Site icon Vistara News

Soraba News: ಮನುಷ್ಯನ ಬದುಕು ವಿಕಾಸಗೊಳ್ಳಲು ಅಧ್ಯಾತ್ಮದ ಸಾಧನೆ ಬಹಳ ಮುಖ್ಯ: ರಂಭಾಪುರಿ ಶ್ರೀಗಳು

Rambhapuri Sri Balehonnur

#image_title

ಸೊರಬ: “ಮನುಷ್ಯ ಜೀವನ ಅತ್ಯಂತ ಶ್ರೇಷ್ಠವಾಗಿದ್ದು, ಬದುಕು ವಿಕಾಸಗೊಳ್ಳಲು ಅಧ್ಯಾತ್ಮದ ಸಾಧನೆ ಬಹಳ ಮುಖ್ಯ” ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ (Rambhapuri Sri) ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

ತಾಲೂಕಿನ ಶಾಂತಪುರ ಸಂಸ್ಥಾನ ಮಠದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ 21ನೇ ವರ್ಷದ ಜಾತ್ರಾ ಮಹೋತ್ಸವ, ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, “ವ್ಯಕ್ತಿಯ ತಿಳಿವಳಿಕೆಗಿಂತ ನಡವಳಿಕೆ ಶ್ರೇಷ್ಠವಾಗಿದ್ದು, ತಿಳಿವಳಿಕೆ ಸೋಲಬಹುದು. ಆದರೆ ನಡವಳಿಕೆ ಎಂದಿಗೂ ಸೋಲಲ್ಲ” ಎಂದರು.

ಇದನ್ನೂ ಓದಿ: Attack on Indian Consulate: ಸ್ಯಾನ್‌ ಫ್ರಾನ್ಸಿಸ್ಕೋದ ಇಂಡಿಯನ್ ಕಾನ್ಸುಲೇಟ್ ಕಚೇರಿ ಮೇಲೆ ಖಲಿಸ್ತಾನಿಯರಿಂದ ದಾಳಿ

“ಸತ್ಯ ಕಹಿಯಾಗಿದ್ದರೂ ಶಾಶ್ವತವಾದದ್ದು. ಸುಳ್ಳು ಸಿಹಿಯಾದರೂ ಅದಕ್ಕೆ ಬೆಲೆಯಿಲ್ಲ. ಸತ್ಯ ಮಾತನಾಡುವವರು ಕೆಟ್ಟವರಾಗಿ ಕಾಣುತ್ತಾರೆ. ಸುಳ್ಳು ಹೇಳುವವರು ಒಳ್ಳೆಯವರಾಗಿ ಕಾಣುತ್ತಾರೆ. ಗಂಧ ತಿಕ್ಕಿದಷ್ಟು ಪರಿಮಳ ಬಂದರೆ, ಕಬ್ಬು ಅಗೆದಷ್ಟೂ ಸಿಹಿ ಸಿಗಲಿದೆ, ಚಿನ್ನವನ್ನು ಒರೆಗಲ್ಲಿಗೆ ತಿಕ್ಕಿದಂತೆ ಹೊಳಪು ಬರುತ್ತದೆ. ಮನುಷ್ಯ ನೋವು ಅನುಭವಿಸಿದಷ್ಟು ಬದುಕು ಸುಂದರಗೊಳ್ಳುತ್ತದೆ. ವ್ಯಕ್ತಿಯ ವ್ಯಕ್ತಿತ್ವ ಗಡಿಯಾರದಲ್ಲಿರುವ ನಂಬರ್ ಆಗಬೇಕೇ ವಿನಹ ಕಾಲಕ್ಕೆ ತಕ್ಕಂತೆ ಬದಲಾಗುವ ಮುಳ್ಳಾಗಬಾರದು. ಮನುಷ್ಯ ಭೌತಿಕ ಸಂಪತ್ತು ಶಾಶ್ವತವೆಂದು ಅರಿಯದೇ ಸತ್ಯ ಸಂಸ್ಕಾರಯುಕ್ತ ಬದುಕನ್ನು ಕಟ್ಟಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದರು.‌

ಶಾಂತಪುರ ಹಿರೇಮಠದ ಶಿವಾನಂದ ಶಿವಾಚಾರ್ಯರು, ಕಾತೂರ ಸೋಮಶೇಖರ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ದುಗ್ಲಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಜಡೆ ಡಾ. ಮಹಾಂತ ಶ್ರೀಗಳು, ರಾಣೆಬೆನ್ನೂರು ಹಿರೇಮಠದ ಶಿವಯೋಗಿ ಶಿವಾಚಾರ್ಯರು, ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಇದನ್ನೂ ಓದಿ: KPSC Recruitment 2023 : ಹೈಕದ ಗ್ರೂಪ್‌ ಸಿ ಹುದ್ದೆಗಳಿಗೆ ಪರೀಕ್ಷೆ; ಕೀ ಉತ್ತರ ಪ್ರಕಟ

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ ಉದ್ಘಾಟಿಸಿದರು. ಚಂದ್ರಗೌಡ ಬಾಸೂರ, ಸದಾನಂದಗೌಡ ಬಿಳಗಲಿ, ವೆಂಕಟೇಶ ಕಾಮತ, ಬಸವರಾಜ್ ಬಾರಂಗಿ, ಆರ್.ಟಿ. ಮಂಜುನಾಥ ಉಪಸ್ಥಿತರಿದ್ದರು. ಕಾಳಂಗಿ ಮತ್ತು ಅಗಸನಹಳ್ಳಿ ಭಜನಾ ಮಂಡಳಿಯವರಿಂದ ಭಕ್ತಿ ಗೀತೆಗಳು ಜರುಗಿದವು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ಬಂಕವಳ್ಳಿ ಬಿ.ವೀರೇಂದ್ರಗೌಡರು ಸ್ವಾಗತಿಸಿ ನಿರೂಪಿಸಿದರು.
ಜಾತ್ರಾ ಮಹೋತ್ಸವದ ನಿಮಿತ್ತ ಕುರವತ್ತಿ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿಗಳಿಂದ ಶಿವದೀಕ್ಷಾ ಅಯ್ಯಾಚಾರ ಜರುಗಿತು.

Exit mobile version