Site icon Vistara News

Rayara Aradhane 2024: ಇಂದಿನಿಂದ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ; ಗುರುಗಳ ಜೀವನ ಹೇಗಿತ್ತು, ಸಂದೇಶ ಏನಾಗಿತ್ತು?

Rayara Aradhane 2024

ಮಂತ್ರಾಲಯ ಗುರು (Mantralaya guru) ರಾಘವೇಂದ್ರ ಸ್ವಾಮಿಗಳ (Rayara Aradhane 2024) 353ನೇ ಆರಾಧನಾ ಮಹೋತ್ಸವ (Raghavendra Aradhana Mahotsava) ಮಂಗಳವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಗುರುಗಳು ಬೃಂದಾವನ ಪ್ರವೇಶಿಸಿದ ಈ ದಿನವನ್ನು ದೇಶ, ವಿದೇಶಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆಗಸ್ಟ್ 20ರಂದು ಪೂರ್ವಾರಾಧನೆ, 21ರಂದು ಮಧ್ಯ ಆರಾಧನೆ ಮತ್ತು 22ರಂದು ಉತ್ತರಾರಾಧನೆ ನಡೆಯಲಿದೆ.

16ನೇ ಶತಮಾನದ ಸಂತರು ಮತ್ತು ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳು ವೈಷ್ಣವ ಧರ್ಮವನ್ನು ಪ್ರತಿಪಾದಿಸಿದ್ದು, ಮಧ್ವಾಚಾರ್ಯರ ದ್ವೈತ ತತ್ತ್ವವನ್ನು ಜನಪ್ರಿಯಗೊಳಿಸಿದರು. ಗುರುಗಳು ಬೃಂದಾವನ ಪ್ರವೇಶಿಸಿರುವ ಕ್ಷೇತ್ರವಾಗಿರುವ ಮಂತ್ರಾಲಯದಲ್ಲಿ ಗುರುಗಳ ಆರಾಧನೆ ಆಗಸ್ಟ್ 21ರಂದು ನಡೆಯಲಿದೆ.


ಗುರುಗಳ ಆರಾಧನೆ ಎಂದರೇನು?

ರಾಘವೇಂದ್ರ ಸ್ವಾಮಿ ಆರಾಧನೆ ಎಂದರೆ ರಾಯರು ಜೀವಂತವಾಗಿ ಬೃಂದಾವನವನ್ನು ಪ್ರವೇಶಿಸಿರುವ ದಿನ. ದೇಶ ವಿದೇಶಗಳಲ್ಲಿ ಆಚರಿಸಲ್ಪಡುವ ಗುರುಗಳ ಆರಾಧನೆಯು ಹೆಚ್ಚಿನ ಮಠಗಳು ಮತ್ತು ಸಂಸ್ಥೆಗಳಲ್ಲಿ ಪೂರ್ವಾರಾಧನೆಯಿಂದ ಪ್ರಾರಂಭವಾಗುತ್ತದೆ. ಇದನ್ನು ವಾರ್ಷಿಕವಾಗಿ ಶ್ರಾವಣ ಕೃಷ್ಣ ಪಕ್ಷ ದ್ವಿತೀಯ ಅಥವಾ ಕರ್ನಾಟಕದಲ್ಲಿ ಅನುಸರಿಸುವ ಸಾಂಪ್ರದಾಯಿಕ ಹಿಂದೂ ಚಂದ್ರನ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದಲ್ಲಿ ಚಂದ್ರನ ಕ್ಷೀಣಿಸುತ್ತಿರುವ ಎರಡನೇ ದಿನದಂದು ಆಚರಿಸಲಾಗುತ್ತದೆ.

ರಾಘವೇಂದ್ರ ಸ್ವಾಮಿಯು ವಿಷ್ಣುವಿನ ಶ್ರೇಷ್ಠ ಭಕ್ತರಾಗಿದ್ದರು. 1621 ರಿಂದ 1671ರವರೆಗೆ ಅವರು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಶ್ರೀ ಮಠದ ಮುಖ್ಯಸ್ಥರಾಗಿದ್ದರು. ತಮ್ಮ ಜೀವನದಲ್ಲಿ ಹಲವಾರು ಪವಾಡಗಳನ್ನು ನಡೆಸಿರುವ ಅವರು ಮಧ್ವಾಚಾರ್ಯರ ಬೋಧನೆಗಳ ಮೇಲೆ ಹಲವಾರು ಭಜನೆ ಮತ್ತು ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಗುರು ಶ್ರೀ ರಾಘವೇಂದ್ರ ಸ್ವಾಮಿಗಳು 1671 ರಲ್ಲಿ ಸಮಾಧಿಯನ್ನು ಪ್ರವೇಶಿಸದರು. ಆವರ ಸಮಾಧಿ ಸ್ಥಳವನ್ನು ಬೃಂದಾವನ ಎಂದು ಕರೆಯಲಾಗುತ್ತದೆ. ಇದು ಮಂತ್ರಾಲಯದಲ್ಲಿದೆ.


ಗುರುಗಳ ಜನನ ಕಥೆ

ಗುರು ರಾಘವೇಂದ್ರ ಸ್ವಾಮಿಗಳು 1595ರಲ್ಲಿ ತಮಿಳುನಾಡಿನ ಭುವನಗಿರಿಯಲ್ಲಿ ತಿಮ್ಮಣ್ಣ ಭಟ್ಟ ಹಾಗೂ ಗೋಪಿಕಾಂಬೆ ಅವರ ಎರಡನೇ ಮಗನಾಗಿ ಜನಿಸಿದರು. ಇವರ ಮೊದಲ ಹೆಸರು ವೆಂಕಣ್ಣ ಭಟ್ಟ. ಇವರನ್ನು ವೆಂಕಟನಾಥ, ವೆಂಕಟಾಚಾರ್ಯ ಎಂದೂ ಕರೆಯುತ್ತಾರೆ. ಇವರಿಗೆ ಗುರುರಾಜ ಎಂಬ ಹೆಸರಿನ ಸಹೋದರ ಹಾಗೂ ವೆಂಕಟಾಂಬೆ ಎಂಬ ಸಹೋದರಿಯೂ ಇದ್ದರು. ರಾಯರ ತಂದೆ, ತಾಯಿಗೆ ಮಕ್ಕಳಾಗದೇ ಆಗದೇ ಇದ್ದಾಗ ಅವರು ತಿರುಪತಿಗೆ ಹೋಗಿ ದೇವರನ್ನು ಬೇಡಿಕೊಂಡ ಮೇಲೆ ಮಕ್ಕಳು ಜನಿಸಿದರು.

ರಾಘವೇಂದ್ರ ಅವರ ಹುಟ್ಟಿಗೂ ಮೊದಲು ತಿಮ್ಮಣ್ಣ ಭಟ್ಟ ದಂಪತಿ ತಿರುಪತಿಗೆ ತೆರಳಿ ಭಗವಂತನ ಸೇವೆ ಮಾಡುತ್ತಾರೆ. ಆಗ ಅವರ ಕನಸಿನಲ್ಲಿ ಬಂದು ವೆಂಕಟೇಶ, ಒಂದು ಮಹಾನ್ ಆತ್ಮ ಹಾಗೂ ಖ್ಯಾತಿ ಶಿಖರವನ್ನೇರುವ ಮಗನನ್ನು ನೀಡುವುದಾಗಿ ಆಶೀರ್ವದಿಸುತ್ತಾನೆ. ತಿರುಪತಿ ದೇವರ ಅನುಗ್ರಹದಿಂದ ರಾಯರು ಜನಿಸಿದರು ಎನ್ನಲಾಗುತ್ತದೆ.

Raghavendra Aradhana Mahotsava


ಕಡು ಬಡತನದಲ್ಲೇ ಜೀವನ

ವೆಂಕಟನಾಥ (ರಾಘವೇಂದ್ರ) ಅವರಿಗೆ ಸರಸ್ವತಿ ಎಂಬಾಕೆಯೊಂದಿಗೆ ವಿವಾಹವಾಗುತ್ತದೆ. ಇವರಿಗೆ ಒಬ್ಬ ಮಗ ಜನಿಸುತ್ತಾನೆ. ಅವನಿಗೆ ಲಕ್ಷಣರಾಯ ಎಂದು ಹೆಸರಿಡಲಾಗುತ್ತದೆ. ನುರಿತ ಸಂಗೀತಗಾರ ಮತ್ತು ಶ್ರೇಷ್ಠ ವಿದ್ವಾಂಸರೂ ಆಗಿದ್ದ ವೆಂಕಟನಾಥ ಅವರು ತಮ್ಮ ಸೇವೆಗಳಿಗೆ ಎಂದಿಗೂ ಹಣ ಕೇಳುತ್ತಿರಲಿಲ್ಲ. ಇದರಿಂದ ಅವರು ಕಡು ಬಡತನದಲ್ಲೇ ಜೀವನ ಸಾಗಿಸಬೇಕಾಯಿತು. ಆದರೂ ಭಗವಂತನ ಮೇಲೆ ಅಚಲವಾದ ನಂಬಿಕೆ ಇಟ್ಟಿದ್ದರು.

ಬಳಿಕ ಅವರು ಶ್ರೀ ಸುಧೀಂದ್ರ ತೀರ್ಥರ ಆಶ್ರಯ ಪಡೆದರು. ಅವರ ಬಳಿ ತಮ್ಮ ಶಿಕ್ಷಣವನ್ನು ಮುಂದುವರಿಸಿದರು.
ಅವರ ಜ್ಞಾನ ಮತ್ತು ವ್ಯಾಕರಣದ ಮೇಲಿನ ಪಾಂಡಿತ್ಯವನ್ನು ನೋಡಿ ಸಂತೋಷಗೊಂಡ ಸುಧೀಂದ್ರ ತೀರ್ಥರು ಅವರಿಗೆ “ಮಹಾಭಾಷ್ಯಾಚಾರ್ಯ” ಎಂಬ ಬಿರುದನ್ನು ನೀಡಿದರು.


ರಾಘವೇಂದ್ರ ಹೆಸರಿನ ವಿಶೇಷ

ಸುಧೀಂದ್ರ ತೀರ್ಥರು ಬೃಂದಾವನ ಪ್ರವೇಶಿಸಿದ ಮೇಲೆ ರಾಯರು ಮಠದ ಮುಖ್ಯಸ್ಥರಾದರು. ಇದಕ್ಕೂ ಮೊದಲು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದ ವೆಂಕಟನಾಥನ ಹೆಸರನ್ನು ರಾಘವೇಂದ್ರ ಎಂದು ಬದಲಾಯಿಸಲಾಗಿತ್ತು.
ರಾಘವೇಂದ್ರ ಎನ್ನುವುದು ಭಗವಾನ್ ರಾಮನ ಹೆಸರು. ಇದರ ಅರ್ಥ ‘ಪಾಪಗಳನ್ನು ನಾಶಪಡಿಸುವ ಮತ್ತು ಬಯಸಿದ ವಸ್ತುಗಳನ್ನು ಕೊಡುವವನು’ ಎಂಬುದಾಗಿದೆ.

ಬೃಂದಾವನ ಪ್ರವೇಶ

ರಾಘವೇಂದ್ರ ಸ್ವಾಮಿಗಳು 1671ರ ಶ್ರಾವಣ ಕೃಷ್ಣ ಪಕ್ಷದ ದ್ವಿತೀಯ ದಿನದಂದು ಜೀವಂತ ಸಮಾಧಿ ಸೇರುತ್ತಾರೆ. ಆ ಕಾರಣದಿಂದ ಪ್ರತಿ ವರ್ಷ ಈ ದಿನದಂದು ರಾಯರ ಆರಾಧನಾ ಮಹೋತ್ಸವವನ್ನು ಆಚರಿಸಲಾಗುತ್ತದೆ.

ಅಂತಿಮ ಸಂದೇಶ

ಸಮಾಧಿ ಪಡೆಯುವ ಮುನ್ನ ಗುರುಗಳು ತಮ್ಮ ನಿತ್ಯದ ವಿಧಿವಿಧಾನಗಳನ್ನು ಅನುಸರಿಸಿ ಭಕ್ತರಿಗೆ ತಮ್ಮ ಕೊನೆಯ ಪ್ರವಚನವನ್ನು ನೀಡಿದರು. ಈ ವೇಳೆ ಅವರು, ನಾನು ನನ್ನ ದೇಹವನ್ನು ಮಾತ್ರ ತ್ಯಜಿಸುತ್ತೇನೆ. ಎಲ್ಲರ ಯೋಗಕ್ಷೇಮವನ್ನು ಕಾಪಾಡಲು ಭೌತಿಕವಾಗಿ ಇರುತ್ತೇನೆ ಎಂದು ಹೇಳಿದ್ದರು.

ಮಂತ್ರಾಲಯದಲ್ಲಿ ಅದ್ಧೂರಿ ಆಚರಣೆ

ಗುರುಗಳ ಆರಾಧನೆಯನ್ನು ಮಂತ್ರಾಲಯದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮಹಾ ಆರಾಧನೆ ಎಂದೂ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ, ಮಠದ ಸಂಕೀರ್ಣವನ್ನು ಹಾಗೂ ಮಂತ್ರಾಲಯ ಪಟ್ಟಣವನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಗುರುಗಳ ಮಹಾ ಆರಾಧನೆಯ ಅಂಗವಾಗಿ ನಡೆಯುವ ಮಹಾರಥೋತ್ಸವದಲ್ಲಿ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.


ವಿವಿಧ ಆಚರಣೆಗಳು

ಕಲಿಯುಗದ ಕಾಮಧೇನು ಎಂದೇ ಜಗತ್ಪ್ರಸಿದ್ಧಿ ಪಡೆದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ಭಾನುವಾರವೇ ಆರಂಭಗೊಂಡಿದ್ದು, ಆಗಸ್ಟ್ 24ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ರಾಯರ ಉತ್ಸವ ಮೂರ್ತಿಯ ಬಲಿ, ರಥೋತ್ಸವ, ಗೋ ಪೂಜೆ, ಗಜಪೂಜೆ ಮತ್ತಿತರ ಪೂಜೆಗಳು ನಡೆಯುತ್ತವೆ. ಇದಕ್ಕೂ ಮೊದಲು ಧ್ವಜಾರೋಹಣ ನಡೆಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ಪೂರ್ವ ಆರಾಧನಾ ದಿನದಂದು ಸಿಂಹ ವಾಹನ ಸವಾರಿ, ಮಧ್ಯ ಆರಾಧನಾ ದಿನದಂದು ಮಹಾ ಪಂಚಾಮೃತ ಅಭಿಷೇಕ, ಉತ್ತರ ಆರಾಧನಾ ದಿನದಂದು ಸ್ವರ್ಣ ರಥೋತ್ಸವವನ್ನು ನಡೆಸಲಾಗುತ್ತದೆ. ಮಠವು ಪ್ರತಿ ವರ್ಷ ಸಮಾಜ ಸೇವೆ ಮಾಡಿದ ಗಣ್ಯರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ಈ ಸಂದರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನೂ ನಡೆಸಲಾಗುತ್ತದೆ.

ಇದನ್ನೂ ಓದಿ: Shravan 2024: ಶ್ರಾವಣ ಸೋಮವಾರದ ವಿಶೇಷತೆಗಳೇನು? ಶಿವನಿಗೆ ಏನು ಅರ್ಪಿಸಬೇಕು? ಏನನ್ನು ಅರ್ಪಿಸಬಾರದು?

ವಿಶೇಷತೆ

ರಾಘವೇಂದ್ರ ಸ್ವಾಮಿಯ ಬೃಂದಾವನಕ್ಕೆ ಪ್ರತಿ ವರ್ಷ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಅಧಿಕಾರಿಗಳು ಅರ್ಪಿಸುವ ಭಗವಾನ್ ವೆಂಕಟೇಶ್ವರ ಸ್ವಾಮಿಯ ಶೇಷವಸ್ತ್ರವನ್ನು ಅರ್ಪಿಸುವುದು ವಾಡಿಕೆಯಾಗಿದೆ. ತಿರುಪತಿ ಬಾಲಾಜಿ ದೇವಸ್ಥಾನದಿಂದ ಅಧಿಕಾರಿಗಳು ಮತ್ತು ಅರ್ಚಕರ ತಂಡ ತಂದ ಶೇಷವಸ್ತ್ರವನ್ನು ಮಠದ ಮುಖ್ಯಸ್ಥರು ಬೃಂದಾವನಕ್ಕೆ ಸ್ವೀಕರಿಸಿ ವಿಶೇಷ ಪಂಚಾಮೃತ ಅಭಿಷೇಕವನ್ನು ಮಾಡುತ್ತಾರೆ.

Exit mobile version