Site icon Vistara News

Navaratri: ಪಶ್ಚಿಮ ಬಂಗಾಳದಲ್ಲಿ ತೆರೆದುಕೊಳ್ಳುವ ನವರಾತ್ರಿ ವೈಭವ

durga west bengal

ಬೆಂಗಳೂರು: ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾದ ನವರಾತ್ರಿ (Navaratri) ಆರಂಭವಾಗಿದೆ. ದೇವಿಯ 9 ರೂಪಗಳನ್ನು 9 ದಿನ ಆರಾಧಿಸಲಾಗುತ್ತದೆ. ಕರ್ನಾಟಕ ಸೇರಿ ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ತುಂಬಾ ವಿಶೇಷವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದರಲ್ಲಿ ಭಾಗವಹಿಸಲು ದೇಶದ ವಿವಿಧ ಕಡೆಗಳಿಂದ, ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ.

ದೀಪಗಳಿಂದ ಅಲಂಕೃತವಾಗುವ ಬೀದಿಗಳು

ನವರಾತ್ರಿ ಬಂದರೆ ಸಾಕು ಪಶ್ಚಿಮ ಬಂಗಾಳದ ಬೀದಿ ಬೀದಿಗಳು ದೀಪಗಳಿಂದ ಅಲಂಕೃತವಾಗುತ್ತವೆ. ಈ ಸಂದರ್ಭದಲ್ಲಿ ಎಲ್ಲಿ ನೋಡಿದರೂ ಆಕರ್ಷಕ ಬಣ್ಣದ ಪೆಂಡಾಲ್‌ಗಳಲ್ಲಿ ವಿವಿಧ ಆಯುಧಗಳೊಂದಿಗೆ ಅಲಂಕೃತಗೊಂಡ ದುರ್ಗಾ ದೇವಿಯನ್ನು ಕೂರಿಸಿ ಪೂಜಿಸುವುದು ಕಂಡು ಬರುತ್ತದೆ. ವಿವಿಧ ಬೃಹತ್ ಪೆಂಡಾಲ್‌ಗಳಲ್ಲಿ ದುರ್ಗಾ ಮಾತೆಯ ಜತೆಗೆ ಆಕೆಯ ಮಗ ಕಾರ್ತಿಕ ಮತ್ತು ಗಣೇಶನ ಮಣ್ಣಿನ ವಿಗ್ರಹಗಳನ್ನೂ ಸ್ಥಾಪಿಸಲಾಗುತ್ತದೆ. ನೃತ್ಯ ಪ್ರದರ್ಶನಗಳು, ನಾಟಕಗಳು, ದುರ್ಗಾ ದೇವಿ ಮತ್ತು ಮಹಿಷಾಸುರನ ದಂತಕಥೆಯ ಚಿತ್ರಣವನ್ನು ಒಳಗೊಂಡ ಹಲವಾರು ಸಾಂಸ್ಕೃತಿಕ ಉತ್ಸವಗಳನ್ನು ಪಶ್ಚಿಮ ಬಂಗಾಳದಾದ್ಯಂತ ಆಯೋಜಿಸಲಾಗುತ್ತದೆ.

ಉತ್ಸವದ ಕೊನೆಯ ದಿನದಂದು ದೇವಿಯ ವಿಗ್ರಹವನ್ನು ಭವ್ಯ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ನೀರಿನಲ್ಲಿ ವಿಸರ್ಜಿಸುವುದು ಸಂಪ್ರದಾಯ. ಹತ್ತನೇ ದಿನವನ್ನು ʼವಿಜಯದಶಮಿʼ ಅಥವಾ ʼದಸರಾʼ ಎಂದು ಕರೆಯಲಾಗುತ್ತದೆ. ವಿಜಯ ದಶಮಿಯನ್ನು ‘ಸಿದುರ್ ಖೇಲಾ’ ಎಂದೂ ಹೇಳುತ್ತಾರೆ. ಹಬ್ಬದ ಸಂದರ್ಭದಲ್ಲಿ ವಿವಾಹಿತ ಮಹಿಳೆಯರು ಕೆಂಪು, ಬಿಳಿ ಅಥವಾ ಹಳದಿ ಮತ್ತು ಕೆಂಪು ಸೀರೆಯನ್ನು ಮತ್ತು ಕುಂಕುಮ ಧರಿಸಿರುತ್ತಾರೆ. ಅಲ್ಲದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೋಲ್ಕತ್ತಾದಲ್ಲಿರುವ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ತೆರಳುತ್ತಾರೆ.

ಇತಿಹಾಸ

ಪಶ್ಚಿಮ ಬಂಗಾಳದಲ್ಲಿ ದುರ್ಗಾ ಆರಾಧನೆಗೆ ನೂರಾರು ವರ್ಷಗಳ ಇತಿಹಾಸವಿದೆ. ದಾಖಲೆಯ ಪ್ರಕಾರ ದುರ್ಗಾ ದೇವಿಯ ಮೊದಲ ಭವ್ಯ ಪೂಜೆಯನ್ನು 1500ರ ಉತ್ತರಾರ್ಧದಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ದಿನಾಜ್ಪುರ ಮತ್ತು ಮಾಲ್ಡಾದ ಭೂಮಾಲೀಕರು ಅಥವಾ ಜಮೀನ್ದಾರರು ಪಶ್ಚಿಮ ಬಂಗಾಳದಲ್ಲಿ ಮೊದಲ ದುರ್ಗಾ ಪೂಜೆಯನ್ನು ಪ್ರಾರಂಭಿಸಿದರು ಎಂದು ಜಾನಪದ ಕಥೆಗಳು ಹೇಳುತ್ತವೆ. ಮತ್ತೊಂದು ಮೂಲದ ಪ್ರಕಾರ ತಾಹೇರ್ಪುರದ ರಾಜಾ ಕಂಗ್ಶನಾರಾಯಣ್ ಅಥವಾ ನಾಡಿಯಾದ ಭಬಾನಂದ ಮಜುಂದಾರ್ 1606ರಲ್ಲಿ ಪಶ್ಚಿಮ ಬಂಗಾಳದಲ್ಲಿ ಮೊದಲ ಶಾರದಾ ಅಥವಾ ಶರತ್ಕಾಲದ ದುರ್ಗಾ ಪೂಜೆಯನ್ನು ಆಯೋಜಿಸಿದರು ಎನ್ನುವ ವಾದವೂ ಇದೆ.

ವೈಶಿಷ್ಟ್ಯ

ಈ ಹಬ್ಬವು ಮಹಾಲಯದೊಂದಿಗೆ ಪ್ರಾರಂಭವಾಗುತ್ತದೆ. ಈ ದಿನ ಹಿಂದೂಗಳು ಮರಣ ಹೊಂದಿದ ತಮ್ಮ ಹಿರಿಯರನ್ನು ನೆನಪಿಸಿಕೊಳ್ಳುತ್ತಾರೆ. ಜತೆಗೆ ಅಂದು ದುರ್ಗೆಯ ಆಗಮನವಾಗುತ್ತದೆ. ದುರ್ಗಾ ಪೂಜೆಯ ಮುಂದಿನ ಮಹತ್ವದ ದಿನವನ್ನು ಷಷ್ಠಿ ಎಂದು ಕರೆಯಲಾಗುತ್ತದೆ. ಏಳನೇ (ಸಪ್ತಮಿ), ಎಂಟನೇ (ಅಷ್ಟಮಿ) ಮತ್ತು ಒಂಬತ್ತನೇ (ನವಮಿ)ದಿನದಂದು ದುರ್ಗಾ, ಲಕ್ಷ್ಮೀ, ಸರಸ್ವತಿ, ಗಣೇಶ ಮತ್ತು ಕಾರ್ತಿಕೇಯರೊಂದಿಗೆ ಪೂಜಿಸಲಾಗುತ್ತದೆ. ದುರ್ಗಾ ಆರತಿ ಇಲ್ಲಿನ ವಿಶೇಷ. ಬೆಳಗ್ಗೆ ಮತ್ತು ಸಂಜೆ ದುರ್ಗೆಯ ಪೂಜೆ ಮತ್ತು ಆರತಿಯನ್ನು ಮಾಡಲಾಗುತ್ತದೆ. ವಿವಿಧ ರೀತಿಯ ನೈವೇದ್ಯಗಳನ್ನು ದೇವಿಗೆ ಇಟ್ಟು ಬಳಿಕ ಅದನ್ನು ವಿತರಿಸಲಾಗುತ್ತದೆ. ಪ್ರತಿಷ್ಠಾಪಿಸಲಾಗಿದ್ದ ದುರ್ಗಾ ದೇವಿಯ ಮಣ್ಣಿನ ಪ್ರತಿಮೆಗಳನ್ನು ವಿಜಯದಶಮಿಯಂದು(ಹತ್ತನೇ ದಿನ) ವೈಭವದ ಮೆರವಣಿಗೆ ಮೂಲಕ ಸಾಗಿಸಿ ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಮೆರವಣಿಗೆ ವೇಳೆ ಅನೇಕರು ತಮ್ಮ ಮುಖಕ್ಕೆ ಕುಂಕುಮ ಬಳಿದಿರುತ್ತಾರೆ ಮತ್ತು ಕೆಂಪು ಬಟ್ಟೆಗಳನ್ನು ಧರಿಸಿರುತ್ತಾರೆ.

ಇದನ್ನೂ ಓದಿ: Navaratri: ʼವಿಸ್ತಾರ ನವವರ್ಣʼದ 2ನೇ ದಿನ ಶ್ವೇತ ವಸ್ತ್ರಧಾರಿಗಳಾದ ನೀರೆಯರು

Exit mobile version