ಬೆಂಗಳೂರು: ಹಳೇ ನೆನಪುಗಳ ಬುತ್ತಿಯನ್ನು ಹೊತ್ತ ಸಿಟಿ ಮಂದಿ 2024ರ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಹೊಸ ವರ್ಷದ ಮೊದಲ ದಿನ ತಮ್ಮಿಷ್ಟದ ದೇವರ ದರ್ಶನ ಮಾಡಿ ಇಡೀ ವರ್ಷಕ್ಕೆ ಎನರ್ಜಿ ಬೂಸ್ಟರ್ ಪಡೆದುಕೊಂಡಿದ್ದಾರೆ. ಹಾಗಾದರೆ ನಗರದ ದೇಗುಲದಲ್ಲಿ ಹೇಗಿತ್ತು ಹೊಸ ವರ್ಷದ ಸಂಭ್ರಮ..? ಬನ್ನಿ ನೋಡೋಣ.
2023ರ ವರ್ಷ ಅದೆಷ್ಟು ವೇಗವಾಗಿ ಕಳೆದು ಹೋಯಿತು. ಮೊನ್ನೆ ಮೊನ್ನೆಯಷ್ಟೇ ಚಂದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಓಡಾಡಿ, ಇತ್ತ ಫ್ರೀ ಬಸ್‌ನಲ್ಲಿ ಮಹಿಳೆಯರು ಜಾಲಿ ರೈಡ್ ಮುಗಿಸಿ, ಅಕೌಂಟ್‌ಗೆ 2000 ರೂ. ಬಿತ್ತಲ್ಲ ಎಂದು ನಾರಿಯರು ಖುಷಿ ಪಡುವಾಗಲೇ, ಕೋವಿಡ್ ಕೂಡ ಮತ್ತೆ ವಕ್ಕರಿಸಿಕೊಂಡಿದೆ. ಕಳೆದ ವರ್ಷ ಅದೆಷ್ಟು ಬೇಗ ಕಳೆದುಹೋಯಿತಪ್ಪಾ ಎನ್ನುತ್ತಲೇ 2024ರ ಹೊಸ ವರ್ಷವನ್ನು ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಹೊಸ ವರ್ಷದಂದು ದೇವರ ದರ್ಶನ ಮಾಡಿ ಸಿಟಿ ಮಂದಿ ತಮ್ಮ ದಿನವನ್ನು ಶುರು ಮಾಡಿದರು.
ಹೊಸ ವರ್ಷದ ಈ ಶುಭ ದಿನದಂದು ಬಹುತೇಕ ದೇವಾಲಯಗಳು ಭಕ್ತರಿಂದ ಭರ್ತಿಯಾಗಿತ್ತು. ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಕಾಲಿಡಲು ಜಾಗವಿಲ್ಲದಷ್ಟು ಭಕ್ತರು ತುಂಬಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರು ಮಾಸ್ಕ್ ಧರಿಸಿ ಬಂದಿದ್ದರು. ಹೊಸ ವರ್ಷದಂದೇ ಧನುರ್ಮಾಸ ನಡೆಯುತ್ತಿರುವುದರಿಂದ ಹಲವು ದೇವಾಲಯಗಳು ಬೆಳಗಿನ ಜಾವ 4 ಗಂಟೆಗೆ ತೆರೆದಿತ್ತು. ನಗರದ ಪ್ರಸಿದ್ಧ ದೇಗುಲಗಳಾದ ಬನಶಂಕರಿ, ಇಸ್ಕಾನ್, ಟಿಟಿಡಿ ದೇವಸ್ಥಾನ, ಗಾಳಿ ಆಂಜನೇಯ ದೇವಸ್ಥಾನ, ಕೋಟೆ ವೆಂಕಟರಮಣ, ಗವಿ ಗಂಗಾಧರೇಶ್ವರ ದೇವಾಲಯ ಸೇರಿದಂತೆ ಹಲವೆಡೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆಯಿಂದಲೇ ದೇವಾಲಯಗಳಿಗೆ ತೆರಳಿದ ಭಕ್ತರು ಕುಟುಂಬ ಸಮೇತರಾಗಿ ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ಈ ಹೊಸ ವರ್ಷದಲ್ಲಿ ಮತ್ತೆ ಕೋವಿಡ್ ನಂತಹ ಸಂಕಷ್ಟ ಪರಿಸ್ಥಿತಿ ಮರಳಿ ಬಾರದಿರಲಿ, ಸರ್ವರಿಗೂ ಆರೋಗ್ಯ, ಆಯಸ್ಸು, ನೆಮ್ಮದಿ ಲಭಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಹೊಸ ವರ್ಷದ ಪ್ರಯುಕ್ತ ಕೆಲ ಭಕ್ತರು ಬನಶಂಕರಿ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಕಳೆದ ವರ್ಷ ಮಳೆ ಬರದೇ ರೈತರು ಸಂಕಷ್ಟವನ್ನು ಎದುರಿಸಿದರು, ಹೀಗಾಗಿ ಉತ್ತಮ ಮಳೆಯಾಗಲಿ ಎಂದು ಬನಶಂಕರಿ ದೇವಿಗೆ ಕೇಳಿಕೊಂಡರು. ಹೊಸ ವರ್ಷದ ಕಾರಣಕ್ಕೆ ಇಂದು ಇಡೀ ದಿನ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಜತೆಗೆ ಅನ್ನದಾಸೋಹ ಭವನದಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಒಟ್ಟಾರೆ, ಹೊಸ ವರ್ಷದ ಮೊದಲ ದಿನ ದೇವರ ದರ್ಶನದೊಂದಿಗೆ ಕೆಲಸಗಳು ಆರಂಭಿಸಿದರೆ ವರ್ಷಪೂರ್ತಿ ಅಡೆತಡೆಯಿಲ್ಲದೆ ಕೆಲಸಗಳು ನಡೆಯುತ್ತವೆ ಎಂಬ ನಂಬಿಕೆ ಇದೆ. ಹೀಗಾಗಿ ಭಕ್ತರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ