ಸಾಗರ: “ನಾವೆಲ್ಲರೂ ಒಂದಾಗಿ ಊರು ಕಟ್ಟುವ ಕಾಯಕದಲ್ಲಿ ನಿರತರಾಗೋಣ, ಒಂದೇ ಸಮುದಾಯ, ಒಂದೇ ದೇಶದವರಾಗಿರುವ ನಾವೆಲ್ಲರೂ ಒಂದಾಗಿ ಸಾಗರವನ್ನು ಬೆಳೆಸೋಣ. ಸಾಗರದ ಶ್ರೀಮಂತಿಕೆ ಹೆಚ್ಚಿಸುವ ಕೆಲಸ ಜಾತ್ರೆಯಿಂದ (Sagara Marikamba Jatre) ಆಗಬೇಕು” ಎಂದು ಸಾಹಿತಿ ಡಾ. ನಾ.ಡಿಸೋಜಾ ಹೇಳಿದರು.
ಸಾಗರ ನಗರಸಭೆ ಆವರಣದಲ್ಲಿ ಶ್ರೀ ಮಾರಿಕಾಂಬಾ ಜಾತ್ರೆ ಸಮಿತಿಯಿಂದ ನಿರ್ಮಿಸಿದ್ದ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪದಲ್ಲಿ ಆಶಯ ನುಡಿಗಳನ್ನಾಡಿದರು. “ಸಾಗರ ಪಟ್ಟಣಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ವಾಣಿಜ್ಯ ಕೇಂದ್ರವಾಗಿ ಸಾಗರವು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಎಲ್ಲರನ್ನೂ ಒಂದುಗೂಡಿಸಿ ಸಾಗರದ ಶ್ರೀಮಂತಿಕೆ ವೃದ್ಧಿಸುವ ಕಾರ್ಯವನ್ನು ಎಲ್ಲ ಜನರೂ ಒಟ್ಟುಗೂಡಿ ಮಾಡಬೇಕಿದೆ” ಎಂದು ತಿಳಿಸಿದರು.
ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಮಾತನಾಡಿ, “ಎಲ್ಲರ ಸಹಕಾರದಿಂದ ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ನಡೆದಿದೆ. ನಗರಸಭೆ, ತಾಲೂಕು ಆಡಳಿತ, ಪೊಲೀಸ್, ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರವೇ ಜಾತ್ರೆಯ ಯಶಸ್ಸಿಗೆ ಕಾರಣ” ಎಂದು ಹೇಳಿದರು.
“ರೈತರು ದೇಶದ ಬೆನ್ನೆಲುಬು, ದೇಶ ಕಾಯುವ ಸೈನಿಕರೇ ಭಾರತದ ಶಕ್ತಿ. ರೈತರು ಹಾಗೂ ಯೋಧರ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರನ್ನು ಸನ್ಮಾನಿಸುತ್ತಿರುವುದು ಅಭಿನಂದನೀಯ ಕೆಲಸ” ಎಂದು ತಿಳಿಸಿದರು.
ಇದನ್ನೂ ಓದಿ: ಶಿವರಾತ್ರಿ ಜಾತ್ರೆ: 5 ದಿನಗಳು ಮಲೆಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನ ನಿರ್ಬಂಧ
“ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಗೆ ಪ್ರತಿ ದಿನವೂ ಒಂದು ಲಕ್ಷ ಜನರು ಬರುವ ನಿರೀಕ್ಷೆ ಇಟ್ಟುಕೊಂಡು ಎಲ್ಲ ಸಿದ್ಧತೆಯನ್ನು ನಡೆಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಜನರು ಬಂದಿದ್ದು, 10 ದಿನಗಳಲ್ಲಿ 15 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಊಟ, ವಸತಿ ವ್ಯವಸ್ಥೆ, ಸಂಚಾರ, ಸುರಕ್ಷತೆ, ಸ್ವಚ್ಛತೆ ಯಾವುದೇ ವಿಷಯದಲ್ಲೂ ತೊಂದರೆ ಆಗದಂತೆ ನಿಭಾಯಿಸಿದ ರೀತಿಗೆ ಎಲ್ಲರಿಗೂ ಧನ್ಯವಾದಗಳು” ಎಂದರು.
ಜಾತ್ರಾ ಯಶಸ್ಸಿಗೆ ವಿವಿಧ ಸಮಿತಿಗಳ ಮುಖಾಂತರ ಆರ್ಥಿಕವಾಗಿ ಹಾಗೂ ಸೇವಾ ರೂಪದಲ್ಲಿ ಸಹಕರಿಸಿದ ಎಲ್ಲ ಸೇವಾಕರ್ತರಿಗೂ ಜಾತ್ರಾ ಸಮಿತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಖಜಾಂಚಿ ನಾಗೇಂದ್ರ ಕುಮಟಾ, ಮಾಜಿ ಎಂಎಲ್‌ಸಿ ಪ್ರಫುಲ್ಲಾ ಮಧುಕರ್, ವಿ.ಟಿ.ಸ್ವಾಮಿ, ಉಪಾಧ್ಯಕ್ಷರು, ವಿವಿಧ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು, ಪದಾಧಿಕಾರಿಗಳು, ಸದಸ್ಯರು, ಕಚೇರಿ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Delhi Liquor Scam: ದೆಹಲಿ ಅಬಕಾರಿ ನೀತಿ ಹಗರಣ, ಐವರು ಆರೋಪಿಗಳ ಜಾಮೀನು ಅರ್ಜಿ ವಜಾ
ಮಾರಿಕಾಂಬಾ ಜಾತ್ರೆ ಸಂಪನ್ನ
ಶ್ರೀ ಮಾರಿಕಾಂಬಾ ದೇವಿಯ ಆಕರ್ಷಕ ಮೂರ್ತಿಯನ್ನು ವೈಭವಯುತ ರಾಜಬೀದಿ ಉತ್ಸವದೊಂದಿಗೆ ಬುಧವಾರ (ಫೆ.೧೫) ಮಧ್ಯರಾತ್ರಿ ವನಕ್ಕೆ ಬಿಡುವ ಕಾರ್ಯಕ್ರಮದ ಮೂಲಕ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಯು ಸಂಪನ್ನಗೊಂಡಿತು. ಹೀಗೆ ಒಂಬತ್ತು ದಿನಗಳ ವಿಶೇಷ ಪೂಜಾ ವಿಧಿವಿಧಾನಗಳ ನಂತರ ಬುಧವಾರ ರಾತ್ರಿ ಶ್ರೀ ಮಾರಿಕಾಂಬಾ ಜಾತ್ರೆಯು ಮುಕ್ತಾಯಗೊಂಡಿತು. ಮಾರಿಕಾಂಬೆಯನ್ನು ವನಕ್ಕೆ ಬಿಡುವ ರಾಜಬೀದಿ ಉತ್ಸವದ ಮೆರವಣಿಗೆಯಲ್ಲಿ ಡೊಳ್ಳು ತಂಡಗಳು, ವೇಷಭೂಷಣಗಳ ನೃತ್ಯ ಕಲಾವಿದರು, ವಿವಿಧ ವಾದ್ಯಗಳ ತಂಡದವರು ಪಾಲ್ಗೊಂಡಿದ್ದರು. ಮಧ್ಯರಾತ್ರಿ ಆರಂಭಗೊಂಡ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡರು.
ಇದನ್ನೂ ಓದಿ: ICC Apology: ಟೀಮ್ ಇಂಡಿಯಾ ಬಳಿ ಕ್ಷಮೆ ಕೇಳಿದ ಐಸಿಸಿ
ಮೂರು ವರ್ಷಗಳ ಹಿಂದಿನ ಶ್ರೀ ಮಾರಿಕಾಂಬಾ ಜಾತ್ರೆಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ ಜಾತ್ರೆ ಇದಾಗಿತ್ತು. ಆದರೆ, ಈ ವರ್ಷ ನಡೆದ ಜಾತ್ರೆಯು ಎಲ್ಲ ಜಾತ್ರೆಗಳನ್ನು ಮೀರಿಸಿತ್ತು. ಹತ್ತು ದಿನದ ಜಾತ್ರೆಯಲ್ಲಿ 15-18 ಲಕ್ಷಕ್ಕೂ ಅಧಿಕ ಜನರು ಶ್ರೀ ಮಾರಿಕಾಂಬಾ ಜಾತ್ರೆಗೆ ಸಾಗರಕ್ಕೆ ಆಗಮಿಸಿದ್ದರು ಎಂದು ಅಂದಾಜಿಸಲಾಗಿದೆ. ಎಲ್ಲ ವ್ಯವಸ್ಥೆಯು ಅಚ್ಚುಕಟ್ಟಾಗಿ ಮಾಡಲಾಗಿತ್ತು. ನಗರಸಭೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಜಾತ್ರಾ ಸಮಿತಿ, ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರದಿಂದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಇದನ್ನೂ ಓದಿ: Latur: ಲಾತೂರ್ ನಗರದಲ್ಲಿ ಭೂಮಿಯಿಂದ ನಿಗೂಢ ಶಬ್ದ, ಭೂಕಂಪದ ಮುನ್ಸೂಚನೆಯಾ?
ಸಾಗರದ ನಗರಸಭೆ ಆವರಣದಲ್ಲಿ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಸಾಂಸ್ಕೃತಿಕ ಸಂಭ್ರಮದ ಸಮಾರೋಪ ನಡೆಯಿತು. ಸಾಗರದ ರವಿವರ್ಮ ಆರ್ಟ್ಸ್ ಸಂಸ್ಥೆಯ ವಿದ್ಯಾರ್ಥಿಗಳು ಬಿಡಿಸಿದ ಚಿತ್ರಗಳು ಎಲ್ಲರ ಗಮನ ಸೆಳೆದವು. ಸಾಗರ ಜೇನುಗೂಡು ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಸುರೇಖಾ ಹೆಗ್ಡೆ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಯಕ್ಷಗಾನ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.