Site icon Vistara News

Ramanasri award | ಬದುಕಿನಲ್ಲಿ ಗುರಿ ಇರುವವರು ಮಾತ್ರ ಸದಾ ಕ್ರಿಯಾಶೀಲರಾಗಿರುತ್ತಾರೆ ಎಂದ ಬೊಮ್ಮಾಯಿ

ramanasri award

ಬೆಂಗಳೂರು: ವ್ಯಕ್ತಿಗೆ ತನ್ನ ಅಸ್ತಿತ್ವ, ಹಾಗೂ ಅಸ್ತಿತ್ವ ದ ಗುರಿ ಹೊಂದಿದವರು ಕ್ರಿಯಾಶೀಲರಾಗಿದ್ದು, ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಅವರು ಗುರುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಹಾಗೂ ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು , ಇವರ ಸಹಯೋಗದೊಂದಿಗೆ ಆಯೋಜಿಸಿದ್ದ 17ನೇ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಎಸ್.ಷಡಕ್ಷರಿ ಅವರ ಕ್ಷಣ ಹೊತ್ತು- ಆಣಿ ಮುತ್ತು ಪುಸ್ತಕ ಭಾಗ 10, 11 ಲೋಕಾರ್ಪಣೆ ಮಾಡಿ ಮಾತನಾಡಿದರು.

ಸಾಧಕರಿಗೆ ಪ್ರಶಸ್ತಿ ನೀಡುವುದರಲ್ಲಿ ರಮಣಶ್ರೀ ಹಾಗೂ ಶರಣ ತತ್ವಗಳ ಸಂಗಮವಾಗಿದೆ ಎರಡೂ ತತ್ವಗಳು ಬೇರೆ ಬೇರೆಯಾದರೂ ಅವುಗಳ ಸಂಗಮ ಮಾಡಿ ಪ್ರಶಸ್ತಿ ನೀಡಲಾಗುತ್ತಿದೆ. ಅವುಗಳ ಮುಗ್ಧತೆಯನ್ನು ಕಾಪಾಡಿಕೊಂಡವರು ಜೀವನದಲ್ಲಿ ಸಾಧಕರಾಗುತ್ತಾರೆ. ಷಡಕ್ಷರಿಯವರು ಅದನ್ನು ಕಾಪಾಡಿಕೊಂಡಿದ್ಧಾರೆ. ಅವರ ಹಾಸ್ಯಪ್ರಜ್ಞೆ ಬಹಳ ಉತ್ತಮವಾಗಿದ್ದು, ಅರ್ಥಪೂರ್ಣವಾಗಿ ಬದುಕು ನಡೆಸಿದ್ಧಾರೆ. ಬರವಣಿಗೆ ನಿಲ್ಲಿಸಬೇಡಿ ಎಂದು ಬೊಮ್ಮಾಯಿ ಹೇಳಿದರು.

ಆತ್ಮಸಾಕ್ಷಿಯಾಗಿ ಬದುಕುವ ಪ್ರಯತ್ನ ಅಗತ್ಯ
ನಮ್ಮ ಅಸ್ತಿತ್ವದ ಬಗ್ಗೆ ನಾವು ಯಾರೂ ಚಿಂತನೆ ಮಾಡುವುದಿಲ್ಲ. ಈ ಬಗ್ಗೆ ಚಿಂತನೆ ಮಾಡಿದರೆ ನಮ್ಮ ಆಲೋಚನಾ ಲಹರಿ ಬದಲಾಗುತ್ತದೆ. ಲೌಕಿಕ ಸಾಧನೆಗಳ ಬಗ್ಗೆ ನಮಗೆ ಆಸಕ್ತಿ. ಸದಾ ಇತರರಿಗಾಗಿಯೇ ಬದುಕುತ್ತೇವೆ. ನಮ್ಮ ಆತ್ಮಸಾಕ್ಷಿಯಾಗಿ ಬದುಕುವ ಪ್ರಯತ್ನಗಳನ್ನು ಮಾಡಿದರೆ ಅದು ಅಮೃತ ಗಳಿಗೆಯಾಗುತ್ತದೆ. ಷಡಾಕ್ಷರಿಯವರು ತಮ್ಮ ಬದುಕಿನ ಕಷ್ಟದ ದಿನಗಳಲ್ಲಿ ಕಷ್ಟ ಪಟ್ಟು ಸಾಧನೆ ಮಾಡಿದ್ದಾರೆ. ಅದರಿಂದ ತಮ್ಮ ಬಂಧುಬಳಗದವರಿಗೆ ಸಹಾಯ ಮಾಡಿದ್ದಾರೆ. ಕ್ಷಣಹೊತ್ತು ಆಣಿ ಮುತ್ತು ಪುಸ್ತಕವನ್ನು ಹೊರತಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣ, ಬರಹಗಾರ ಎಸ್. ಷಡಾಕ್ಷರಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ:ಸಿ.ಸೋಮಶೇಖರ್ ಗೊ.ರು.ಚನ್ನಬಸಪ್ಪ, ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಸಾಹಿತ್ಯ ಪರಿಷತ್ ಮಾಜಿನ್ ಅಧ್ಯಕ್ಷ ಮನು ಬಳಿಗಾರ್, ನಿರ್ದೇಶಕ ಟಿ.ಎನ್.ಸೀತಾರಾಮ್, ಪ್ರತಿಷ್ಠಾನದ ವೀರೇಂದ್ರ ಷಡಕ್ಷರಿ ಹಾಗೂ ಅರುಣಾ ಸತೀಶ್ ಉಪಸ್ಥಿತರಿದ್ದರು.

ಸಾಧಕರಿಗೆ ಪ್ರಶಸ್ತಿ ವಿತರಣೆ
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬೇಲಿಮಠದ ಶಿವರುದ್ರ ಸ್ವಾಮೀಜಿಗಳಿಗೆ ‘ ರಮಣಶ್ರೀ ಶರಣ ಜೀವಮಾನ ಸಾಧಕ ಪ್ರಶಸ್ತಿ’,ಶರಣ ಸಾಹಿತ್ಯ ಸಂಶೋಧನೆಗೆ ಶಿವಬಸವನಗರದ ಕಾರಂಜಿ ಮಠದ ಶಿವಯೋಗಿ ದೇವರು, ವಚನ ರಚನೆಗೆ ಶಿವಮೊಗ್ಗದ ದಾಕ್ಷಾಯಿಣಿ ಜಯದೇವಪ್ಪ, ವಚನ ಸಂಗೀತಕ್ಕೆ ಬೆಂಗಳೂರಿನ ಸಿದ್ದರಾಮ ಕೇಸಾಪುರ ಹಾಗೂ ಶರಣ ಸಂಸ್ಕೃತಿ ಪ್ರಸಾರಕ್ಕೆ ನಂಜನಗೂಡಿನ ವಿಶ್ವಬಸವ ಸೇನೆಯ ಬಸವ ಯೋಗೇಶ್ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಇದನ್ನೂ ಓದಿ | ತರಳಬಾಳು ಶಿವಕುಮಾರ ಶ್ರೀಗಳ ಬದುಕೇ ನಮಗೆಲ್ಲ ಮಾರ್ಗದರ್ಶನ: ಸಿಎಂ ಬಸವರಾಜ ಬೊಮ್ಮಾಯಿ

Exit mobile version