Site icon Vistara News

ಮಂತ್ರಾಲಯ: ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿರುವ ಶ್ರೀಮಠ

mantralayam plastics

ಮಂತ್ರಾಲಯ: ಇಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿ ಮಠವು ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧಕ್ಕೆ ಮುಂದಾಗಿದ್ದು, ಶ್ರೀ ಕ್ಷೇತ್ರದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಮಠದ ಭೋಜನ ಶಾಲೆ ಅನ್ನಪೂರ್ಣದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ ಬಳಕೆಯನ್ನು ಈಗಾಗಲೇ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದುವರೆಗೆ ಬಳಸುತ್ತಿದ್ದ ಪ್ಲಾಸ್ಟಿಕ್‌ ಲೋಟಗಳಿಗೆ ಬದಲಾಗಿ ಈಗ ಸ್ಟೀಲ್‌ ಲೋಟವನ್ನು ಒದಗಿಸಲಾಗುತ್ತಿದೆ. ಪರಿಮಳ ಪ್ರಸಾದದ ವಿತರಣೆಗೂ ಪ್ಲಾಸ್ಟಿಕ್‌ ಬಳಸದಂತೆ ಕ್ರಮ ತೆಗೆದುಕೊಳ್ಳಲು ಮಠವು ಬದ್ಧವಾಗಿದೆ ಎಂದು ಮಠದ ವ್ಯವಸ್ಥಾಪಕ ಎಸ್‌ ಕೆ ಶ್ರೀನಿವಾಸ್‌ ಹೇಳಿದ್ದಾರೆ.

ಶ್ರೀ ಮಠದ ಆವರಣದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ ಬಳಸದಂತೆ ಮಠದ ಧ್ವನಿ ವರ್ಧಕದಲ್ಲಿ ಪ್ರಕಟಣೆಯನ್ನೂ ನೀಡಲಾಗುತ್ತಿದೆ. ಈ ಮೂಲಕ ಭಕ್ತಾದಿಗಳಲ್ಲಿ ಪ್ಲಾಸ್ಟಿಕ್‌ ನಿಷೇಧದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶ್ರೀನಿವಾಸ್‌ ತಿಳಿಸಿದ್ದಾರೆ.

ಶ್ರೀ ಮಠದಲ್ಲಿ ಮಾತ್ರವಲ್ಲ, ಮಂತ್ರಾಲಯದಲ್ಲಿಯೇ ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಶ್ರೀಮಠ ಪ್ರಯತ್ನಿಸುತ್ತಿದೆ. ಈಗಾಗಲೇ ಅಂಗಡಿಗಳ ಮಾಲೀಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗಿದೆ ಎಂದು ಶ್ರೀನಿವಾಸ್‌ ಹೇಳಿದ್ದಾರೆ.

ದಕ್ಷಿಣ ಭಾರತದ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾದ ಮಂತ್ರಾಲಯಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸಿ, ಶ್ರೀ ಗುರು ರಾಯರ ಬೃಂದಾವನದ ದರ್ಶನ ಪಡೆಯುತ್ತಾರೆ. ಇಲ್ಲಿಗೆ ಆಗಮಿಸುವ ಭಕ್ತರು ಹೆಚ್ಚಾಗಿ ಏಕ ಬಳಕೆಯ ಪ್ಲಾಸ್ಟಿಕ್‌ ಬಳಸುವುದರಿಂದ ಪ್ಲಾಸ್ಟಿಕ್‌ ತ್ಯಾಜ್ಯ ಇಲ್ಲಿ ಹೆಚ್ಚು ಸಂಗ್ರಹವಾಗುತ್ತಿತ್ತು. ಇದರ ವಿಲೇವಾರಿ ಸ್ಥಳೀಯ ಆಡಳಿತಕ್ಕೆ ದೊಡ್ಡ ಸವಾಲಾಗಿತ್ತು. ಈ ಪ್ಲಾಸ್ಟಿಕ್‌ಗಳು ತುಂಗಭದ್ರಾ ನದಿಯನ್ನೂ ಸೇರುತ್ತಿದ್ದವು.

ಈಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಜುಲೈ೧ ರಿಂದ ಏಕ ಬಳಕೆಯ ಪ್ಲಾಸ್ಟಿಕ್‌ ಅನ್ನು ಸಂಪೂರ್ಣ ನಿಷೇಧಿಸಿರುವುದರಿಂದ ಈ ಅವಕಾಶವನ್ನೇ ಬಳಸಿಕೊಂಡು ಶ್ರೀಮಠವು ಭಕ್ತರ ಪ್ಲಾಸ್ಟಿಕ್‌ ಬಳಕೆಯನ್ನು ನಿಯಂತ್ರಿಸಲು ಮುಂದಾಗಿದೆ.

ಇದನ್ನೂ ಓದಿ | Plastic Ban |‌ ರಾಜ್ಯದಲ್ಲಿ ಜುಲೈ 1ರಿಂದ ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ

Exit mobile version