ಮಂಗಳೂರು: ಮಂಗಳೂರಿನ ಮಳಲಿಯ ಮಸೀದಿ ಮತ್ತು ದರ್ಗಾದ ಸಮೀಪ ತಾಂಬೂಲ ಪ್ರಶ್ನೆ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿದೆ. ಹಿಂದೂಪರ ಸಂಘಟನೆಗಳು ಈ ಧಾರ್ಮಿಕ ಸ್ಥಳದ ಹಿನ್ನೆಲೆ, ಇತಿಹಾಸವನ್ನು ಅರಿತುಕೊಳ್ಳಲು ಕೇರಳದ ಜ್ಯೋತಿಷಿಗಳ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆಯನ್ನು ಹಮ್ಮಿಕೊಂಡಿವೆ.
ಸ್ಥಳದಲ್ಲಿ ದೈವೀ ಶಕ್ತಿಯ ಪತ್ತೆಗೆ ಸಂಬಂಧಿಸಿ ದರ್ಗಾ ಸನಿಹದ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆಯನ್ನು ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇರಳ ಮೂಲದ ಪೊದ್ವಾಳ್ ಮುಖ್ಯ ಜ್ಯೋತಿಷಿಯಾಗಿ ತಾಂಬೂಲ ಪ್ರಶ್ನೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಪ್ರಶ್ನೆ ಚಿಂತನೆ ನಡೆಯಲಿದೆ. ಜಾಗದ ಸ್ಥಳ ಪುರಾಣ, ಧಾರ್ಮಿಕ ಇತಿಹಾಸ ಅರಿಯಲು ಇದು ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಅನ್ನು ಪೊಲೀಸರು ಕೈಗೊಂಡಿದ್ದಾರೆ.
ನಾಳೆ ಮುಂಜಾನೆಯವರೆಗೆ ನಿಷೇಧಾಜ್ಞೆ ಜಾರಿಯಾಗಿದೆ. ಮಳಲಿಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದೆ. ಗ್ರಾಮಕ್ಕೆ ಆಗಮಿಸುವ ಜನರ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ಮಸೀದಿಯ ನವೀಕರಣದ ವೇಳೆ ದೇಗುಲದ ರಚನೆಗಳು ಪತ್ತೆಯಾಗಿತ್ತು. ಆದ್ದರಿಂದ ಮಸೀದಿ ಇದ್ದ ಜಾಗದಲ್ಲಿ ದೇವಾಲಯ ಇತ್ತೇ, ದೈವಿಕ ಶಕ್ತಿ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ತಾಂಬೂಲ ಪ್ರಶ್ನೆ ನಡೆಯಲಿದೆ.