ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ (Shimoga News) ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಹೊಸ್ತಿಲ ಹುಣ್ಣಿಮೆಯ ಪ್ರಯುಕ್ತ ಸಾವಿರಾರು ಭಕ್ತರು ಗುರುವಾರ (ಡಿ.೮) ಆಗಮಿಸಿದ್ದರು.
ಭಕ್ತರು ಶ್ರೀ ದೇವಿಯ ದರ್ಶನ ಪಡೆದು ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು. ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಲೆನಾಡಿನ ಆರಾಧ್ಯ ದೇವಿ ಶ್ರೀ ರೇಣುಕಾ ದೇವಿಯನ್ನು ದರ್ಶನ ಪಡೆದು ಉದೋ ಉದೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು.
ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ ತ್ರಿಶೂಲದ ಭೈರಪ್ಪ ದೇವರಿಗೆ ಹುಣ್ಣಿಮೆಯ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವರಿನ ಹಸಿರಿನಲ್ಲಿ ಭಕ್ತರು ವಿವಿಧ ಧಾರ್ಮಿಕ ಸೇವೆ, ಹರಿಕೆ, ಪೂಜೆ ಸಲ್ಲಿಸಿದರು. ನಂತರ ಭಕ್ತರು ತಮ್ಮ ಬಂಧು ಬಳಗದವರ ಜತೆ ಅಡುಗೆ ಸಿದ್ಧಪಡಿಸಿ ಸಾಮೂಹಿಕ ಭೋಜನ ಮಾಡಿದರು.
ಶಾಲೆಗಳಲ್ಲಿ ಶೈಕ್ಷಣಿಕ ಪ್ರವಾಸ ಸಹ ನಡೆಯುತ್ತಿದ್ದು, ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಭಕ್ತರಿಂದ ಲಕ್ಷಾಂತರ ರೂ., ಆದಾಯ ಬರುತ್ತಿದ್ದರೂ ಭಕ್ತರಿಗೆ ಕುಡಿಯುವ ನೀರು, ಶೌಚಗೃಹ ಸೇರಿದಂತೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ ಎಂದು ಭಕ್ತರೊಬ್ಬರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ | Shootout In Bangalore | ಬೆಂಗಳೂರು ಹೊರವಲಯದಲ್ಲಿ ಗುಂಡಿನ ಸದ್ದು; ಬೈಕ್‌ನಲ್ಲಿ ಬಂದು ಶೂಟ್ ಮಾಡಿದರು!