ಬೆಂಗಳೂರು: ನಗರದ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ರಾಜೇಂದ್ರ ಸ್ಲಂ ನಿವಾಸಿಗಳಿಗೆ, “ಓಂ ಶಕ್ತಿʼʼ ಕ್ಷೇತ್ರ ಎಂದೇ ಪ್ರಸಿದ್ಧವಾಗಿರುವ ತಮಿಳುನಾಡಿನ ಮೇಲ್‌ಮರವತ್ತೂರಿನಲ್ಲಿರುವ ಅರಳ್‌ಮಿಗು ಆದಿಪರಾಶಕ್ತಿ ಸಿದ್ಧರ ಪೀಠಕ್ಕೆ ಪ್ರವಾಸ ಕೈಗೊಳ್ಳಲು (Om Shakthi Yatra) ಬಿಜೆಪಿ ಮುಖಂಡ ಶ್ರೀಧರ್ ರೆಡ್ಡಿ ಅವರು ಉಚಿತವಾಗಿ ಬಸ್‌ನ ವ್ಯವಸ್ಥೆ ಮಾಡಿದ್ದಾರೆ.
ಸುಮಾರು 300ಕ್ಕೂ ಹೆಚ್ಚು ಸ್ಲಂ ನಿವಾಸಿಗಳು ಈ ಪ್ರವಾಸ ಕೈಗೊಂಡಿದ್ದು, ಅವರಿಗೆ ಆರು ಕೆಎಸ್‌ಆರ್‌ಟಿಸಿ ಬಸ್‌ನ ವ್ಯವಸ್ಥೆ ಮಾಡಲಾಗಿದೆ. ಸಮಾನತೆಯನ್ನು ಸಾರುವ ರಕ್ತದ ಬಣ್ಣವಾದ ಕೆಂಪು ವರ್ಣದ ವಸ್ತ್ರ ಧರಿಸಿದ ಭಕ್ತರು ಈ ಯಾತ್ರೆ ಕೈಗೊಂಡಿದ್ದಾರೆ.
ಬೆಂಗಳೂರು ಕೋರಮಂಗಲದಿಂದ ಈ ಬಸ್‌ಗಳು ಹೊರಟಿವೆ. ಇದು ಎರಡು ದಿನಗಳ ಪ್ರವಾಸವಾಗಿದ್ದು, ಉಚಿತ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಈ ಪ್ರವಾಸ ಆಯೋಜಿಸಿರುವ ಬಿಟಿಎಂ ಲೇಔಟ್‌ನಲ್ಲಿ ಬಿಜೆಪಿಯ ಟಿಕೆಟ್ ಆಕಾಂಕ್ಷಿಯೂ ಆಗಿರುವ ಶ್ರೀಧರ್ ರೆಡ್ಡಿ ಅವರು ತಿಳಿಸಿದ್ದಾರೆ.
ಪ್ರತಿ ವರ್ಷ ಓಂ ಶಕ್ತಿ ತಾಯಿ ಸೇವೆ ಮಾಡುತ್ತಿದ್ದೇನೆ. 2017ರಿಂದಲೂ ಹೀಗೆ ಉಚಿತವಾಗಿ ಪ್ರವಾಸವನ್ನು ಏರ್ಪಡಿಸುತ್ತಿದ್ದು, ಆ ತಾಯಿ ಬಳಿ ಹೋಗುವುದಕ್ಕೆ ಆರ್ಥಿಕವಾಗಿ ಹಣವಿಲ್ಲದವರನ್ನ ಬಸ್ ಮಾಡಿ ಕಳುಹಿಸಿ ಕೊಡುತ್ತಿದ್ದೇನೆ. ಪ್ರತೀ ವರ್ಷ 25 ಬಸ್ ವ್ಯವಸ್ಥೆ ಮಾಡುತ್ತಿದ್ದು, ಅದರಂತೆ ಮೊದಲ ಹಂತವಾಗಿ ಈಗ 6 ಬಸ್ ವ್ಯವಸ್ಥೆ ಮಾಡಲಾಗಿದೆ. ಮುಂದೆ ಉಳಿದ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶ್ರೀಧರ್ ರೆಡ್ಡಿ ಅವರು ವಿವರಿಸಿದ್ದಾರೆ.
ಓಂ ಶಕ್ತಿ ತಾಯಿ ನೆಲೆಸಿರುವ ಜಾಗದಲ್ಲಿ 21 ಪುರುಷ ಹಾಗೂ ಮಹಿಳಾ ಸಿದ್ಧರು ಜೀವಂತ ಸಮಾಧಿಯಾಗಿದ್ದಾರೆ ಎಂಬ ನಂಬಿಕೆ ಇದೆ. ಮಹಿಳಾ ಸಿದ್ಧೆಯೊಬ್ಬರು ಇಲ್ಲಿ ಶಾಶ್ವತವಾಗಿ ನೆಲೆಸಿ ಭಕ್ತರನ್ನು ಪೊರೆಯುತ್ತಿದ್ದಾಳೆ ಎಂದು ಹೇಳಲಾಗುತ್ತಿದ್ದು, ಕರ್ನಾಟಕದಿಂದ ಸಾವಿರಾರು ಭಕ್ತರು ಪ್ರತಿ ವರ್ಷ ಡಿಸೆಂಬರ್‌ನಿಂದ ಫೆಬ್ರವರಿವರೆಗಿನ ಅವಧಿಯಲ್ಲಿ ಇಲ್ಲಿಗೆ ಯಾತ್ರೆ ಕೈಗೊಳ್ಳುತ್ತಾರೆ.
ಮಕ್ಕಳು, ದೊಡ್ಡವರು ಎಂಬ ವಯಸ್ಸಿನ ಭೇದ ಭಾವವಿಲ್ಲದೆ ಮಾಲೆ ಧರಿಸುತ್ತಾರೆ. ಓಂ ಶಕ್ತಿ ವ್ರತಧಾರಿಗಳು ಕೆಂಪು ಬಟ್ಟೆ ಧರಿಸುತ್ತಾರೆ. ಮಾಲೆ ಧರಿಸುವವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಭಕ್ತರು ಇಲ್ಲಿ ಸ್ವತಃ ದೇವಾಲಯದ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಬಹುದಾಗಿದ್ದು, ಭಕ್ತರ ಸಂಖ್ಯೆ ಹೆಚ್ಚಲು ಕಾರಣವಾಗಿದೆ.
ಬೆಂಗಳೂರಿನಿಂದ ಸಾವಿರಾರು ಮಂದಿ ಪ್ರತಿ ವರ್ಷ ಈ ಯಾತ್ರೆ ಕೈಗೊಳ್ಳುತ್ತಾರೆ. ಈ ಯಾತ್ರೆಯನ್ನು ಕೈಗೊಳ್ಳಲು ಆರ್ಥಿಕವಾಗಿ ಸಾಧ್ಯವಾಗದೇ ಇರುವವರನ್ನು ಗುರುತಿಸಿ, ತಾವು ಈ ಪ್ರವಾಸದ ವ್ಯವಸ್ಥೆ ಮಾಡುತ್ತಿರುವುದಾಗಿ ಶ್ರೀಧರ್ ರೆಡ್ಡಿ ಅವರು ಹೇಳಿದ್ದಾರೆ.
ಇದನ್ನೂ ಓದಿ | Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ?; ಇಲ್ಲಿದೆ ವರ್ಷ ಭವಿಷ್ಯ