ಕೊಪ್ಪ: ತಾಲೂಕಿನ ಹರಿಹರಪುರದ ಶ್ರೀ ಮಠದ ಸನಾತನ ಹಿಂದೂ ಸಮಾಜ ಪರಿಷತ್ “ಸಮಾನ ಸಂಸ್ಕಾರ ಸಮಾವೇಶ- ಸಂಸ್ಕಾರ ಹಬ್ಬʼʼ (Samskara Habba) ವನ್ನು ನವೆಂಬರ್ 11 ರಂದು ಶ್ರೀಮಠದಲ್ಲಿ ಆಯೋಜಿಸಿದೆ.
ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದು, ಬೆಂಗಳೂರಿನ ಶ್ರೀ ಬೇಲಿ ಮಠ ಮಹಾ ಸಂಸ್ಥಾನದ ಶ್ರೀ ನಿ.ಪ್ರ. ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು, ಚಿತ್ರದುರ್ಗ ಮಾದಾರ ಚೆನ್ನಯ್ಯ ಸಂಸ್ಥಾನದ ಜಗದ್ಗುರುಗಳಾದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಹಾಗೂ ಶ್ರೀಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಸೀತಾರಾಂ ಕೆದಿಲಾಯ, ಬೆಂಗಳೂರಿನ ಅದಮ್ಯ ಚೇತನದ ಅಧ್ಯಕ್ಷರಾದ ತೇಜಸ್ವಿನಿ ಅನಂತ್‌ಕುಮಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಡಿ. ಎನ್. ಜೀವರಾಜ್, ಶಾಸಕ ಟಿ.ಡಿ. ರಾಜೇಗೌಡ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಸ್. ಸುಧಾಕರ ಶೆಟ್ಟಿ, ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಅನಿಲ್ ಕುಮಾರ್ ಬಿ. ಎಚ್. ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. “ಭಗವದ್ಗೀತಾ-ಯತಾರ್ಥ ಭಾವದೀಪಿಕಾʼʼ ಧ್ವನಿಸುರಳಿಯ ಲೋಕಾರ್ಪಣೆ, ಆಯ್ದ ವಚನಗಳು ಮತ್ತು ಭಗವದ್ಗೀತೆಯ ಭಕ್ತಿಯೋಗದ ಶ್ಲೋಕಗಳ ಸಾಮೂಹಿಕ ಪಾರಾಯಣ, “ಪಂಚಪ್ರಾಣ ವಿಧಿಗಳುʼʼ ಪ್ರತಿಜ್ಞಾ ಬೋಧನೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.
ಏನಿದು ಸಂಸ್ಕಾರ ಹಬ್ಬ?
ನಮ್ಮ ಶಾಸ್ತ್ರವು ಯಾವುದೇ ಭೇದಭಾವವಿಲ್ಲದೆ ಪ್ರತಿಯೊಬ್ಬ ಸನಾತನ ಹಿಂದೂ ಧರ್ಮದವರೂ ‘ಪಂಚಪ್ರಾಣ ವಿಧಿಗಳೆಂಬ’ ಐದು ಸಮಾನ ಸಂಸ್ಕಾರಗಳನ್ನು ಜೀವನದಲ್ಲಿ ತಪ್ಪದೇ ಪಾಲಿಸಬೇಕೆಂದು ಹೇಳಿದೆ. ಈ ಸಂಸ್ಕಾರವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹರಿಹರಪುರದ ಶ್ರೀಮಠವು “ಸನಾತನ ಹಿಂದೂ ಸಮಾಜ ಪರಿಷತ್ʼʼನ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.
ಯಾರ ಭಾವನೆಗೂ ಧಕ್ಕೆ ಬಾರದಂತೆ, ಸಮಸ್ತ ಹಿಂದೂ ಸಮಾಜವನ್ನು ವ್ಯವಸ್ಥಿತವಾಗಿ ಒಂದು ಸಮಾನ ಚೌಕಟ್ಟಿನೊಳಗೆ ತರುವುದರ ಮೂಲಕ ತಾರತಮ್ಯ ರಹಿತವಾದ, ಸದೃಢವಾದ, ಸುಸಂಸ್ಕೃತವಾದ ಮತ್ತು ಶ್ರೇಷ್ಠವಾದ ಸಮಸಮಾಜವನ್ನು ನಿರ್ಮಾಣ ಮಾಡುವ ಏಕೋದ್ದೇಶ ಈ ಕಾರ್ಯಕ್ರಮದ ಹಿಂದಿದೆ.
ಜಾತಿ ಮತ್ತು ಪಕ್ಷವನ್ನು ಸಂಪೂರ್ಣವಾಗಿ ಹೊರಗಿಟ್ಟು, ಸದಾ ಮಾನವತ್ವದ ಚೌಕಟ್ಟಿನೊಳಗೆ ತನ್ನ ಕೆಲಸವನ್ನು
ಏಕನಿಷ್ಠೆಯಿಂದ ಮಾಡಿಕೊಂಡು ಬರುತ್ತಿರುವ ಪರಿಷತ್ತು, “ಸಮಾನ ಸಂಸ್ಕಾರ ಅಭಿಯಾನʼʼವನ್ನು ಕೊಪ್ಪ
ತಾಲೂಕಿನಲ್ಲಿ ಹಮ್ಮಿಕೊಂಡು, ಅದನ್ನು ಯಶಸ್ವಿಯಾಗಿ ಮುಗಿಸಿದೆ.
ಈ ಅಭಿಯಾನದ ಅಂಗವಾಗಿ ಕೊಪ್ಪ ತಾಲೂಕಿನ ಪ್ರತಿಯೊಂದು ಹಿಂದುಗಳ ಮನೆಗೆ ಖುದ್ದಾಗಿ ಭೇಟಿ ಕೊಟ್ಟು, ಅವರಿಗೆ ಐದು ಸಮಾನ ಸಂಸ್ಕಾರಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿ, ಮೌಲ್ಯಯುತವಾದ ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ತಾಲೂಕಿನ ಪ್ರತಿಯೊಂದು ಶಾಲಾ- ಕಾಲೇಜುಗಳಲ್ಲಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಭಗವದ್ಗೀತಾ ಕಂಠಪಾಠ ಸ್ಪರ್ಧೆಯನ್ನು ನೆಡಸಲಾಗಿದೆ. ಅಲ್ಲದೆ ತಾಲೂಕಿನ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಯ್ದ ವಚನಗಳು ಮತ್ತು ಭಗವದ್ಗೀತೆಯ ಭಕ್ತಿಯೋಗದ ಶ್ಲೋಕಗಳನ್ನು ಪಾರಾಯಣ ಮಾಡಲು ಕಲಿಸಿಕೊಡಲಾಗಿದೆ.
ಎಲ್ಲರೂ ಶ್ರದ್ಧಾಭಕ್ತಿಯಿಂದ ಕಲಿತುಕೊಂಡಿರುವ ವಚನಗಳು ಮತ್ತು ಭಕ್ತಿಯೋಗದ ಶ್ಲೋಕಗಳ ಸಮರ್ಪಣಾ ಕಾರ್ಯಕ್ರಮವೇ ಈ “ಸಂಸ್ಕಾರ ಹಬ್ಬʼʼ. ಹಿಂದೂ ಧರ್ಮಕ್ಕೆ ದಿಕ್ಸೂಚಿಯಾಗಲಿರುವ, ಹಿಂದೂ ಧರ್ಮದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಜರುಗುತ್ತಿರುವ, ಜಾತ್ಯಾತೀತವಾದ ಮತ್ತು ಪಕ್ಷಾತೀತವಾದ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಕೊಪ್ಪ ತಾಲೂಕಿನ ಎಲ್ಲಾ ಸಮುದಾಯದವರು ಭಾಗವಹಿಸಲಿದ್ದು, ನಾಡಿನ ಪ್ರಮುಖ ಪರಮಪೂಜ್ಯರ ದಿವ್ಯ ಸಾನ್ನಿಧ್ಯದಲ್ಲಿ ನಡೆಯುತ್ತಿದೆ.
ಈ ಕಾರ್ಯಕ್ರದಲ್ಲಿ ಆಸಕ್ತರೆಲ್ಲರೂ ಭಾಗವಹಿಸಬೇಕೆಂದು ಶ್ರೀ ಮಠದ ಆಡಳಿತಾಧಿಕಾರಿ ಡಾ. ಬಿ.ಎಸ್. ರವಿಶಂಕರ್ ಕೋರಿದ್ದಾರೆ.
ಇದನ್ನೂ ಓದಿ| ಮುಜರಾಯಿ ದೇಗುಲಗಳಲ್ಲಿ ಮುದ್ರಾಧಾರಣೆಗಿಲ್ಲ ಅವಕಾಶ; ಸಚಿವರ ಗಮನಕ್ಕೆ ಬಂದಿಲ್ಲವೇ?: ಆದೇಶ ವಾಪಸ್‌ಗೆ ಜನಾಗ್ರಹ