Site icon Vistara News

Renukamba Temple: ಭರತ ಹುಣ್ಣಿಮೆಯಂದು ರೇಣುಕಾಂಬ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ; ಉಧೋ ಉಧೋ ಎನ್ನುವ ಹರ್ಷೋದ್ಗಾರ

#image_title

ಶಿವಮೊಗ್ಗ: ಇಲ್ಲಿನ ಸೊರಬ ತಾಲೂಕಿನ ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ (Renukamba Temple) ಭರತ ಹುಣ್ಣಿಮೆಯ ಪ್ರಯುಕ್ತ ಲಕ್ಷಾಂತರ ಭಕ್ತರು ಭಾನುವಾರ ಆಗಮಿಸಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.

Renukamba Temple

ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೆಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಲೆನಾಡಿನ ಆರಾಧ್ಯ ದೇವಿ ರೇಣುಕಾದೇವಿಯ ದರ್ಶನ ಪಡೆದು ಉಧೋ ಉಧೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು.

ಪರಿವಾರ ದೇವರಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ ತ್ರಿಶೂಲದ ಭೈರಪ್ಪ ದೇವರಿಗೆ ಹಾಗೂ ತೊಟ್ಟಿಲು ಬಾವಿಗೆ ಹುಣ್ಣಿಮೆಯ ಪೂಜೆ ಸಲ್ಲಿಸಲಾಯಿತು. ಧಾರ್ಮಿಕ ಪೂಜಾ ವಿಧಿ ವಿಧಾನಗಳಾದ ಪಡ್ಲಿಗೆ ತುಂಬಿಸುವುದು, ಮುಡಿ ನೀಡುವುದು, ಕಿವಿ ಚುಚ್ಚಿಸುವುದು ಸೇರಿದಂತೆ ವಿವಿಧ ಸೇವೆ ಸಲ್ಲಿಸಿದರು. ಭಕ್ತರು ಸ್ಥಳದಲ್ಲೇ ಒಲೆ ಹೂಡಿ ಕರಿದ ಹೋಳಿಗೆ, ರೊಟ್ಟಿ, ಬುತ್ತಿ ತಯಾರಿಸಿ ರೇಣುಕಾಂಬೆಗೆ ನ್ಯೆವೇದ್ಯ ಅರ್ಪಿಸಿದರು. ಬಳಿಕ ತಮ್ಮ ಬಂಧು ಬಳಗದವರ ಜತೆ ಭೋಜನ ಮಾಡಿದರು.

ಶ್ರೀ ರೇಣುಕಾ ದೇವಿ ನಿನ್ನಾಲ್ಕು ಉಧೋ, ಉಧೋ. ಚಂದ್ರಗುತ್ಯಮ್ಮ ನಿನ್ನಾಲ್ಕು ಉಧೋ, ಉಧೋ ಎಂದು ಶ್ರೀ ದೇವಿಯ ಬಹುಪರಾಕ್ ಹೇಳುತ್ತಾ ಹರ್ಷೋದ್ಗಾರದೊಂದಿಗೆ ಭಕ್ತರು ಹುಣ್ಣಿಮೆಯ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದ ರಥ ಬೀದಿಯಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯಿತು.

ಇದನ್ನೂ ಓದಿ: Asia Cup 2023: ಏಷ್ಯಾಕಪ್ ಆಯೋಜನೆ ಕೈ ತಪ್ಪಿದರೆ ವಿಶ್ವಕಪ್‌ ಬಹಿಷ್ಕಾರ: ಪಿಸಿಬಿ ಬೆದರಿಕೆ

ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆಡಳಿತ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸಿದರು.

Exit mobile version