ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದ ಗರ್ಭಗುಡಿಯಲ್ಲಿ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾ ಮೂರ್ತಿಯು ವಿರಾಜಮಾನವಾಗಿದೆ. ಕಳಶದ ಮೆರವಣಿಗೆ ಮೂಲಕ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಇರಿಸಲಾಗಿದೆ. ಇನ್ನು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕಳೆದ ಮಂಗಳವಾರದಿಂದ (ಜನವರಿ 16) ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ. ಇದರ ಭಾಗವಾಗಿಯೇ ರಾಮಲಲ್ಲಾನ ಮೂರ್ತಿಗೆ ಶುಕ್ರವಾರ (ಜನವರಿ 19) ಹೋಮ-ಹವನ ನಡೆಯಲಿದೆ.
ರಾಮಮಂದಿರದ ಗರ್ಭಗುಡಿಯಲ್ಲಿ ಶುಕ್ರವಾರ ರಾಮಲಲ್ಲಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದಾದ ಬಳಿಕ ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ನಡೆಯಲಿದೆ. ಹಾಗೆಯೇ, ವಿಶೇಷ ಹವನಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೈದಿಕ ಮಂತ್ರಗಳನ್ನು ಪಠಿಸುವ ಮೂಲಕ ವಿಶೇಷ ಹವನ ಮಾಡಲಾಗುತ್ತದೆ. ಆ ಮೂಲಕ ರಾಮಮಂದಿರದ ಗರ್ಭಗುಡಿಯಲ್ಲಿ ಧಾರ್ಮಿಕ ವಾತಾವರಣ ಹಾಗೂ ಸಕಾರಾತ್ಮಕ ಅಂಶಗಳು ಒಡಮೂಡಲಿ ಎಂಬುದು ಅರ್ಚಕರ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
ಅಯೋಧ್ಯೆ ಹೋಟೆಲ್ ಬಾಡಿಗೆ ಗಗನಕ್ಕೆ
ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಉದ್ಘಾಟನೆಯ ನಂತರದ ಆರಂಭಿಕ ತಿಂಗಳುಗಳಲ್ಲಿ ಪ್ರತಿದಿನ ಮೂರು ಲಕ್ಷ ಪ್ರವಾಸಿಗರನ್ನು ನಿರೀಕ್ಷಿಸುತ್ತಿದೆ. ಭಾರತದ ಉನ್ನತ ಹೋಟೆಲ್ ಚೈನ್ಗಳು ರಾಮ ಮಂದಿರವಿರುವ ಅಯೋಧ್ಯೆ ಪಟ್ಟಣದಲ್ಲಿ ದೊಡ್ಡ ವ್ಯಾಪಾರದ ಅವಕಾಶದ ಮೇಲೆ ಕಣ್ಣಿಟ್ಟಿವೆ. ಅದರ ಜತೆ ಸದ್ಯಕ್ಕೆ ಲಭ್ಯ ಇರುವ ಹೋಟೆಲ್ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ನಗರದ ಕೆಲವು ಹೋಟೆಲ್ ಕೊಠಡಿಗಳ ಸರಾಸರಿ ಬಾಡಿಗೆ ಈಗ 85,000 ರೂ.ಗಳನ್ನು ದಾಟಿದೆ.
ಇದನ್ನೂ ಓದಿ: Ram Mandir: ರಾಮಮಂದಿರಕ್ಕೆ ವಿಜ್ಞಾನದ ಬಲ; ಸಾವಿರ ವರ್ಷವಾದರೂ ಏನೂ ಆಗಲ್ಲ, ಹೇಗೆ ಅಂತೀರಾ?
ಅಯೋಧ್ಯೆ ರಾಮ ಮಂದಿರದ 170 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಲಕ್ನೋ, ಪ್ರಯಾಗ್ರಾಜ್ ಮತ್ತು ಗೋರಖ್ಪುರದಲ್ಲಿ ಹೋಟೆಲ್ಗಳ ಬೇಡಿಕೆಯೂ ಹೆಚ್ಚಾಗಿದೆ. ಸಿಗ್ನೆಟ್ ಹೋಟೆಲ್ಸ್ ಮತ್ತು ರೆಸಾರ್ಟ್ಸ್ನ ಎಂಡಿ ಮತ್ತು ಸಂಸ್ಥಾಪಕರು ಜನವರಿಯಲ್ಲಿ ತಮ್ಮ ಎಲ್ಲಾ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು. ಅವರ ಹೋಟೆಲ್ಗಳಲ್ಲಿನ ಕೊಠಡಿಗಳ ಸರಾಸರಿ ಬಾಡಿಗೆ 85,000 ರೂ.ಗಳನ್ನು ದಾಟಿದೆ. ಸಿಗ್ನೆಟ್ ಕಲೆಕ್ಷನ್ ಕೆಕೆ ಅಯೋಧ್ಯೆಯ ತನ್ನ ಎಲ್ಲಾ ಹೋಟೆಲ್ಸ್ 45% ಕೊಠಡಿಗಳನ್ನು ದೇಗುಲದ ಟ್ರಸ್ಟ್ಗಾಗಿ ಕಾಯ್ದಿರಿಸಿದೆ. ವಿಐಪಿಗಳಿಗೆ ಅಲ್ಲಿ ಸ್ಥಳಾವಕಾಶ ಮುಂದಾಗಿದೆ.
55 ದೇಶಗಳ ಗಣ್ಯರಿಗೆ ಆಹ್ವಾನ
ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ 55 ದೇಶಗಳಿಂದ ಸುಮಾರು 100ಕ್ಕೂ ಅಧಿಕ ಗಣ್ಯರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಜರ್ಮನಿ, ಫಿಜಿ, ಫಿನ್‌ಲ್ಯಾಂಡ್, ಅಮೆರಿಕ, ಬ್ರಿಟನ್, ಜರ್ಮನಿ, ಇಂಡೋನೇಷ್ಯಾ, ಐರ್ಲೆಂಡ್, ಜಪಾನ್, ಕೀನ್ಯಾ, ಕೊರಿಯಾ, ಮಾರಿಷಸ್, ನಾರ್ವೆ ಸೇರಿ 55 ದೇಶಗಳ ಗಣ್ಯರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಂಗಾಪುರ, ಸ್ಪೇನ್, ಶ್ರೀಲಂಕಾ, ಜಾಂಬಿಯಾ, ವಿಯೇಟ್ನಾಂ, ಉಗಾಂಡ, ವೆಸ್ಟ್ ಇಂಡೀಸ್ ದೇಶಗಳ ನಾಯಕರು ಕೂಡ ಪಟ್ಟಿಯಲ್ಲಿದ್ದಾರೆ. ವಿದೇಶಗಳಿಂದ ಆಗಮಿಸುವ ಎಲ್ಲ ಗಣ್ಯರು ಜನವರಿ 21ರಂದೇ ಅಯೋಧ್ಯೆಗೆ ತೆರಳಲಿದ್ದಾರೆ. ಅವರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ