Site icon Vistara News

Mantralaya: ರಾಯರ 428ನೇ ವರ್ಧಂತಿ ಮಹೋತ್ಸವಕ್ಕೆ ಅದ್ಧೂರಿ ತೆರೆ; ಟಿಟಿಡಿಯಿಂದ ರಾಯರಿಗೆ ಶೇಷ ವಸ್ತ್ರ ಸಮರ್ಪಣೆ

Sri raghavendra swamys 428th Vardhanti Mahotsava to be celebrated in a grand manner

#image_title

ರಾಯಚೂರು: ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿ ನೆಲೆಸಿರುವ ‌ಪುಣ್ಯಭೂಮಿ ಮಂತ್ರಾಲಯದಲ್ಲಿ (Mantralaya) ‌ಸಡಗರ ಸಂಭ್ರಮದಿಂದ ರಾಯರ 428ನೇ ವರ್ಧಂತಿ ಮಹೋತ್ಸವ ನೆರವೇರಿದೆ. ಭಾನುವಾರ ಬೆಳಗ್ಗೆಯಿಂದಲೇ ‌ಶ್ರೀಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಮೂಲ ಬೃದಾಂವನಕ್ಕೆ ವಿಶೇಷ ಪೂಜೆ, ಪಂಚಾಮೃತಾಭಿಷೇಕವನ್ನು ನೆರವೇರಿಸಲಾಯಿತು. ಸಂಗೀತ ಸೇವೆ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ 6 ದಿನಗಳಿಂದ ನಡೆಯುತ್ತಿದ್ದ ವರ್ಧಂತಿ ಮಹೋತ್ಸವ ಸಂಪನ್ನಗೊಂಡಿತು.

ವರ್ಧಂತ್ಯೋತ್ಸವ (ಹುಟ್ಟುಹಬ್ಬ) ಹಿನ್ನೆಲೆಯಲ್ಲಿ ವಿಶೇಷವಾಗಿ ತಿರುಮಲ ತಿರುಪತಿ ದೇವಸ್ಥಾನ ಸಮಿತಿ (ಟಿಟಿಡಿ)ಯಿಂದ ಶೇಷ ವಸ್ತ್ರ ಬರ ಮಾಡಿಕೊಂಡು ಪೂಜೆ ಸಲ್ಲಿಸಿ ರಾಯರಿಗೆ ಸಮರ್ಪಿಸಲಾಯಿತು. ಮಂತ್ರಾಲಯ ಮಠದ ಪೀಠಾಧಿಪತಿ ಡಾ. ಶ್ರೀ ಸುಬುಧೇಂದ್ರ ತೀರ್ಥರು ತಿರುಮಲದ ಶೇಷ ವಸ್ತ್ರವನ್ನು ತಲೆ ಮೇಲೆ ಹೊತ್ತು ಹೆಜ್ಜೆ ಹಾಕಿದರು. ಬಳಿಕ ಶೇಷ ವಸ್ತ್ರವನ್ನು ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಲಾಯಿತು. ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸ್ತೋತ್ರ ಪಠಣಗಳನ್ನು ಮಾಡುವ ಮೂಲಕ ಭಕ್ತರಿಗೆ ಆಶೀರ್ವದಿಸಿದರು.

ರಾಯರು ಸಂಗೀತ ಪ್ರಿಯರಾಗಿರುವ ಹಿನ್ನೆಲೆಯಲ್ಲಿ ರಾಯರ ವರ್ಧಂತಿ ಮಹೋತ್ಸವ ಪ್ರಯುಕ್ತ ‌ಪ್ರತಿ ವರ್ಷದಂತೆ ಈ ವರ್ಷವೂ ಸಹ ಚೆನ್ನೈ ಮೂಲದ ವಿವಿಧ ತಂಡಗಳ ಮೂಲಕ ನಾದಾಹಾರ ಕಾರ್ಯಕ್ರಮ ‌ನಡೆಸಲಾಯಿತು. ರಾಯರ ಸನ್ನಿಧಿಯಲ್ಲಿ ಕಳೆದ ಸುಮಾರು ವರ್ಷಗಳಿಂದ ಸಂಗೀತ ಸೇವೆ ಮಾಡಲು ನಮಗೆ ಅವಕಾಶ ಸಿಕ್ಕಿದೆ ಅಂತ ಸಂಗೀತಗಾರರು ಸಂತಸ ವ್ಯಕ್ತಪಡಿಸಿದರು.

150ಕ್ಕೂ ಹೆಚ್ಚು ಜನರು ಏಕಕಾಲಕ್ಕೆ ರಾಯರಿಗೆ ಹಾಡುವ ಮೂಲಕ ನಾದಹಾರ ಸಲ್ಲಿಸಿ, ಹಳೇ ಸಂಪ್ರದಾಯಕ್ಕೆ ಹೊಸ ಮೆರುಗು ಕೊಟ್ಟರು. ಶ್ರೀ ಮಠದಲ್ಲಿ ನಡೆದ ವಾದ್ಯ-ಮೇಳಗಳ ಮಾಧುರ್ಯಕ್ಕೆ ಭಕ್ತರ ದಂಡು ತಲೆದೂಗಿ ರಾಯರ ಜಪ ಮಾಡಿದರು. ಆರು ದಿನಗಳಿಂದ ನಡೆಯುತ್ತಿರುವ ಗುರು ವೈಭವೋತ್ಸವ ಸಂಭ್ರಮದಲ್ಲಿ ‌ನಾಡಿನ ನಾನಾ ಕಡೆಗಳಿಂದ ಆಗಮಿಸಿ ರಾಯರ ಕೃಪೆಗೆ ಪಾತ್ರರಾದರು.

ಇದನ್ನೂ ಓದಿ | Guru Raghavendra Swamy : ಮಂತ್ರಾಲಯದ ಕೀರ್ತಿ ಮುಕುಟ ಶ್ರೀ ರಾಘವೇಂದ್ರ ಸ್ವಾಮಿಗಳು

ಕೊನೆಗೆ ರಾಮದೇವರ ಪೂಜೆ, ರಾಯರ ಮೂಲಬೃಂದಾವನಕ್ಕೆ ವಿವಿಧ ವಸ್ತುಗಳು, ಭಕ್ಷ್ಯಗಳನ್ನು ಅರ್ಪಿಸುವ ಮೂಲಕ ಶ್ರೀಗಳು ವಿಶೇಷ ಪೂಜೆ ಕೈಂಕರ್ಯ ನೆರವೇರಿಸಿದರು. ಈ ವೇಳೆ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ರಾಯರ ದರ್ಶನ ಪಡೆದರು.

Exit mobile version