ಬೆಳಗಾವಿ: ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನದ (Bhagavad Gita Abhiyan) ಉದ್ಘಾಟನಾ ಕಾರ್ಯಕ್ರಮವನ್ನು ಬೆಳಗಾವಿಯ ಅನಗೋಳದ ಸಂತಮೀರಾ ಶಾಲೆಯ ಮಾಧವ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ.
ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಗಳು ಹಾಗೂ ನಿಡಸೋಸಿ ಶ್ರೀ ದುರದಿಂಡೀಶ್ವರ ಸಂಸ್ಥಾನ ಮಠದ ಡಾ. ಶ್ರೀ ನಿಜಲಿಂಗೇಶ್ವರ ಮಹಾಸ್ವಾಮೀಜಿಗಳು, ಬೆಳಗಾವಿ ಆರ್ಷ ವಿದ್ಯಾ ಕೇಂದ್ರದ ಶ್ರೀಚಿತ್ಪ್ರಕಾಶಾನಂದ ಜೀ ಸಾನ್ನಿಧ್ಯ ವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಲೋಕಸಭಾ ಸದಸ್ಯೆ ಮಂಗಲಾ ಸುರೇಶ ಅಂಗಡಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಗೀತಾ ಅಭಿಯಾನದ ಗೌರವಾಧ್ಯಕ್ಷರೂ ಆಗಿರುವ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ವಹಿಸಿಕೊಳ್ಳಲಿದ್ದಾರೆ. ಉದ್ಯಮಿ ಗೋಪಾಲ ಜಿನಗೌಡ, ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಉಪಸ್ಥಿತರಿರಲಿದ್ದಾರೆ ಎಂದು ಅಭಿಯಾನದ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ಸಂಚಾಲಕ ಸುಬ್ರಹ್ಮಣ್ಯ ಭಟ್ಟ, ಕಾರ್ಯದರ್ಶಿ ಎಂ.ಕೆ.ಹೆಗಡೆ ತಿಳಿಸಿದ್ದಾರೆ.
ಇದನ್ನೂ ಓದಿ | Sabarimala Temple: ಇಂದಿನಿಂದ ತೆರೆಯಲಿದೆ ಶಬರಿಮಲೆ ದೇಗುಲದ ಬಾಗಿಲು!
ಗೀತಾ ಅಭಿಯಾನಕ್ಕೆ 17ರ ಸಂಭ್ರಮ
ಹಸಿರು ಸ್ವಾಮೀಜಿ ಎಂದೇ ಹೆಸರಾದ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಭಗವದ್ಗೀತಾ ಅಭಿಯಾನಕ್ಕೆ ಈಗ 17ರ ಸಂಭ್ರಮ. ಬಾಹ್ಯ ಪರಿಸರದ ಸಂರಕ್ಷಣೆಗೆ ಕಂಕಣ ತೊಟ್ಟ ಸ್ವರ್ಣವಲ್ಲೀ ಶ್ರೀಗಳು ವ್ಯಕ್ತಿಯ ಆಂತರಿಕ ಸೌಂದರ‍್ಯದ ವ್ಯಕ್ತಿತ್ವ ವಿಕಸನ, ನೈತಿಕತೆ ಪುನರುತ್ಥಾನ, ಸಮಾಜದ ಒಳಗಿನ ಸೌಂದರ್ಯ , ರಾಷ್ಟ್ರೀಯ ಭಾವೈಕ್ಯತೆಯ ಮುಖ್ಯ ಆಶಯದಲ್ಲಿ ಭಗವದ್ಗೀತೆ ಅಭಿಯಾನ ನಡೆಸುತ್ತಿರುವುದು ವಿಶೇಷ.
ಕುಸಿಯುತ್ತಿರುವ ಸಮಾಜದಲ್ಲಿನ ಮೌಲ್ಯಗಳನ್ನು ಎತ್ತಿ ಹಿಡಿಯಲು ಭಗವದ್ಗೀತೆಯೇ ಮುಖ್ಯ ಔಷಧ ಎಂದು ಭಾವಿಸಿದ ಶ್ರೀಗಳು 2007ರ ಅಕ್ಟೋಬರ್ ತಿಂಗಳಿನಿಂದ ಭಗವದ್ಗೀತಾ ಅಭಿಯಾನ ಆರಂಭಿಸಿದರು. ಅಂದು ಆರಂಭಿಸಿದ ಗೀತೋಪದೇಶದ ಪಾಠ ಈಗ ಇಡೀ ರಾಜ್ಯ, ಹೊರ ರಾಜ್ಯದಲ್ಲೂ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ರಾಜ್ಯದಲ್ಲಿ ಮುಖ್ಯ ಸಮಿತಿ, ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಗಳು, ತಾಲೂಕು ಮಟ್ಟದಲ್ಲಿ ತಾಲೂಕು, ಕೆಲವು ಜಿಲ್ಲೆಗಳಲ್ಲಿ ಹೋಬಳಿ ಹಂತದಲ್ಲೂ ಗ್ರಾಮ, ಊರು, ಊರುಗಳಲ್ಲೂ, ಮನೆ ಮನೆಗಳಲ್ಲೂ ಗೀತಾ ಪಾಠ ಕೇಳುತ್ತಿವೆ. ಮಠ, ಮಂದಿರಗಳಲ್ಲಿ, ಗ್ರಾಮದ ಕೇಂದ್ರದಲ್ಲಿ, ಶಾಲಾ ಕಾಲೇಜುಗಳಲ್ಲಿ, ಜೈಲಿನಲ್ಲೂ ಗೀತಾ ಅಭಿಯಾನ, ಗೀತಾ ಕಂಠಪಾಠಗಳು ನಡೆಯುತ್ತಿವೆ. ತಾಲೂಕು ಜಿಲ್ಲಾ ರಾಜ್ಯ ಮಟ್ಟದ ಸ್ಪರ್ಧೆಗಳೂ ನಡೆಯುತ್ತಿವೆ. ಇಡೀ ರಾಜ್ಯದಲ್ಲಿ ಅಭಿಯಾನ ಸಕ್ರೀಯವಾಗಿದೆ. ಮುಖ್ಯವಾಗಿ ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಮಹಾ ಸಮರ್ಪಣೆ ನಡೆಯಲಿದೆ.
ನವೆಂಬರ್ 21ರಿಂದ ಎಲ್ಲೆಡೆ ಭಗವದ್ಗೀತಾ ಕಲಿಕಾ ಕೇಂದ್ರಗಳು ಆರಂಭವಾಗಲಿವೆ. ವ್ಯವಸ್ಥಿತವಾಗಿ ಗೀತೆಯ ವಾಚನ ಕಲಿಸುವ ತರಬೇತಿ ಪಡೆದ ತಂಡಗಳೂ ಸಕ್ರೀಯವಾಗಿ ಕೆಲಸ ಮಾಡುತ್ತಿವೆ. ಸಾವಿರಾರು ಗೀತಾಪಾಠ ಕಲಿಸುವ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಅಭಿಯಾನದ ಸಿದ್ಧತೆಗಳು ಜೋರಾಗಿವೆ. ನಿರೀಕ್ಷಿತ ಸ್ಪರ್ಧಾ ಕಾರ್ಯಕ್ಕೂ ಚಾಲನೆ ನೀಡಿವೆ.
ನ.21 ರಿಂದ ಅಧಿಕೃತವಾಗಿ ಅಭಿಯಾನದ ತರಗತಿಗಳು ಆರಂಭವಾಗಲಿದೆ. ಡಿ.22ರಂದು ಗೀತಾ ಜಯಂತಿ ಹಾಗೂ 23ರಂದು ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಗೀತಾ ಅಭಿಯಾನದ ಮಹಾ ಸಮರ್ಪಣೆ ನಡೆಯಲಿದೆ. ಪಠ್ಯದ ಮೂಲಕ ಶಾಲೆಗಳಲ್ಲೂ ಭಗವದ್ಗೀತೆ ಬರಬೇಕು. ಮಕ್ಕಳಲ್ಲೂ ವ್ಯಕ್ತಿತ್ವ ವಿಕಸನ, ನೈತಿಕತೆ ಪುನತ್ಥಾನ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯತೆಯ ಗುಣಗಳು ಬೆಳೆಯಬೇಕು ಎಂಬ ಕನಸು ಶ್ರೀಗಳದ್ದು. ಇದೇ ಕಾರಣದಿಂದ ಪ್ರಾಥಮಿಕ, ಪ್ರೌಢ ಶಾಲಾ ಹಂತದಲ್ಲೂ ಗೀತಾ ಕಂಠಪಾಠ ಸ್ಪರ್ಧೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Tulsi Plant Care: ತುಳಸಿ ಗಿಡ ಬೆಳೆಸುವುದೇ ಒಂದು ಸಾಹಸವೇ? ಹಾಗಾದರೆ ಈ ಟಿಪ್ಸ್ ನೆನಪಿರಲಿ!
ಏಕಸ್ಥಭಾವದಿಂದ ಕೆಲಸ
ಸಮಾಜಮುಖಿಯಾಗಿ ತೊಡಗಿಕೊಂಡ ಸ್ವರ್ಣವಲ್ಲೀ ಶ್ರೀಗಳ ಹಿಂದೆ ಜಾತಿ, ಧರ್ಮದ ಮೇರೆ ಮೀರಿ ಶಿಷ್ಯರು, ಸಮಾಜದ ವಿವಿಧ ಸ್ತರದ ಜನರು ಏಕಸ್ಥ ಭಾವದಿಂದ ತಂಡೋಪತಂಡವಾಗಿ ಜತೆಯಾಗುತ್ತಿದ್ದಾರೆ. ಸ್ವರ್ಣವಲ್ಲೀ ಶ್ರೀಗಳ ಹಸಿರು ಸಂರಕ್ಷಣಾ ಹೋರಾಟ, ಅಭಿಯಾನದಲ್ಲೂ ಇದೇ ಮಾದರಿಯಲ್ಲಿ ಶಿಷ್ಯರು ಪಾಲ್ಗೊಂಡು ಸಂಕಲ್ಪದ ಸಂಪೂರ್ಣತೆಗೆ ಸಹಕಾರ ನೀಡುವುದು ವಿಶೇಷ.
ಅಭಿಯಾನದ ಮೈಲಿಗಲ್ಲುಗಳು
- ಈವರೆಗೆ ರಾಜ್ಯದಲ್ಲಿ 42.28 ಲಕ್ಷ ಗೀತಾ ಪುಸ್ತಕ ವಿತರಣೆ
- ಈಗಾಗಲೇ 6900ಕ್ಕೂ ಅಧಿಕ ಶಾಲೆಗಳಲ್ಲಿ ಗೀತಾ ಅಭಿಯಾನ ನಡೆದಿದೆ.
- ಪ್ರತೀ ವರ್ಷ ಗೀತಾ ಅಭಿಯಾನ ಸರಾಸರಿ 400 ಶಾಲೆಗಳಲ್ಲಿ ನಡೆಯುತ್ತವೆ
- ಗೀತೆ ಹಾಗೂ ಸಂವಿಧಾನ, ಕಾನೂನು, ಗೀತೆ ಹಾಗೂ ಮಾನಸಿಕ ಯೋಗಕ್ಷೇಮ, ಗೀತೆ ಹಾಗೂ ವಚನ ಸಾಹಿತ್ಯ ಸೇರಿದಂತೆ ನೂರಾರು ಚಿಂತನಾ ಗೋಷ್ಠಿ ಏರ್ಪಾಟು
- 17 ವರ್ಷದಲ್ಲಿ 500ಕ್ಕೂ ಅಧಿಕ ಶಾಲೆಗಳಿಗೆ ಸ್ವತಃ ಶ್ರೀಗಳ ಭೇಟಿ
- ಗೀತೆಯ ಪ್ರಸಾರಕ್ಕೆ ಯಕ್ಷಗಾನ, ರೂಪಕಗಳ ಬಳಕೆ
- ಮಸೀದಿ, ಚರ್ಚ್ನಲ್ಲೂ ಗೀತಾ ಅಭಿಯಾನ.
- ಗೀತಾ ಕಂಠಪಾಠ ಸ್ಪರ್ಧೆ, ಭಾಷಣ ಸ್ಪರ್ಧೆ
ಭಗವದ್ಗೀತೆಯ ಬಗ್ಗೆ ಹೆಚ್ಚಿನವರಿಗೆ ಈಗ ಅರಿವು ಬಂದಿದೆ. ಆದರೆ ಭಗವದ್ಗೀತೆ ಓದದೇ ಇರುವವರು ನಮ್ಮ ದೇಶದಲ್ಲಿ ಕೋಟಿ ಕೋಟಿ ಸಂಖ್ಯೆಯಲ್ಲಿ ಇದ್ದಾರೆ. ಗೀತೆ ಅರಿಯದೇ ಇರುವುದೇ ಇಂದಿನ ಅನೇಕ ಸಮಸ್ಯೆಗಳಿಗೆ ಕಾರಣ. ಗೀತಾ ಅಭಿಯಾನಕ್ಕೆ ಎಲ್ಲರ ಸಹಕಾರ ಅಗತ್ಯ.
| ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ