ಕಾರವಾರ: ಭಟ್ಕಳ ತಾಲೂಕಿನ ಪ್ರಸಿದ್ಧ ಸೋಡಿಗದ್ದೆ (Sodhigadde Fair) ಶ್ರೀ ಮಹಾಸತಿ ದೇವರ ಜಾತ್ರೆಯಲ್ಲಿ ವಿಶೇಷವಾದ ಕೆಂಡ ಸೇವೆ ಮಂಗಳವಾರ (ಜ.೨೪) ನಡೆಯಿತು. ಸಾವಿರಾರು ಭಕ್ತರು ಕೆಂಡ ಸೇವೆ ಮಾಡಿ ಹರಕೆ ಒಪ್ಪಿಸಿದರು. ಬೆಳಗ್ಗೆ 11.30 ಗಂಟೆಗೆ ಆರಂಭವಾದ ಕೆಂಡ ಸೇವೆಯಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ಚಿಕ್ಕ ಮಕ್ಕಳನ್ನು ಪೂಜಾರಿಗಳು ಹಾಗೂ ತಾಯಂದಿರು ಎತ್ತಿಕೊಂಡು ಕೆಂಡ ಹಾಯ್ದರೆ, ಹಲವಾರು ಭಕ್ತರು ಕೆಂಡದ ಮೇಲೆ ನಡೆದು ಹರಕೆ ತೀರಿಸಿದರು.
ಇದನ್ನೂ ಓದಿ | Infosys Foundation Awards: ಆರೋಹಣ್ ಸೋಶಿಯಲ್ ಇನ್ನೋವೇಶನ್ ಪ್ರಶಸ್ತಿಗೆ ಆಹ್ವಾನ, ವಿಜೇತರಿಗೆ 50 ಲಕ್ಷ ರೂ. ಬಹುಮಾನ!
ಜಾತ್ರೆಯಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು. ಜಾತ್ರೆಯ ಸಂದರ್ಭದಲ್ಲಿ ಹೂವಿನ ಪೂಜೆ, ಬಂಗಾರದ ತೊಟ್ಟಿಲು ಸಮರ್ಪಣೆ, ಬೆಳ್ಳಿ, ಬಂಗಾರದ ಕಣ್ಣು, ಬಂಗಾರದ ಆಭರಣ ಇತ್ಯಾದಿಗಳನ್ನು ಭಕ್ತಿಪೂರ್ವಕವಾಗಿ ದೇವಿಗೆ ಸಮರ್ಪಿಸುವ ಕಾರ್ಯ ಕೂಡ ಭಕ್ತರಿಂದ ನಡೆಯುತ್ತದೆ. ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ಜರುಗುವ ಜಾತ್ರೆಯಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಪಾಲ್ಗೊಂಡು ದೇವರಿಗೆ ವಿವಿಧ ಸೇವೆಗಳನ್ನು ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಕಳೆದೆರಡು ವರ್ಷ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಕೆಂಡ ಸೇವೆಯ ಹರಕೆ ತೀರಿಸಲು, ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ದುಪ್ಪಟ್ಟಾಗಿತ್ತು.
ಪ್ರತಿ ವರ್ಷದಂತೆ ದಕ್ಷಿಣ ಕನ್ನಡದ ಭಕ್ತರು ಎತ್ತಿನ ಗಾಡಿ ಶೃಂಗರಿಸಿ, ತಮ್ಮ ಬೇಡಿಕೆಯಾಗಿದ್ದ ಹರಕೆ ತೀರಿಸಿದರಲ್ಲದೇ, ಜಾತ್ರೆಗೆ ಸಾಂಪ್ರದಾಯಿಕ ಮೆರುಗು ತಂದರು. ಜಾತ್ರೆಯಲ್ಲಿ ಯಾವುದೇ ಅನಾಹುತವಾಗದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ದೇವಸ್ಥಾನ ಅಭಿವೃದ್ಧಿ ಸಮಿತಿ, ಇಲಾಖಾ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಪೊಲೀಸರು ಸುಸಜ್ಜಿತ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು.
ಇದನ್ನೂ ಓದಿ | ಚಾಮರಾಜಪೇಟೆ ಈದ್ಗಾ ಮೈದಾನ ಮಾಲೀಕತ್ವ: ಹೈಕೋರ್ಟ್ ಮೆಟ್ಟಿಲೇರಿದ ವಕ್ಫ್ ಬೋರ್ಡ್, ಇಂದೇ ವಿಚಾರಣೆ