Site icon Vistara News

ಪರಮ ತಪೋನಿಧಿ ಮಾನವ ಧರ್ಮದ ದೇದೀಪ್ಯ ಶ್ರೀ ಜಗದ್ಗುರು ವೀರಗಂಗಾಧರ ಭಗವತ್ಪಾದರು

Balehonnur Rambhapuri seer

| ನಿರಂಜನ ದೇವರಮನೆ, ಚಿತ್ರದುರ್ಗ
ಭಾರತ ಒಂದು ಪುಣ್ಯ ಭೂಮಿ, ಹಲವು ಧರ್ಮ ದರ್ಶನಗಳ ತವರೂರು. ಈ ನೆಲದ ಸಂಸ್ಕೃತಿ, ಪರಂಪರೆ ಹಾಗೂ ಆಚರಣೆಗಳು ಬಹು ವಿಶಿಷ್ಟ. ಇಂಥ ಸಮನ್ವಯ ನೆಲದಲ್ಲಿ ಆಚಾರ್ಯ ಶ್ರೇಷ್ಠರಾದ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಂದ ಸ್ಥಾಪನೆಗೊಂಡ ವೀರಶೈವ ಧರ್ಮ ಅತ್ಯಂತ ಪ್ರಾಚೀನ ಧರ್ಮವಾಗಿ ಸಕಲ ಜೀವಾತ್ಮರಿಗೆ ಸದಾ ಲೇಸನ್ನೇ ಬಯಸುವ ಮುಖೇನ ಭಾರತೀಯ ಧರ್ಮ ಸಂಸ್ಕೃತಿ ಪರಂಪರೆಯನ್ನು ಶ್ರೀಮಂತಗೊಳಿಸಿದೆ. ಅಲ್ಲದೆ ತನ್ನ ತತ್ವ-ಸಿದ್ದಾಂತಗಳನ್ನು ವಿಶ್ವವ್ಯಾಪ್ತಿಯಾಗಿ ಪಸರಿಸಿದೆ. ಇದರ ಪ್ರವರ್ತಕರಾದ ಪಂಚಪೀಠಾಚಾರ್ಯರು ನಾಡಿನಲ್ಲೆಡೆ ಸಂಚರಿಸಿ, ಉದಾತ್ತ ಮಾನವೀಯ ಮೌಲ್ಯಗಳನ್ನು ಪ್ರಸಾರಪಡಿಸುವುದರೊಂದಿಗೆ ಧಾರ್ಮಿಕ ಮತ್ತು ಸಾಮಾಜಿಕ ಸತ್ಕ್ರಾಂತಿಯನ್ನುಂಟುಮಾಡಿ ತಾವು ನಡೆದ ಸತ್ಯದ ಧರ್ಮದ ಮಾರ್ಗದಲ್ಲಿ ಜನತೆಯನ್ನು ಮುನ್ನಡೆಸಿ ಕೃತಾರ್ಥರಾಗಿದ್ದಾರೆ.

ಇಂತಹ ಪಂಚಪೀಠಗಳಲ್ಲಿ ಆಧ್ಯಪೀಠವಾದ ಶ್ರೀ ಮದ್ರರಂಭಾಪುರೀ ವೀರ ಸಿಂಹಾಸನ ಮಹಾಪೀಠವು ಸದಾ ಭಕ್ತರ ಅಭ್ಯುದಯಕ್ಕೆ ಶ್ರಮಿಸುವ ಮುಖೇನ ಅಹಿಂಸಾದಿ ಧ್ಯಾನ ಪರ್ಯಂತರ ದಶಧರ್ಮ ಸೂತ್ರಗಳನ್ನು ಸಾರಿ ಅಂಗಲಿಂಗವಾಗುವ, ಭವಿ ಭಕ್ತನಾಗುವ ಪರಿಯನ್ನು ತಿಳಿಸಿಕೊಟ್ಟಿದೆ. ಈ ಪೀಠ ಪರಂಪರೆಯಲ್ಲಿ ಅನೇಕ ಭಗವತ್ಪಾದರು ನೂರಾರು ಕ್ರಿಯಾತ್ಮಕ ಕಾರ್ಯಗಳನ್ನು ಮಾಡುವ ಮುಖೇನ ಭಕ್ತರ ಹೃನ್ಮಂದಿರಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ.

ಈ ಪೀಠದ ಭವ್ಯ ಪರಂಪರೆಯಲ್ಲಿ 119ನೇಯ ಪೀಠಾಧ್ಯಕ್ಷರಾಗಿ ಶ್ರೀ ರಂಭಾಪುರೀ ಪೀಠವನ್ನು ಅಲಂಕರಿಸಿ ಅದರ ಮಹತ್ವವನ್ನು ಮುಗಿಲೆತ್ತರಕ್ಕೆರಿಸಿದ ಕೀರ್ತಿ ಶ್ರೀ ಜಗದ್ಗುರು ವೀರಗಂಗಾಧರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರಿಗೆ ಸಲ್ಲುತ್ತದೆ.

ಇದನ್ನೂ ಓದಿ | Prerane Column : ದೇವರೆಂದರೆ ಲೈಫ್‌ ಇನ್ಶೂರೆನ್ಸ್‌ ಅಲ್ಲ, ನಿಮ್ಮನ್ನು ಕಾಯೋ ಸೈನಿಕನೂ ಅಲ್ಲ!

ಧಾರ್ಮಿಕ ಸಾಂಸ್ಕೃತಿಕ ಹಾಗೂ ವಾಣಿಜ್ಯ ನಗರಿ ಎಂದೇ ಪ್ರಸಿದ್ಧವಾಗಿರುವ ಹುಬ್ಬಳ್ಳಿ ಸೀಮೆಯ ಪಾಲಿಕೊಪ್ಪ ಗ್ರಾಮದ ಹಿರೇಮಠದ ವೇ|| ಅಡವಯ್ಯ ಮತ್ತು ಸಿದ್ದಮ್ಮನವರ ಪುಣ್ಯ ಗರ್ಭದಲ್ಲಿ 1903ರ ಏಪ್ರಿಲ್‌ 4ರಂದು ಜನಿಸಿ ಬಾಲ್ಯ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿ ಪಡೆದು ನಂತರ ಹುಬ್ಬಳ್ಳಿ ಕೋಟೆಕಲ್ ಹಾಗೂ ಕಮತಗಿಯ ಹುಚ್ಚೇಶ್ವರ ಮಠದಲ್ಲಿ ಸಂಸ್ಕೃತ ಮತ್ತು ವೇದಾಧ್ಯಯನ ಕೈಗೊಂಡು, ಸೊಲ್ಲಾಪುರ ವಾರದ ಮಲ್ಲಪ್ಪನವರ ಆಧ್ಯಾತ್ಮಿಕ ಪಾಠಶಾಲೆಯಲ್ಲಿ ನಾಲ್ವಾರ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ವೇದ-ಆಗಮ-ನ್ಯಾಯ ತಾರ್ಕಿಕ, ವ್ಯಾಕರಣ ಹಾಗೂ ಸಾಹಿತ್ಯ ಮೀಮಾಂಸೆ ಶಾಸ್ತ್ರಗಳನ್ನು ಅಭ್ಯಾಸ ಮಾಡಿ, ಸಂಸ್ಕೃತ, ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿ ಪ್ರಭುತ್ವವನ್ನು ಸಾಧಿಸಿ, ಪ್ರಕಾಂಡ ಪಾಂಡಿತ್ಯವನ್ನು ಎಲ್ಲಡೆ ಪ್ರದರ್ಶಿಸಿದವರು. ಯೋಗ-ಧ್ಯಾನ ಹಾಗೂ ಜಪ-ತಪಗಳ ಸಾಧನೆಯಿಂದ ಪವಾಡ ಸದೃಶ ಕಾರ್ಯಗಳನ್ನು ಅನಾವರಣಗೊಳಿಸುವ ಮುಖೇನ ಭಕ್ತರ ಮನಕ್ಕೆ ಅಯಸ್ಕಾಂತೀಯ ಶಕ್ತಿಯಾಗಿದ್ದವರು.

ಶ್ರೀ ಭಗವತ್ಪಾದರು ತಮ್ಮ ಲೇಖನ ಶಕ್ತಿಯಿಂದ ಶಿವಪೂಜಾವಿಧಿ, ವಿಭೂತಿ, ಸ್ರೀ ನೀತಿ, ಸುಧಾಸಾರ, ಗುರುವಂಶ, ಭಕ್ತಿಯೋಗ ಶ್ರೀ ಪಂಚಾಚಾರ್ಯ ಸ್ತೋತ್ರ ರತ್ನಾವಳಿ, ಶಿವಾಷ್ಟೋತ್ತರ ನಾಮವಳಿ, ಗುರುಕೀರ್ತನ ಹಾಗೂ ಶಿವನಾಮ ಮುಂತಾದ ಮೌಲ್ಯಯುಕ್ತ ಕೃತಿಗಳನ್ನು ರಚಿಸುವುದರೊಂದಿಗೆ ವೀರಶೈವ ಸಾಹಿತ್ಯ-ಸಂಸ್ಕೃತಿಯನ್ನು ಸಂವರ್ಧಿಸಿದವರು.

ಶ್ರೀ ಜಗದ್ಗುರುಗಳವರ ಶಿವಲಿಂಗ ಮಹಾಪೂಜೆ ನಿಜಕ್ಕೂ ಅತ್ಯದ್ಭುತ ಮತ್ತು ಅಪರೂಪವಾದದ್ದು, ಅವರ ಪೂಜಾನಿಷ್ಠೆ ಮತ್ತು ಪೂಜಾವಿಧಾನ ಅತ್ಯಂತ ವೈಭವ ಮತ್ತು ಅಲಂಕಾರಮಯ ಹಾಗೂ ಅಧ್ಯಾತ್ಮದ ಪರಮಾನಂದ, ಅವರ ಸದಾ ಧಾರ್ಮಿಕ ಸಂಸ್ಕಾರ ನೀಡುವಂಥ ವೈವಿಧ್ಯಮಯ ಆಚರಣೆ ಭಕ್ತರನ್ನು ನಿರಂತರ ಆಕರ್ಷಿಸುತ್ತಿದ್ದವು. 108 ಬಂಡಿರಥಯಾತ್ರೆ, 108 ಮಂಟಪ ಪೂಜೆ, 108 ಪಲ್ಲಕ್ಕಿ ಉತ್ಸವ, ಸಹಸ್ರ ಕುಂಭಾಭಿಷೇಕ, ಲಕ್ಷ ಬಿಲ್ವಾರ್ಚನೆ, ಪಂಚಾಕ್ಷರಿ ಜಪಯಜ್ಞ ಮುಂತಾದವುಗಳು ಜನತೆಯ ಭಕ್ತಿ-ಭಾವಗಳಿಗೆ ಶಿವಮಯ ಸನ್ನಿವೇಶವನ್ನು ಸೃಷ್ಠಿಸಿ ಬದುಕಿಗೆ ಆಧ್ಯಾತ್ಮಿಕ ಬೆಳಕು ಬೀರುವ ಹೊಂಗಿರಣಗಳಾಗಿ ಹೊರಹೊಮ್ಮುತ್ತಿದ್ದವು.

ಸಮಾನ ಪೀಠಗಳಿಗೆ ಬರುವ ಆಪತ್ತುಗಳನ್ನು ತಮ್ಮ ಪೂಜಾನುಷ್ಠಾನ ಮತ್ತು ತಪೋಬಲದಿಂದ ಪರಿಹರಿಸಿ ಶಾಂತಿ ಕಾಪಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಸರ್ವಧರ್ಮ ಸಮನ್ವಯ, ಸಹಕಾರ ಮೂರ್ತಿಗಳಾಗಿ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ವಿನೂತನ ಧಾರ್ಮಿಕ ಶಾಂತಿ-ಘೋಷವನ್ನು ಸಾರಿ ಇಡೀ ಜಗತ್ತು ಮಾನವೀಯ ನೆಲೆಯಲ್ಲಿ ನಿರ್ಮಾಣಗೊಳ್ಳಲಿ ಎಂಬ ಸದಾಶಯವನ್ನು ಇಡೀ ಜಾಗತಿಕ ಸಮುದಾಯಕ್ಕೆ ನೀಡಿದ ಶಕ್ತಿ ಅತ್ಯಂತ ಅಮೂಲ್ಯವಾಗಿದೆ.

ಈ ದೇಶದ ರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್, ಉಪರಾಷ್ಟçಪತಿ ಬಿ.ಡಿ.ಜತ್ತಿ, ಮೈಸೂರು ಸಂಸ್ಥಾನದ ರಾಜರೂ ಹಾಗೂ ಕರ್ನಾಟಕದ ರಾಜ್ಯಪಾಲರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್, ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲರಂಥ ಮಹಾನೀಯರಿಗೆ ರಾಜಕೀಯ ಮಾರ್ಗದರ್ಶನ ನೀಡಿದವರು ಹಾಗೂ ಸಜ್ಜಲಗುಡ್ಡದ ಶಿವಶರಣೆ ಶರಣಮ್ಮ ಮುಂತಾದವರಿಗೆ ಧಾರ್ಮಿಕ ದೀಕ್ಷೆ ಕೊಟ್ಟವರು.

ಅನಾಥ, ದೀನದಲಿತ, ಪರಿತ್ಯಕ್ತ ನಿರಾಶ್ರಿತರಿಗೆ ಆಶ್ರಯವನ್ನು ನೀಡಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ, ಜ್ಯಾತ್ಯಾತೀತ ಸಮಾಜವಾದ ಪ್ರಜಾಸತ್ತಾತ್ಮಕ ನಿಲುವಿಗೆ ನಾಂದಿ ಹಾಡಿದವರು. ಬೆಂಗಳೂರಿನ ಮಹಾನಗರದಲ್ಲಿ ಪ್ರತಿಷ್ಠಿತ ವಿದ್ಯಾಸಂಸ್ಥೆ ಸ್ಥಾಪನೆಯಾಗಲು ಕಾರಣೀಕರ್ತರಾಗಿ ಸರ್ವ ಸಮುದಾಯದ ಯುವಕರು ಭವಿಷ್ಯದ ಬದುಕನ್ನು ಬೆಳಕಾಗಿಸಿಕೊಳ್ಳಲು ಅವರ ದೂರದೃಷ್ಟಿಯ ಫಲ ಸಾರ್ಧಕವಾಗಿದೆ.

ವಿಶ್ವ ಕಲ್ಯಾಣ, ವಿಶ್ವಾಶಾಂತಿ ಹಾಗೂ ವಿಶ್ವಭ್ರಾತೃತ್ವಕ್ಕಾಗಿ ಸದಾ ಉನ್ನತ ಚಿಂತನೆಗಳೊಂದಿಗೆ ಅವುಗಳನ್ನು ಕಾರ್ಯರೂಪಕ್ಕೆ ತರುವ ಪರಿ ತುಂಬಾ ವಿಶಿಷ್ಟವಾದದ್ದು, “ರೇಣುಕ ಶಂಕರ ಮಧ್ವ ರಾಮಾನುಜ ಬುದ್ಧ ಮಹಾವೀರ ನಾನಕ್ ಏಸು ಕ್ರೈಸ್ತ ಪೈಗಂಬರರೊರೆದ ಸನಾತನ ಧರ್ಮಕ್ಕೆ ಜಯವಾಗಲಿ” ಎಂದು ಸಂದೇಶ ನೀಡುವ ಮುಖೇನ ಸರ್ವಧರ್ಮಗಳ ಸಮನ್ವಯ ಸಾಮರಸ್ಯ-ಸಹಕಾರವನ್ನು ಎತ್ತಿಹಿಡಿದಿದ್ದಾರೆ.

ಮುಕ್ತಿ ಮಂದಿರ ಧರ್ಮ ಕ್ಷೇತ್ರದಲ್ಲಿ ನಿರಂತರ ತಪೋನುಷ್ಠಾನ ಕೈಗೊಳ್ಳುವುದರೊಂದಿಗೆ ಲೋಕ ಕಲ್ಯಾಣ ಹಾಗೂ ಮಾನವ ಜೀವನದ ಸಾರ್ಥಕತೆಗೆ ತ್ರಿಕೋಟಿ ಲಿಂಗವನ್ನು ಸ್ಥಾಪಿಸುವ ಸಂಕಲ್ಪ ಹೊಂದಿ “ಲಿಂಗಮಧ್ಯೆ ಜಗತ್ ಸರ್ವಂ” ಎಂಬ ಆಗಮ ವಾಣಿಯನ್ನು ಸಾಕಾರಗೊಳಸಿದವರು.

ಇಂಥ ಪರಮ ತಪೋನಿಷ್ಠ ಪ್ರಖ್ಯಾತರಾದ ಶ್ರೀ ಜಗದ್ಗುರು ವೀರಗಂಗಾಧರ ಭಗವತ್ಪಾದರು 1982ರ ಆಶ್ವಯುಜ ಬಹುಳ ತೃತೀಯಾದಂದು ಶಿವೈಕದ್ಯರಾದರು. ಈ ಮಹಿಮಾ ಚಾರ್ಯರ ಪುಣ್ಯ ಸ್ಮರಣೆಯನ್ನು ಪ್ರಸ್ತುತ ಜಗದ್ಗುರುಗಳಾದ ಶ್ರೀ ಮದ್ರರಂಭಾಪುರೀ ಡಾ.ವೀರಸೊಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಮಂಗಲ ಸಾನಿಧ್ಯದಲ್ಲಿ ಅಕ್ಟೋಬರ್‌ 31ರಂದು ಶ್ರೀಮದ್‌ರಂಭಾಪುರಿ ಪೀಠ ಹಾಗೂ ಅವರು ತಪಗೈದ ಮುಕ್ತಿ ಮಂದಿರದ ಧರ್ಮ ಕ್ಷೇತ್ರದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ | Raja Marga Column : ಇಂದು ಪಟೇಲರ ಜನ್ಮ ದಿನ, ಅವರ ವ್ಯಕ್ತಿತ್ವ ಪ್ರತಿಮೆಗಿಂತಲೂ ಸಾವಿರ ಪಟ್ಟು ಎತ್ತರ

ಓಜಸ್ಸು-ತೇಜಸ್ಸು-ತಪಸ್ಸುಗಳ ಸಂಗಮವಾದ ಈ ತೇಜೋ ಮಹಾಮೂರ್ತಿಯ ಪವಿತ್ರ ಸ್ಮರಣೆಯನ್ನು ಇಂದಿಗೂ ಕೂಡ ಜನತೆಯಲ್ಲಿ ಕಾಣಬಹುದಾಗಿದೆ. ಅಲ್ಲದೇ ಅವರ ಪವಾಡ ಸದೃಶ ಕಾರ್ಯಗಳು ಇಡೀ ನಾಡಿಗೆ ದೇದೀಪ್ಯಮಾನವಾಗಿವೆ.


ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ


Exit mobile version