Site icon Vistara News

Ratha Saptami 2023: ರಾಜ್ಯಾದ್ಯಂತ ಸೃಷ್ಟಿಕರ್ತನಿಗೆ ಶ್ರದ್ಧಾ ಯೋಗ; ಓ ಸೂರ್ಯ ನಿನಗೆ ನಮನ

ಬೆಂಗಳೂರು: ಕಣ್ಣಿಗೆ ಕಾಣುವ ದೇವರು ಸೂರ್ಯದೇವನನ್ನು (Ratha Saptami 2023) ನಮಿಸಿದರು. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ವೀರ ಆಂಜನೇಯ ದೇವಸ್ಥಾನದಲ್ಲಿ ರಥಸಪ್ತಮಿ ಅಂಗವಾಗಿ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಿಂದ ಓಂಕಾರ ಜತೆಗೆ ಯೋಗಾಭ್ಯಾಸವೂ ನಡೆಯಿತು.

ಸುಮಾರು 108 ಯೋಗಾಭ್ಯಾಸಿಗಳು ಸಂಕಲ್ಪದೊಂದಿಗೆ 1,008 ಸುತ್ತಿನ ಅಖಂಡ ಸೂರ್ಯ ನಮಸ್ಕಾರಗಳನ್ನು ಜಗತ್ ಸೃಷ್ಟಿಕರ್ತ ಆದಿತ್ಯದೇವರಿಗೆ ಸಮರ್ಪಣ ಮಾಡಿದ್ದರು. 15 ಗಂಟೆ ಕಾಲ ನಡೆದ ಈ ಶ್ರದ್ಧಾ ಯೋಗ ಕಾರ್ಯಕ್ರಮ ಬೆಳಗ್ಗೆ 4.30ರಿಂದ ಸಂಜೆ 7.30ರವರೆಗೆ ನಡೆಸಲಾಯಿತು.

ಯೋಗಾಭ್ಯಾಸದಲ್ಲಿ ರಾಜ್ಯದ ಹತ್ತು ವಿವಿಧ ಯೋಗ ಶಾಲೆಗಳ ವಿದ್ಯಾರ್ಥಿಗಳು ಒಂದುಗೂಡಿ ಸೂರ್ಯ ದೇವನಿಗೆ ಸಮರ್ಪಿಸುವ ಈ 1008 ನಮನಗಳ ಸಂಕಲ್ಪದ ಭಾಗವಾಗಿ ಆಂಜನೇಯ ಮತ್ತು ಮಹಾಲಕ್ಷ್ಮಿ ದೇವರಿಗೆ ಹೋಮಗಳನ್ನು ಮಾಡುವುದರೊಂದಿಗೆ ನವಗ್ರಹ, ಮೃತ್ಯುಂಜಯ ಹೋಮ, ಸೂರ್ಯ ಸಹಸ್ರನಾಮ ಮತ್ತು ಆದಿತ್ಯ ಹೃದಯ ಹೋಮಗಳನ್ನು ನೆರವೇರಿಸಲಾಯಿತು.

ಕೋಲಾರ ನಗರದ ಗೋಕುಲ್ ಕಾಲೇಜು ಆವರಣದಲ್ಲಿ ಮಹರ್ಷಿ ಯೋಗ ಶಿಕ್ಷಣ ಕೇಂದ್ರ‌ ಟ್ರಸ್ಟ್ ಸಹ ಯೋಗದಲ್ಲಿ ಸೂರ್ಯ ನಮಸ್ಕಾರ ಸಲ್ಲಿಸಿದರು. ರಥಸಪ್ತಮಿ ಪ್ರಯುಕ್ತ ಕೋಲಾರ ಜಿಲ್ಲೆಯ‌ ವಿವಿಧ‌ ಕಡೆ ಸೂರ್ಯ ದೇವರಿಗೆ ೧೦೧ ಸೂರ್ಯ ನಮಸ್ಕಾರ ಸಲ್ಲಿಸಲಾಯಿತು. ಹಲವು ಕಡೆ ಯೋಗ‌ ಸಂಸ್ಥೆಗಳ ಮೂಲಕ ನೂರಾರು ಸಂಖ್ಯೆಯಲ್ಲಿ ಯೋಗ ಶಿಬಿರಾರ್ಥಿಗಳು ಬೆಳಗ್ಗೆ ಆರು ಗಂಟೆಯಿಂದ ನಿರಂತರ ಸೂರ್ಯ ‌ನಮಸ್ಕಾರ ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಇತ್ತ ಚಾಮರಾಜನಗರದ ನಗರದ ಸೇವಾಭಾರತಿ ಕಾಲೇಜು ಮೈದಾನದಲ್ಲಿ ರಥಸಪ್ತಮಿ ಅಂಗವಾಗಿ ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಲಾಯಿತು. ಯೋಗಪಟುಗಳು, ಶಿಕ್ಷಕರು ವಿದ್ಯಾರ್ಥಿಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾದರು. ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಯೋಗದ ಪ್ರಾಮುಖ್ಯತೆ, ಮಾನಸಿಕ ಹಾಗೂ ಬೌದ್ಧಿಕ ವಿಕಸನದ ಬಗ್ಗೆ ಅರಿವು ಮೂಡಿಸಲಾಯಿತು.

ಇದನ್ನೂ ಓದಿ: Alia Bhatt: 108 ಸೂರ್ಯ ನಮಸ್ಕಾರ ಮಾಡಿದ ಆಲಿಯಾ ಭಟ್‌: ಫೋಟೊಗಳು ವೈರಲ್‌!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸಾಮೂಹಿಕ ಸೂರ್ಯ ನಮಸ್ಕಾರವನ್ನು ಆಯೋಜಿಸಲಾಗಿತ್ತು. ರಥ ಸಪ್ತಮಿಯಂದು ಸೂರ್ಯ ನಮಸ್ಕಾರ ಮಾಡಿದರೆ ಕುಷ್ಠರೋಗ ಸೇರಿದಂತೆ ಚರ್ಮರೋಗಗಳು ನಿವಾರಣೆಯಾಗುವ ನಂಬಿಕೆ ಇದೆ.

ಇನ್ನಷ್ಟು ಧಾರ್ಮಿಕ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version