥಳಗಳಾಗಿವೆ. ಇದು ಒಂದು ಗಿರಿಧಾಮ. ಆದ್ದರಿಂದ ನೀವು ಬೆಚ್ಚಗಿನ ಬಟ್ಟೆಗಳನ್ನು ಧರಿಸಲು ಮರೆಯಬೇಡಿ.
ಜಮ್ಮು & ಕಾಶ್ಮೀರ
ಭಾರತದ ಭೂ ಸ್ವರ್ಗ ಜಮ್ಮು & ಕಾಶ್ಮೀರ. ಸೆಪ್ಟಂಬರ್ ನಂತರ ಇಲ್ಲಿಗೆ ಭೇಟಿ ನೀಡುವುದು ಪ್ರಶಸ್ತ ಸಮಯ. ಜಮ್ಮು ನಗರದ ಹೃದಯಭಾಗದಲ್ಲಿ ರಘುನಾಥ ಮಂದಿರ, ರಣವೀರೇಶ್ವರ ಮಂದಿರವಿದ್ದು ಆಸ್ತಿಕರ ಗಮನ ಸೆಳೆಯುತ್ತದೆ. ಬೆಟ್ಟದ ಮೇಲಿರುವ ಅಮರ್ ಮಹಲ್ ವಸ್ತು ಸಂಗ್ರಹಾಲಯ, ಬಾಹುಕೋಡೆ ಮತ್ತು ಉದ್ಯಾವನ ಆಕರ್ಷಕವಾಗಿದೆ. ಇನ್ನು ಕಾಶ್ಮೀರದಲ್ಲಿರುವ ಹಸಿರು ಹಿಮಾಚ್ಛಾದಿತ ಪೆಹೆಲ್ಗಾಮ್ ಶಿಖರವನ್ನು ಕಣ್ತುಂಬಿಕೊಳ್ಳಲೇಬೇಕಾದ ತಾಣ. ಇದು 7,200 ಅಡಿ ಎತ್ತರದಲ್ಲಿದೆ. ಲಿಡರ್ ನದಿಯ ದಡದಲ್ಲಿರುವ ಇದನ್ನು ಕುರುಬರ ತಾಣವೆಂದೂ ಕರೆಯುತ್ತಾರೆ. ಇಲ್ಲಿನ ತುಲಿಯಾನ್ ಸರೋವರವೂ ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಒಟ್ಟಿನಲ್ಲಿ ಪೆಹೆಲ್ಗಾಮ್‌ನಲ್ಲಿ ಅನೇಕ ಹಸಿರು ಕಣಿವೆಗಳಿವೆ. ಅಲ್ಲದೆ ಕೊಲಹೊ, ಚಂದನವಾರಿ ಕಣಿವೆಯೂ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
ಬಿರ್ ಬಿಲ್ಲಿಂಗ್- ಹಿಮಾಚಲ ಪ್ರದೇಶ
ಅಕ್ಟೋರ್‌ನಲ್ಲಿ ಹಿಮಾಚಲ ಪ್ರದೇಶದ ಬಿರ್ ಬಿಲ್ಲಿಂಗ್‌ಗೆ ಭೇಟಿ ನೀಡಲು ಉತ್ತಮ ಸಮಯ. ಸಾಹಸ ಪ್ರೇಮಿಗಳು ಪ್ಯಾರಾಗ್ಲೈಡಿಂಗ್, ಕ್ಯಾಂಪಿಂಗ್, ಪಾದಯಾತ್ರೆ ಮತ್ತು ಇತರ ಚಟುವಟಿಕೆಗಳಿಗಾಗಿ ಈ ಸ್ಥಳಗಳಿಗೆ ಭೇಟಿ ನೀಡಬಹುದು. ಪ್ರವಾಸಿಗರ ಅತ್ಯಂತ ಬೇಡಿಕೆಯ ತಾಣಗಳಲ್ಲಿ ಒಂದು. ಇದನ್ನು ಭಾರತದ ಪ್ಯಾರಾಗ್ಲೈಡಿಂಗ್ ರಾಜಧಾನಿ ಎಂದೇ ಕರೆಯುಲಾಗುತ್ತದೆ. ಜೋಗಿಂದರ್ ನಗರ ಕಣಿವೆಯ ಪಶ್ಚಿಮದಲ್ಲಿ ಈ ಗ್ರಾಮವಿದೆ. ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಟಿಬೆಟಿಯನ್ನರು ವಾಸವಾಗಿದ್ದಾರೆ. ಟಿಬೆಟಿಯನ್ ದೇಗುಲಗಳು, ಮಠಗಳಿಗೂ ಬಿರ್ ಬಿಲ್ಲಿಂಗ್ ಪ್ರಸಿದ್ಧ. ಇನ್ನು ಚಾರಣಕ್ಕೂ ಇಲ್ಲಿ ಸಾಕಷ್ಟು ಅವಕಾಶಗಳಿವೆ. ಇಲ್ಲಿನ ಸುಂದರ ಪರಿಸರ ಎಲ್ಲರ ಗಮನ ಸೆಳೆಯುತ್ತದೆ.
ಜೀರೊ ಕಣಿವೆ- ಅರುಣಾಚಲ ಪ್ರದೇಶ
ಜಿರೋ ಕಣಿವೆ ಅರುಣಾಚಲ ಪ್ರದೇಶದ ಒಂದು ಗಿರಿಧಾಮವಾಗಿದ್ದು, ಗುಡ್ಡಗಾಡು ಪ್ರದೇಶಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿ. ಇಲ್ಲಿ ಪ್ರವಾಸಿಗರು ಪ್ಯಾರಾಗ್ಲೈಡಿಂಗ್, ಕ್ಯಾಂಪಿಂಗ್, ರಿವರ್ ರಾಫ್ಟಿಂಗ್, ಬೀಚ್ ವಾಲಿಬಾಲ್ ಮತ್ತು ಆಂಗ್ಲಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದು. ಇಲ್ಲಿರುವ ಶಿವಲಿಂಗ ಸುಮಾರು 25 ಅಡಿ ಎತ್ತರ ಮತ್ತು 22 ಅಡಿ ಅಗಲವಿದೆ, ನಾಲ್ಕು ಅಡಿಯಷ್ಟು ಭೂಮಿಯೊಳಗೆ ನಿರ್ಮಾಣವಾಗಿದೆ. ಇಲ್ಲಿನ ಹಸಿರು ಕಣಿವೆಗಳನ್ನು ನೋಡಲು ಅಕ್ಟೋಬರ್ ಮತ್ತು ಮಾರ್ಚ್ ನಡುವಿನ ಚಳಿಗಾಲದ ಅವಧಿಯಲ್ಲಿ ಭೇಟಿ ನೀಡುವುದು ಅತ್ಯಂತ ಸೂಕ್ತ. ಇಲ್ಲಿಗೆ ಭೇಟಿ ನೀಡುವಾಗ ಬೆಚ್ಚಗಿನ ಉಡುಪು ಒಯ್ಯುವುದು ಮುಖ್ಯ.
ಇದನ್ನೂ ಓದಿ: Navaratri: ದಸರಾ ರಜೆಯಲ್ಲಿ ಇಲ್ಲೆಲ್ಲ ಸುತ್ತಾಡಿ; ಕೆಎಸ್‌ಆರ್‌ಟಿಸಿ ಟೂರ್ ಪ್ಯಾಕೇಜ್ ಘೋಷಣೆ