Site icon Vistara News

Bhava Ramayana: ರಾಮಾಯಣದಿಂದ ಪುರುಷಾರ್ಥಗಳ ಪ್ರಾಪ್ತಿ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

Sri Raghaveswara Bharathi Swamiji says Ramayana brings in purusharthas

#image_title

ಗೋಕರ್ಣ: ಎಲ್ಲ ಜೀವಿಗಳೂ‌ ಬಯಸುವುದು ಸುಖವನ್ನು. ಆದರೆ ಸುಖವನ್ನು ಬಯಸುವುದು ಮಾತ್ರ ನಮ್ಮ ಕೈಯಲ್ಲಿದೆ. ಬಯಸಿದುದನ್ನು ಪಡೆಯುವುದು ನಮ್ಮ ಕೈಮೀರಿದೆ. ರಾಮಾಯಣವು ಇರುವ ಸುಖವನ್ನಲ್ಲದೆ ಇಲ್ಲದ, ಕೈಮೀರಿದ ಸುಖವನ್ನೂ ಕೊಡಿಸುತ್ತದೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಧರ್ಮಭಾರತೀ, ಶ್ರೀಸಂಸ್ಥಾ ಪತ್ರಿಕೆಗಳ ಲೋಕಾರ್ಪಣೆ ಹಾಗೂ ಶ್ರೀಗಳೇ ಧರ್ಮಭಾರತೀ ಪತ್ರಿಕೆಯಲ್ಲಿ ಬರೆದಿರುವ ಭಾವ ರಾಮಾಯಣವನ್ನು ರಾಮಾರ್ಪಣಗೊಳಿಸಿ ಮಾತನಾಡಿ, ರಾಮಾಯಣವನ್ನು ಓದುವಾಗಲೇ ಶಬ್ದಗಳಲ್ಲಿ ಹೇಳಲಾರದ ಸುಖದ ಅನುಭವವಾಗುತ್ತದೆ. ರಾಮಾಯಣವು ತೋರಿದ ಹಾದಿಯಲ್ಲಿ ನಡೆದಾಗ ಜೀವನದಲ್ಲಿ ಸುಖಗಳು ಒದಗಿಬರುತ್ತವೆ. ರಾಮಾಯಣದ ಅವಲೋಕನವು ಪುಣ್ಯವನ್ನು ತಂದುಕೊಡುತ್ತದೆ. ಹೀಗೆ ರಾಮಾಯಣದ ಅನುಸಂಧಾನದಿಂದ ಮುಬ್ಬಗೆಯ ಸುಖಗಳ ಪ್ರಾಪ್ತಿಯಾಗುತ್ತದೆ ಎಂದರು.

ರಾಮಾಯಣದ ಓದಿನಿಂದ ಜೀವಿಯು ಬಯಸುವ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳು ಲಭಿಸುತ್ತವೆ. ನಾಲ್ಕು ಪುರುಷಾರ್ಥಗಳನ್ನು ಹೊರತುಪಡಿಸಿ ಜೀವಿ ಏನನ್ನೂ ಬಯಸುವುದಿಲ್ಲ. ಏನನ್ನೇ ಬಯಸಿದರೂ ಅದು ಪುರುಷಾರ್ಥಗಳಲ್ಲೇ ಬರುತ್ತದೆ. ಹಾಗಾಗಿ ಪುರುಷಾರ್ಥವನ್ನು ಕೊಡುವುದರ ಮೂಲಕ ರಾಮಾಯಣ ಎಲ್ಲವನ್ನೂ ಕೊಟ್ಟಂತಾಯಿತು ಎಂದು ನುಡಿದರು.

ಇದನ್ನೂ ಓದಿ | Banavasi Chariot: ಬನವಾಸಿ ಮಧುಕೇಶ್ವರ ದೇಗುಲಕ್ಕೆ ಫೆ. 25ರಂದು ಬರಲಿದೆ 3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ʼಮಹಾಸ್ಯಂದನʼ ರಥ

ಇಂದು ಜಗತ್ತು ಹಣದ ಹಿಂದೆ ಓಡುತ್ತಿದೆ. ರಾಮಾಯಣವನ್ನು ಪಠಿಸಿದರೆ ಸಂಪತ್ತೆ ನಮ್ಮೆಡೆಗೆ ಹರಿದು ಬರುತ್ತದೆ. ರಾಮಾಯಣ ನಮ್ಮನ್ನು ಮತ್ತು ರಾಮಾವತಾರಿ ವಿಷ್ಣುವನ್ನು ಹತ್ತಿರವಾಗಿಸುತ್ತದೆ. ವಿಷ್ಣುವಿನ ಜತೆ ಲಕ್ಷ್ಮಿಯೂ ಇರುತ್ತಾಳೆ ಎಂದು ಅಭಿಪ್ರಾಯಪಟ್ಟರು.

ಧರ್ಮಭಾರತೀ ಸಂಪಾದಕ ಕೃಷ್ಣಾನಂದ ಶರ್ಮಾ ಪ್ರಸ್ತಾವಿಕವಾಗಿ ಮಾತನಾಡಿ, ಶ್ರೀಗಳು
ಸಂನ್ಯಾಸ ಸ್ವೀಕರಿಸಿ 30 ವರ್ಷವಾಗಿದೆ. ಈ‌ ಹೊತ್ತಿನಲ್ಲಿ ಶ್ರೀಮಠದ ಅಂಗಸಂಸ್ಥೆ ಶ್ರೀಭಾರತೀ ಪ್ರಕಾಶನ ಪ್ರಕಟಿಸುವ ಧರ್ಮಭಾರತೀ ಪತ್ರಿಕೆಯಲ್ಲಿ ಪ್ರತಿ ತಿಂಗಳು ಶ್ರೀಗಳೇ ಪೂರ್ಣ ರಾಮಾಯಣವನ್ನು ಬರೆಯಲಿದ್ದಾರೆ. ಅದನ್ನು 30 ಸಾವಿರಕ್ಕೂ ಹೆಚ್ಚು ಮನೆಗಳಿಗೆ ತಲುಪಿಸಲಾಗುತ್ತಿದೆ. ಈ ರಾಮಾಯಣ ಲೇಖನ ಪೂರ್ಣಗೊಂಡಾಗ ಪೂರ್ಣರಾಮಾಯಣ ಅಷ್ಟು ಮನೆಗಳಲ್ಲಿ ಶಾಶ್ವತವಾಗಿ ಇರಲಿದೆ ಎಂದು ಹೇಳಿದರು.

ರಾಮಚಂದ್ರಾಪುರಮಠ ಮಾಡಿದ ಅನೇಕ ಶಾಶ್ವತ ಕಾರ್ಯಗಳಲ್ಲಿ ಇದೂ ಒಂದಾಗಲಿದೆ. ಧರ್ಮಭಾರತಿಯ ಜೊತೆ ಶ್ರೀಸಂಸ್ಥಾ ಎನ್ನುವ ಶ್ರೀಮಠದ ವಾರ್ತಾ ಪತ್ರಿಕೆಯನ್ನು ಕೂಡ ಪ್ರತಿ ತಿಂಗಳು ಪ್ರಕಟಿಸಲಾಗುತ್ತದೆ. ಇದು ಪ್ರತಿದಿನ ನಡೆಯುತ್ತಿರುವ ಶ್ರೀಮಠದ ಲೋಕಕಲ್ಯಾಣ ಕಾರ್ಯಗಳ ಸಮಗ್ರ ಮಾಹಿತಿಯನ್ನು ಎಲ್ಲರಿಗೂ ಲಭ್ಯವಾಗಿಸಲಿದೆ ಎಂದರು.

ರಾಘವೇಶ್ವರಭಾರತೀ ಶ್ರೀಗಳು ಧರ್ಮಭಾರತೀ ಪತ್ರಿಕೆಯನ್ನು ರಾಮಾರ್ಪಣಗೊಳಿಸಿದರು. ನಂತರ ಪತ್ರಿಕೆಯನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳು ಮತ್ತು ಶಿಷ್ಯಭಕ್ತರಿಗೆ ಅನುಗ್ರಹಿಸಿ, ರಾಮಾಯಣವನ್ನು ಆಧರಿಸಿ ಪಾಠವನ್ನು ಮಾಡಿದರು.

ವಿಶ್ವವಿದ್ಯಾಪೀಠದ ಲೋಕಸಂಪರ್ಕಾಧಿಕಾರಿ ಅಶ್ವಿನೀ ಉಡುಚೆ ಭಾವರಾಮಾಯಣದ ಮಹತ್ತ್ವವನ್ನು ವಿವರಿಸಿದರು. ಮಹಾಮಂಡಲದ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ಶ್ರೀಭಾರತೀ ಪ್ರಕಾಶನದ ಅಧ್ಯಕ್ಷ ಸಚಿನ್, ಉಪಸಂಪಾದಕ ಗಣೇಶ ಕೃಷ್ಣ ಹೆಗಡೆ, ಪ್ರಸರಣ ಮಾರ್ಗದರ್ಶಕ ಮಹೇಶ ಚಟ್ನಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನ ಓದಿ | ಗೋ ಸಂಪತ್ತು : ದೇಶಿ ಗೋವಿನ ಸಗಣಿಯ ಮಹತ್ವ ನಿಮಗೆಷ್ಟು ಗೊತ್ತು?

ಭಾವರಾಮಾಯಣ

ರಾಮಾಯಣವನ್ನು ಓದುವಾಗಲೇ ಶಬ್ದಗಳಲ್ಲಿ ಹೇಳಲಾರದ ಸುಖದ ಅನುಭವವಾಗುತ್ತದೆ. ರಾಮಾಯಣವು ತೋರಿದ ಹಾದಿಯಲ್ಲಿ ನಡೆದಾಗ ಜೀವನದಲ್ಲಿ ಅನ್ಯಾನ್ಯ ಸುಖಗಳು ಒದಗಿ ಬರುತ್ತವೆ. ರಾಮಾಯಣದ ಅವಲೋಕನವು ತಂದು ಕೊಡುವ ಪುಣ್ಯವು ತಂದು ಕೊಡುವ ಸುಖವೇ ಬೇರೆ. ಹೀಗೆ ರಾಮಾಯಣದ ಅನುಸಂಧಾನದಿಂದ ಮುಬ್ಬಗೆಯ ಸುಖಗಳ ಪ್ರಾಪ್ತಿಯಾಗುತ್ತದೆ.
| ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ

Exit mobile version