ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಯ (Sagara Marikamba Jatre) ಪ್ರಯುಕ್ತ ಮೂರು ದಿನಗಳ ಕಾಲ ನಡೆದ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯು ಸಾವಿರಾರು ಜನರ ಮೆಚ್ಚುಗೆ ಗಳಿಸಿತು. ಜಾತ್ರಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ ಭಾನುವಾರ (ಫೆ.೧೨) ಮುಕ್ತಾಯಗೊಂಡಿತು.
ಭಾನುವಾರವು ಕುಸ್ತಿ ಪಂದ್ಯಾವಳಿಯ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಹಾಗೂ ರಜಾ ದಿನ ಆಗಿದ್ದರಿಂದ ಸಾವಿರಾರು ಪ್ರೇಕ್ಷಕರು ಆಗಮಿಸಿ ಕುಸ್ತಿ ಪಂದ್ಯಾವಳಿ ವೀಕ್ಷಿಸಿದರು. ರೋಚಕ ಹಣಾಹಣಿಯಿಂದ ಕೂಡಿರುತ್ತಿದ್ದ ಪಂದ್ಯದ ವೇಳೆ ಜನರು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು.
ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯ ಹಾಗೂ ಬೇರೆ ರಾಜ್ಯಗಳ ಕುಸ್ತಿಪಟುಗಳು ಅತ್ಯುತ್ತಮ ಪಟ್ಟುಗಳನ್ನು ಪ್ರದರ್ಶಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡರು. ದಾವಣಗೆರೆ, ಶಿಕಾರಿಪುರ, ಭದ್ರಾವತಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ತಾಲೂಕುಗಳಿಂದ ಕುಸ್ತಿಪಟುಗಳು ಆಗಮಿಸಿ ಸ್ಪರ್ಧಿಸಿದ್ದರು.
ಕುಸ್ತಿ ಪಂದ್ಯಾವಳಿಯ ಮೂರನೇ ದಿನದ ಪಂದ್ಯಗಳಲ್ಲಿ ಘಟಾನುಘಟಿ ಕುಸ್ತಿಪಟುಗಳ ಪಂದ್ಯಗಳು ನಡೆದವು. ರಾಜ್ಯ ಹಾಗೂ ಬೇರೆ ರಾಜ್ಯಗಳ ಕುಸ್ತಿಪಟುಗಳ ನಡುವಿನ ಪಂದ್ಯದಲ್ಲಿ ಸ್ಥಳೀಯ ಕುಸ್ತಿಪಟುಗಳು ವಿಜೇತರಾದ ಸಂದರ್ಭದಲ್ಲಿ ಪ್ರೇಕ್ಷಕರು ಸಂಭ್ರಮಿಸಿದರು. ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಗಳಲ್ಲಿ ಗಮನ ಸೆಳೆದಿದ್ದ ಕುಸ್ತಿಪಟುಗಳು ಆಗಮಿಸಿದ್ದರು. ಮಹಾರಾಷ್ಟ್ರದ ರಾಮ್, ಹರಿಯಾಣದ ಬಂಟಿ, ತೇಜು ಮತ್ತಿತರರು ಆಗಮಿಸಿದ್ದರು.
ಇದನ್ನೂ ಓದಿ: Cheque bounce : ಚೆಕ್ ಬೌನ್ಸ್ ಕೇಸ್; ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿಗೆ 6 ತಿಂಗಳು ಜೈಲು ಶಿಕ್ಷೆ
ಕುಸ್ತಿ ಪಂದ್ಯಾವಳಿಯಲ್ಲಿ ನುರಿತ ತೀರ್ಪುಗಾರರು ಭಾಗವಹಿಸಿದ್ದರು. ಕುಸ್ತಿಪಟುಗಳಿಗೆ ಊಟ, ವಸತಿ ವ್ಯವಸ್ಥೆಯನ್ನು ಸಮಿತಿಯ ವತಿಯಿಂದ ಮಾಡಲಾಗಿತ್ತು. ಜಾತ್ರೆಯ ಕುಸ್ತಿ ಸಮಿತಿಯು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿತ್ತು. ಮೂರು ದಿನಗಳ ಕಾಲ ನಡೆದ ಕುಸ್ತಿ ಪಂದ್ಯಗಳನ್ನು ಪ್ರತಿ ದಿನವೂ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ವೀಕ್ಷಿಸಿದರು. ಕುಸ್ತಿ ಪಂದ್ಯಗಳಲ್ಲಿ ಗೆದ್ದ ಕುಸ್ತಿಪಟುಗಳಿಗೆ ಬೆಳ್ಳಿ ಪದಕ, ಬೆಳ್ಳಿ ಬಳೆ, ಬೆಳ್ಳಿಯ ಗದೆ ಸೇರಿ ವಿಶೇಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅವರ ನೇತೃತ್ವದಲ್ಲಿ ಕುಸ್ತಿ ಸಂಚಾಲಕರಾಗಿ ಎಸ್.ಅಶೋಕ್, ಸಹ ಸಂಚಾಲಕರಾಗಿ ಎಂ.ಎಸ್. ಶಶಿಕಾಂತ್ ಮತ್ತು ಜಗನ್ನಾಥ್ ಜೇಡಿಕುಣಿ ಕಾರ್ಯ ನಿರ್ವಹಿಸಿದರು.
ಗಮನಸೆಳೆದ ರಾಜ್ಯ, ಅಂತರಾಜ್ಯ ಕುಸ್ತಿಪಟುಗಳ ಪಂದ್ಯಾವಳಿ
ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯ, ಅಂತಾರಾಜ್ಯದ ಕುಸ್ತಿಪಟುಗಳ ನಡುವಿನ ಪಂದ್ಯಗಳು ಗಮನ ಸೆಳೆದವು. ರಾಷ್ಟ್ರೀಯ ಕುಸ್ತಿಪಟು ಹರಿಯಾಣದ ಸಾಹಿಲ್ ಹಾಗೂ ಮೈಸೂರಿನ ಯಶವಂತ್ ಕಾಳಿಂಗ ನಡುವಿನ ಪಂದ್ಯದಲ್ಲಿ ಯಶವಂತ್ ವಿಜೇತರಾದರು. 90 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಪಂಜಾಬ್ ಅಮೃತ್‌ಸರ್‌ನ ಕವಲ್‌ಜಿತ್‌ಸಿಂಗ್ ಕೊಲ್ಲಾಪುರದ ಹಸನ್ ಪಟೇಲ್ ನಡುವಿನ ರೋಚಕ ಹಣಾಹಣಿಯ ಪಂದ್ಯದಲ್ಲಿ ಕವಲ್‌ಜಿತ್ ಸಿಂಗ್ ಗೆದ್ದರು. ಕುಸ್ತಿ ಪಂದ್ಯ ವಿಜೇತ ಕವಲ್‌ಜಿತ್ ಸಿಂಗ್‌ಗೆ 1.೧೦ ಲಕ್ಷ ರೂ. ನಗದು ಬಹುಮಾನ ನೀಡಿ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಪಂಜಾಬ್‌ನ ಮನ್‌ಪ್ರೀತ್‌ಸಿಂಗ್ ಹಾಗೂ ಕರ್ನಾಟಕದ ಜಮಖಂಡಿಯ ಶಿವಯ್ಯ ಪೂಜಾರಿ ನಡುವಿನ ಪಂದ್ಯದಲ್ಲಿ ಶಿವಯ್ಯ ಗೆಲುವು ಸಾಧಿಸಿ 1 ಲಕ್ಷ ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡರು. ಕುಸ್ತಿ ಸಂಚಾಲಕ ಎಸ್.ಅಶೋಕ್, ಸಹ ಸಂಚಾಲಕ ಎಂ.ಎಸ್.ಶಶಿಕಾಂತ್ ಮತ್ತು ಜಗನ್ನಾಥ್ ಜೇಡಿಕುಣಿ ಹಾಜರಿದ್ದರು. ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 150ಕ್ಕೂ ಹೆಚ್ಚು ಪಂದ್ಯಗಳು ನಡೆದಿದ್ದು, 200ಕ್ಕೂ ಹೆಚ್ಚು ಕುಸ್ತಿಪಟುಗಳು ಆಗಮಿಸಿ ಭಾಗವಹಿಸಿದ್ದರು. 100ಕ್ಕೂ ಅಧಿಕ ಬೆಳ್ಳಿ ಪದಕಗಳನ್ನು ವಿಜೇತರಿಗೆ ನೀಡಲಾಯಿತು. ಕೊನೆಯ ಕುಸ್ತಿಯಾಗಿ ಅಖಾಡ ಬಳೆ ಪಂದ್ಯದಲ್ಲಿ ಹರಿಯಾಣದ ಬಂಟಿ ವಿಜೇತರಾಗಿ ಅಖಾಡ ಬಳೆ ಗೆದ್ದರು.
ಇದನ್ನೂ ಓದಿ: Vistara Kathaspardhe: ಇದು ಪ್ಯಾನ್ ಇಂಡಿಯಾ ಸ್ಪರ್ಧೆಯಾಗಲಿ: ವಿಸ್ತಾರ ನ್ಯೂಸ್ ಕಥಾಸ್ಪರ್ಧೆಗೆ ಸಾಹಿತ್ಯಲೋಕ ಮೆಚ್ಚುಗೆ
ಫೆ. 14ರಂದು ಕಲಾಸಿರಿ ಕಾರ್ಯಕ್ರಮ
ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಿರ್ಮಿಸಿರುವ ನಗರಸಭೆ ಆವರಣದ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಫೆ. 14ರ ಸಂಜೆ ಕಲಾಸಿರಿ ಕಾರ್ಯಕ್ರಮ ನಡೆಯಲಿದೆ. ಫೆ. 14 ರ ಸಂಜೆ 5.30ರಿಂದ 6 ರವರೆಗೆ ಸಾಗರ ಮೆಸ್ಕಾಂ ಮಹಿಳಾ ತಂಡದಿಂದ ನೃತ್ಯ ಪ್ರದರ್ಶನ, ಸಂಜೆ 6ರಿಂದ 7ರವರೆಗೆ ಚಿಟಗೇರಿ ಶಹನಾಯಿ ಕಲಾ ಮೇಳ ತಂಡದಿಂದ ಶಹನಾಯ್ ವಾದನ, 7.45 ರವರೆಗೆ ಸಾಗರ ನಾಟ್ಯ ತರಂಗ ಟ್ರಸ್ಟ್ ನಿಂದ ಭರತನಾಟ್ಯ, ರಾತ್ರಿ 7.45ರಿಂದ 9 ರವರೆಗೆ ಬೆಂಗಳೂರು ದತ್ತಶ್ರೀ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಸುಧಾಕರ, 9 ರಿಂದ 9.30 ರವರೆಗೆ ಬಳ್ಳಾರಿ ಬಸವರಾಜು ಅವರಿಂದ ಕೂಚುಪುಡಿ ನೃತ್ಯ, ನಂತರ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಭರತ್ ಜಿ.ಕೆ.ಸಾರಥ್ಯದಲ್ಲಿ ಜೀ ಕನ್ನಡ ಗಾಯಕರಾದ ಸುಹನಾ ಸೈಯದ್, ಶಾಶ್ವತಿ ಕಶ್ಯಪ್, ಕೆ.ವಿನಯ್ ಪಾಲ್ಗೊಳ್ಳುವರು. ಡ್ಯಾನ್ಸಿಂಗ್ ಸ್ಟಾರ್ ಮಹಾಲಕ್ಷ್ಮೀ ತಂಡದಿಂದ ನೃತ್ಯ ಪ್ರದರ್ಶನ ಇರಲಿದೆ.
ಇದನ್ನೂ ಓದಿ: INDvsAUS Test: ಮೂರನೇ ಪಂದ್ಯ ಇಂದೋರ್ನಲ್ಲಿ ಆಯೋಜನೆ, ಧರ್ಮಶಾಲಾಗೆ ಆತಿಥ್ಯ ನಷ್ಟ