Site icon Vistara News

Sagara News: ನೂತನ ಸಮಿತಿಯ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾರಿಕಾಂಬಾ ಹಿತರಕ್ಷಣಾ ಸಮಿತಿಯಿಂದ ಮನವಿ

Marikamba Hitarakshana Samiti sagara

#image_title

ಸಾಗರ: 2023ರ ಮಾರಿಕಾಂಬಾ ಜಾತ್ರೆ (Marikamb jatre) ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ವ್ಯವಸ್ಥಾಪಕ ಸಮಿತಿ ನೀಡಿದ ವಾಗ್ದಾನದಂತೆ ಸರ್ವ ಸದಸ್ಯರ ಸಭೆ ಕರೆದು ಲೆಕ್ಕಪತ್ರ ಮಂಡಿಸಿ, ನೂತನ ಸಮಿತಿಯ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾರಿಕಾಂಬಾ ಹಿತರಕ್ಷಣಾ ಸಮಿತಿಯ ವತಿಯಿಂದ ಮನವಿ ಸಲ್ಲಿಸಲಾಯಿತು.

ಹಿತರಕ್ಷಣಾ ಸಮಿತಿಯ ಸಂಚಾಲಕ ಎಂ.ಡಿ.ಆನಂದ್ ಮಾತನಾಡಿ, “ಎಲ್ಲರ ಸಹಕಾರದಿಂದ ಮಾರಿಕಾಂಬಾ ಜಾತ್ರೆ ಹಿಂದಿನ ಎಲ್ಲ ವರ್ಷಗಳ ದಾಖಲೆಯನ್ನು ಮುರಿದು ಅತ್ಯಂತ ಯಶಸ್ವಿಯಾಗಿದೆ. ಜಾತ್ರೆಯ ಯಶಸ್ಸಿಗೆ ಸಹಕಾರ ನೀಡಿದ ಜಿಲ್ಲಾಡಳಿತ, ತಾಲೂಕು ಆಡಳಿತ, ನಗರಸಭೆ ಮತ್ತು ಅಧಿಕಾರಿ ವರ್ಗಕ್ಕೆ, ಪ್ರತ್ಯಕ್ಷ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಸಮಿತಿಯು ಕೃತಜ್ಞತೆ ಸಲ್ಲಿಸುತ್ತಿದೆ. ಹಾಲಿ ಶಾಸಕರು, ಮಾಜಿ ಸಚಿವರು, ಶಾಸಕರ ಸಲಹೆ ಮೇರೆಗೆ ಹಿತರಕ್ಷಣಾ ಸಮಿತಿಯು ಜಾತ್ರೆಯ ಯಶಸ್ಸಿಗೆ ಸಹಕಾರ ನೀಡಿದೆ. ಸಮಿತಿ ನೀಡಿದ ವಾಗ್ದಾನದಂತೆ ಜಾತ್ರೆ ಮುಗಿದು ಒಂದು ತಿಂಗಳಾಗಿದೆ. ಮುಂದಿನ ಎರಡು ತಿಂಗಳಿನಲ್ಲಿ ಮಹಾಸಭೆ ಕರೆದು ಲೆಕ್ಕಪತ್ರ ಮಂಡಿಸಿ ನೂತನ ಸಮಿತಿ ರಚನೆಗೆ ಅವಕಾಶ ಕಲ್ಪಿಸಬೇಕು” ಎಂದು ಮನವಿ ಮಾಡಿದರು.

ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕೆ.ಎನ್.ನಾಗೇಂದ್ರ ಮಾತನಾಡಿ, “ಜಾತ್ರೆಯ ಯಶಸ್ಸಿಗೆ ಸಹಕಾರ ನೀಡಿದ ಎಲ್ಲರಿಗೂ ಸಮಿತಿಯು ಕೃತಜ್ಞತೆ ಸಲ್ಲಿಸುತ್ತಿದೆ. ಈಗಾಗಲೇ ಬಹುತೇಕ ಸಮಿತಿಯ ಲೆಕ್ಕಪತ್ರಗಳು ಬಂದಿದ್ದು, ಪರಿಶೀಲನೆಯ ಹಂತದಲ್ಲಿದೆ. ಇನ್ನು ಎರಡು ಮೂರು ಸಮಿತಿಯು ಲೆಕ್ಕಪತ್ರ ಕೊಡಬೇಕಾಗಿದ್ದು ತಕ್ಷಣ ನೀಡಲು ಸೂಚನೆ ನೀಡಲಾಗಿದೆ. ಲೆಕ್ಕಪತ್ರ ಪರಿಶೋಧನೆ ನಂತರ ಮಹಾಸಭೆಯನ್ನು ಕರೆದು ಲೆಕ್ಕಪತ್ರ ಮಂಡಿಸಲಾಗುತ್ತದೆ. ಮಹಾಸಭೆ ತೆಗೆದುಕೊಳ್ಳುವ ನಿರ್ಧಾರದಂತೆ ನೂತನ ಸಮಿತಿ ರಚನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆʼ ಎಂದು ಹೇಳಿದರು.

ಇದನ್ನೂ ಓದಿ: Havyaka Awards : ಪೆರುವೋಡಿ, ಲಕ್ಷ್ಮೀಶ ಸೋಂದಾ, ಜಿ.ಎಸ್‌. ಹೆಗಡೆ ಸಹಿತ 7 ಮಂದಿ ಸಾಧಕರಿಗೆ ಹವ್ಯಕ ವಾರ್ಷಿಕ ವಿಶೇಷ ಪ್ರಶಸ್ತಿ

ಈ ಸಂದರ್ಭದಲ್ಲಿ ವ್ಯವಸ್ಥಾಪಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ. ಗಿರಿಧರ ರಾವ್, ಹಿತರಕ್ಷಣಾ ಸಮಿತಿಯ ವಿ.ಶಂಕರ್, ರಾಮಪ್ಪ, ನಿತ್ಯಾನಂದ ಶೆಟ್ಟಿ, ಶ್ರೀಧರ್, ಗೋಪಾಲಕೃಷ್ಣ ಶ್ಯಾನಭಾಗ್, ಕೊಟ್ರಪ್ಪ, ಮಂಜುನಾಥ್, ಧರ್ಮರಾಜ್, ಈಶ್ವರ್, ಸದಾನಂದ, ಜಗನ್ನಾಥ್ ಇನ್ನಿತರರು ಹಾಜರಿದ್ದರು.

Exit mobile version