Site icon Vistara News

ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ₹180 ಕೋಟಿ ಪ್ರಸ್ತಾವನೆ

anjanadri

ಕೊಪ್ಪಳ : ಹನುಮನ ಜನ್ಮಸ್ಥಳವಾಗಿರುವ ಕೊಪ್ಪಳ‌ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ₹100 ಕೋಟಿ ಅನುದಾನ ಘೋಷಣೆ ಮಾಡಿದೆ. ಹೀಗಾಗಿ ಅಂಜನಾದ್ರಿ ಅಭಿವೃದ್ಧಿಗೆ ಆದಷ್ಟು ಬೇಗನೆ ಚಾಲನೆ ನೀಡಬೇಕು ಎಂದು ಭಕ್ತರು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆ ಅಂಜನಾದ್ರಿಯ ಅಭಿವೃದ್ಧಿಗಾಗಿ ಕೊಪ್ಪಳ ಜಿಲ್ಲಾಡಳಿತ ಈಗಾಗಲೇ ಸುಮಾರು ₹180 ಕೋಟಿ ಮೊತ್ತದ ಯೋಜನಾ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ.

ರಾಮಧೂತ ಆಂಜನೇಯನ ಜನ್ಮಸ್ಥಳದ ಕುರಿತು ಈಗಾಗಲೇ ಬೇರೆ ಬೇರೆ ರಾಜ್ಯಗಳು ವಿವಾದವನ್ನು ಸೃಷ್ಠಿಸುತ್ತಲೇ ಇವೆ. ಹನುಮನ ಜನ್ಮಸ್ಥಳ ರಾಮಾಯಣದಲ್ಲಿ ಕಿಷ್ಕಿಂಧೆ ಪ್ರದೇಶವಾಗಿರುವ ಈಗಿನ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಇವೆ. ಹೀಗಾಗಿ ಅಂಜನಾದ್ರಿಗೆ ರಾಜ್ಯವಷ್ಟೆ ಅಲ್ಲದೆ ಉತ್ತರ ಭಾರತ ಸೇರಿದಂತೆ ನಾನಾ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ.

ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಅಂಜನಾದ್ರಿಯ ಸಮಗ್ರ ಅಭಿವೃದ್ದಿ ಮಾಡಬೇಕಾಗಿದೆ. ಇದರ ಭಾಗವಾಗಿಯೇ ಕಳೆದ ವರ್ಷ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ₹20 ಕೋಟಿ ಅನುದಾನ ನೀಡಿತ್ತು. ಈ ವರ್ಷದ ಬಜೆಟ್‌ನಲ್ಲಿ ₹100 ಕೋಟಿ ಘೋಷಣೆ ಮಾಡಲಾಗಿದೆ. ಆದರೆ, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಇದನ್ನು ಓದಿ| Hanuman birth place: ಹನುಮ ಹುಟ್ಟಿದ್ದು ಯಾವ ಸ್ಥಳದಲ್ಲಿ?

ಈ ನಡುವೆಯೇ ಕೊಪ್ಪಳ ಜಿಲ್ಲಾಡಳಿತ ಅಂಜನಾದ್ರಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಕುರಿತು ಅಂದಾಜು ₹180 ಕೋಟಿ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಪ್ರದಕ್ಷಿಣೆ ಪಥ, ಪಾರ್ಕಿಂಗ್, ಮೂಲಭೂತ ಸೌಲಭ್ಯ, ಆಡಿಯೋ, ವಿಡಿಯೋ ಮಾಹಿತಿ, ರೋಪ್ ವೇ ಸೇರಿ ಇನ್ನಿತರೆ ಯೋಜನೆಗಳನ್ನು ಇದು ಒಳಗೊಂಡಿದೆ.

ಈ ಕುರಿತು ಬಗ್ಗೆ ಮಾತನಾಡಿದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಜೂನ್‌ 15 ಮತ್ತು 16 ರಂದು ಸಿಎಂ ಬಸವರಾಜ ಬೊಮ್ಮಾಯಿ ಮುಜರಾಯಿಯವರು ಪ್ರವಾಸೋದ್ಯಮ, ಜಿಲ್ಲಾಧಿಕಾರಿಗಳು ಸೇರಿ ಎಲ್ಲರ ಜತೆ ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ 15 ದಿನಗಳಲ್ಲೇ ಬಜೆಟ್‌ನಲ್ಲಿ ಘೋಷಣೆಯಾಗಿರುವಂತೆ ಅಂಜನಾದ್ರಿ ಅಭಿವೃದ್ದಿ ಕಾರ್ಯ ಆರಂಭವಾಗುತ್ತದೆ. ಸಿಎಂ  ಬೊಮ್ಮಾಯಿ 15 ದಿನಗಳೊಳಗೆ ಅಭಿವೃದ್ದಿ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ| ಅಂಜನಾದ್ರಿಗೆ ಆಗಮಿಸಲು ಯೋಗಿ ಆದಿತ್ಯನಾಥರಿಗೆ ಆಹ್ವಾನ

ಅಂಜನಾದ್ರಿ ಅಭಿವೃದ್ದಿ ವಿಚಾರವಾಗಿ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಬಜೆಟ್‌ನಲ್ಲಿ ಅಂಜನಾದ್ರಿ ಅಭಿವೃದ್ದಿಗೆ ಅನುದಾನ ಘೋಷಣೆ ಮಾಡಲಾಗಿದೆ. ನಾವು ಕೂಡ ಆನೆಗುಂದಿ, ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೊಳಿಸಲು ಎಲ್ಲಾ ರೀತಿಯ ವರದಿಯನ್ನು ತಯಾರಿಸಿ ಪ್ರವಾಸೋದ್ಯಮ ಇಲಾಖೆಗೆ ನೀಡಿದ್ದೇವೆ. ಆದಷ್ಟು ಬೇಗ ಅಭಿವೃದ್ದಿ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.

Exit mobile version