Site icon Vistara News

Taralabalu Hunnime: ತರಳಬಾಳು ಎಂಬುವುದು ವೈಚಾರಿಕ ಕ್ರಾಂತಿ ಬೀಜದ ಅಂಕುರ: ಸಿಎಂ ಬಸವರಾಜ ಬೊಮ್ಮಾಯಿ

ತರಳಬಾಳು

#image_title

ಹೊಸಪೇಟೆ: ಸ್ವಾತಂತ್ರ್ಯ ಪೂರ್ವದಿಂದಲೂ ಮಠಗಳು ದಾಸೋಹ, ಶಿಕ್ಷಣ ಸೇವೆಯನ್ನು ಮಾಡುತ್ತಾ ಬಂದಿವೆ. ಸರ್ಕಾರಗಳ ಜತೆ ಪೂರಕವಾಗಿ ಸಾಮಾಜಿಕ ಸೇವೆಯನ್ನು ನೀಡುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಜಿಲ್ಲೆಯ ಕೊಟ್ಟೂರಿನಲ್ಲಿ ಶನಿವಾರ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಆಯೋಜಿಸಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ (Taralabalu Hunnime) ಮಾತನಾಡಿದರು. ಜನರಿಗೆ ಸಂಸ್ಕಾರ, ಸಂಸ್ಕೃತಿ ಜತೆಗೆ ಅರಿವು ಮೂಡಿಸುವ ಕಾರ್ಯಕ್ರಮವೇ ತರಳಬಾಳು ಹುಣ್ಣಿಮೆಯಾಗಿದೆ. ಜನರಿಗೆ ಪ್ರತಿ ವರ್ಷ ಹುಣ್ಣಿಮೆಗೆ ಈ ಭಾಗ್ಯ ಬರುತ್ತದೆ, ಇಂತಹ ಮಹೋತ್ಸವದಲ್ಲಿ ನಾವು ಕೇವಲ ಪಡೆದುಕೊಂಡು ಹೋಗುವ ಕಾರ್ಯ ನಡೆಯುತ್ತದೆ. ಜನಸಾಮಾನ್ಯರಿಗೆ ವಿಚಾರ, ಆದರ್ಶ, ಪರಂಪರೆ, ಸರ್ವರ ಸಮನ್ವಯ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ವಿಚಾರದ ಮೂಲಕ್ಕೆ ಧರ್ಮ, ಜಾತಿ ಎಂಬುದಿಲ್ಲ. ವಿಚಾರದ ಬಳಕೆ ಸಮಯದಲ್ಲಿ ಎಲ್ಲವೂ ಅಂಟಿಕೊಳ್ಳುತ್ತದೆ. ವಿಚಾರವನ್ನು ಸುಜ್ಞಾನದಿಂದ ಅರಿತಾಗಲೇ ಗೊಂದಲ ನಿವಾರಣೆ ಸಾಧ್ಯ. ತರಳಬಾಳು ಜಗದ್ಗುರುಗಳ ಬದುಕಿನಲ್ಲಿ ನಡೆದ ಘಟನೆ, ಅವರು ತಾಳುತ್ತಿದ್ದ ದಿಟ್ಟ ನಿಲುವು, ಅವರ ಕಾಲನಂತರ ಅದು ಸತ್ಯ ಎಂಬುದು ಇತಿಹಾಸವಾಗಿ ಉಳಿದಿದೆ. ತರಳಬಾಳು ಎಂಬುದೇ ವೈಚಾರಿಕ ಕ್ರಾಂತಿ ಬೀಜದ ಅಂಕುರವಾಗಿದೆ ಎಂದರು.

ಕೊಟ್ಟೂರು ಕೆರೆಗೆ ಪೈಪ್‌ಲೈನ್ ಕಲ್ಪಿಸಲು ಕ್ರಮ

ಜಗದ್ಗುರುಗಳು ರೈತ, ಕಾರ್ಮಿಕ, ಸರ್ಕಾರಿ ನೌಕರ, ರಾಜಕಾರಣಿಗಳ ಬದುಕನ್ನು ಹತ್ತಿರದಿಂದ ಕಂಡವರಾಗಿದ್ದರು. ಅಂತಹ ಅನುಭವವುಳ್ಳ ದೃಷ್ಟಿಕೋನದವರು ಪ್ರಸ್ತುತ ಸಮಾಜಕ್ಕೆ ಬೇಕಾಗಿದೆ ಎಂದ ಅವರು, ಸಂಗಮೇಶ್ವರ ಬಾಳಿಕನೂರು ಕೆರೆಗೆ ಸೇತುವೆ ನಿರ್ಮಾಣ ಕೈಗೊಳ್ಳಲು ನಿರ್ಧರಿಸಲಾಗಿದೆ. ಅದೇ ರೀತಿಯಾಗಿ ಈಗಾಗಲೇ ಪ್ರಗತಿಯಲ್ಲಿರುವ ರಾಜನಹಳ್ಳಿ ಏತನೀರಾವರಿ ಯೋಜನೆಯಿಂದ ಕೊಟ್ಟೂರು ಕೆರೆಗೆ ಭರ್ತಿಗೆ ವಿಶೇಷ ಪೈಪ್ ಲೈನ್ ಅಳವಡಿಸಲು ಮಂಜೂರಾತಿಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ | kodi mutt swamiji: ಪಕ್ಷಗಳು ಒಡೆದರೂ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ: ಕೋಡಿಮಠ ಶ್ರೀ ಭವಿಷ್ಯ

ರಾಜ್ಯ ಶಿಕ್ಷಣಭರಿತವಾಗಿರುವುದಕ್ಕೆ ಮಠಗಳ ಪಾತ್ರ ಹಿರಿದಾಗಿದೆ. ಪ್ರಜಾಪ್ರಭುತ್ವಕ್ಕೂ ಮುನ್ನವೇ ಶಿಕ್ಷಣ ಪರಿಚಯ ಮಾಡಿದ್ದು ಮಠಗಳು. ಶಿಕ್ಷಣ, ದಾಸೋಹ ಮಾತ್ರವಲ್ಲದೇ ನೀರಾವರಿ ಯೋಜನೆ ಸೇರಿದಂತೆ ಕೆರೆ ತುಂಬಿಸುವ, ರೈತರಿಗೆ ಹಿತ ಬಯಸುವ ಬೇಡಿಕೆಗಳು ಸರ್ಕಾರಕ್ಕೂ ಪ್ರೇರಣೆಯಾಗಿದೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ತರಳಬಾಳು ಹುಣ್ಣಿಮೆ ಮಹೋತ್ಸವನ್ನು ಆಚರಣೆ ಮಾಡಲಾಗುತ್ತಿದೆ. ತರಳಬಾಳು ಹುಣ್ಣಿಮೆ ಎಂದರೆ, ಅದು ಜ್ಞಾನ ದಾಸೋಹ, ಭಾವೈಕ್ಯತೆ ಸಮ್ಮೇಳನ. ಧರ್ಮ ಇರುವುದು ಮನುಷ್ಯನ ಜೀವನ ಉದ್ಧಾರಕ್ಕಾಗಿ. ನಾವು ಧರ್ಮವನ್ನು ಆಚರಣೆ ಮಾಡುತ್ತೇವೆ. ಆದರೆ, ಧರ್ಮದ ಹೆಸರಲ್ಲಿ ಸಂಘರ್ಷಗಳು ನಡೆಯುತ್ತಿವೆ, ಅದು ನಮ್ಮ ದುರ್ದೈವ. ಈ ದೇಶದ ಆಧ್ಯಾತ್ಮಿಕ ಚಿಂತನೆಯಲ್ಲಿ ಶಾಂತಿ, ಸಂತೋಷ ಇದೆ. ಆದರೆ, ಧರ್ಮ ಆಚರಣೆ ಪದ್ಧತಿಯಾಗಿ ನಡೆದುಕೊಂಡಿಲ್ಲ. ಇದು ಜೀವನದ ಭಾಗವಾಗಿದೆ ಎಂದರು.

ಚಾರ್ವಾಕನನ್ನು ಋಷಿ ಎಂದು ನಂಬಿರುವ ದೇಶ ನಮ್ಮದು. ನ್ಯಾಯಾಲಯಕ್ಕೆ ಹೋದರೆ ತೀರ್ಪು ಸಿಗುತ್ತದೆ. ಆದರೆ ಮಠಕ್ಕೆ ಹೋದರೆ ನ್ಯಾಯ ಸಿಗುತ್ತದೆ. ಇದು ಮಠಕ್ಕಿರುವ ಶಕ್ತಿ ಹಾಗೂ ಜನರ ನಂಬಿಕೆಯಾಗಿದೆ. ಧರ್ಮ ಎನ್ನುವುದು ಸಂಕುಚಿತವಾಗಿ ಇಲ್ಲ, ಅದು ಜಾತಿ ವಾಚಕ ಅಲ್ಲ. ಅದು ಒಂದು ಜೀವನ ಪದ್ಧತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಧರ್ಮ ಇರಬಾರದು ಎಂಬ ಒಂದು ಚರ್ಚೆ ಆರಂಭವಾಗಿದೆ. ಆದರೆ ಧರ್ಮ ಇಲ್ಲದೇ ನಮ್ಮ ದೇಶದಲ್ಲಿ ರಾಜಕೀಯ ಇಲ್ಲ. ಈ ಹಿಂದಿನ ಕಾಲದಿಂದಲೂ ರಾಜನಿಗೆ ಒಂದು ರಾಜ ಧರ್ಮ ಇತ್ತು. ರಾಮ ಮಂದಿರ, ಕಾಶಿ ವಿಶ್ವನಾಥ ದೇವಾಲಯ ಮರು ನಿರ್ಮಾಣ ಮಾಡಲಾಗಿದೆ. ಇವು ಕೇವಲ ದೇವಾಲಯ ಅಲ್ಲ, ನಮ್ಮ ಸಂಸ್ಕೃತಿಯ ಪ್ರತಿಬಿಂಬ ಎಂದು ಹೇಳಿದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಮಾತನಾಡಿ, ನಾನು ಭಾಗ್ಯಶಾಲಿ ಆಗಿದ್ದೇನೆ. ಹಾಗಾಗಿ ತರಳುಬಾಳು ಹುಣ್ಣಿಮೆಯಲ್ಲಿ ಭಾಗಿಯಾಗಿದ್ದೇನೆ. ಸಾಮಾಜಿಕ, ಶೈಕ್ಷಣಿಕವಾಗಿ ಸಿರಿಗೇರಿ ಮಠ ಯೋಗದಾನದ ಮೂಲಕ ಕ್ರಾಂತಿ ಮಾಡಿದೆ. ಸಂಸ್ಕೃತಿ, ಅಧ್ಯಾತ್ಮದ ಮೂಲಕ ಸಮಾಜಕ್ಕೆ ಮಠ ಅಪಾರ ಕೊಡುಗೆ ನೀಡಿದೆ. ಹೀಗಾಗಿ ತರಳಬಾಳು ಹುಣ್ಣಿಮೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತದೆ ಎಂದು ಹೇಳಿದರು.

ಸಿರಿಗೇರಿ ಪೀಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜಕಾರಣದಲ್ಲಿ ಧರ್ಮ ಇರಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾದ ಮಂಡಿಸಿದರು. ಇದನ್ನು ನಾವೂ ಅನುಮೋದಿಸುತ್ತೇವೆ. ಭಗವದ್ಗೀತೆಯಲ್ಲಿ ಧರ್ಮ ಕ್ಷೇತ್ರೇ ಕುರುಕ್ಷೇತ್ರೇ ಎಂಬ ಶ್ಲೋಕವಿದೆ. ಮಹಾಭಾರತದಲ್ಲಿ ʼ ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಇವತ್ತು ಏನಾಯಿತು ಎಂದು ದೃತರಾಷ್ಟ್ರ ಸಂಜಯನನ್ನು ಕೇಳುತ್ತಾನೆ. ಆದರೆ, ಇವತ್ತಿನ ವಿಧಾನಸಭೆ, ಸಂಸತ್‌ ಕುರುಕ್ಷೇತ್ರ ಆಗಿದೆ. ಆದರೆ ಧರ್ಮ ಕ್ಷೇತ್ರಗಳು ಕುರುಕ್ಷೇತ್ರ ಆಗಿಲ್ಲ. ಅಧಿವೇಶನಗಳು ಧರ್ಮದ ತಳಹದಿಯ ಮೇಲೆ ನಡೆದಿದ್ದರೆ ಯಾರು ಕಿತ್ತಾಡುತ್ತಿರಲಿಲ್ಲ, ಕೂಗಾಡುತ್ತಿರಲಿಲ್ಲ. ಒಂದು ನಿಯಮ ಬದ್ಧ ಹೋರಾಟ ಕುರುಕ್ಷೇತ್ರದಲ್ಲಿತ್ತು ಎಂದು ಹೇಳಿದರು.

ಈಗ ಕುರುಕ್ಷೇತ್ರ ಧರ್ಮ ಕ್ಷೇತ್ರ ಆಗಿದೆ. ಧರ್ಮ ಇವತ್ತು ಕೆಟ್ಟ ರಾಜಕೀಯ ಆಗಿದೆ. ಎಲ್ಲ ರಾಜಕಾರಣಿಗಳನ್ನು ಮನೆಗೆ ಕಳುಹಿಸಿ. ಅವರ ಬದಲಿಗೆ ಮಠಾಧೀಶರನ್ನು ಸ್ವಾಮೀಜಿಗಳನ್ನು ವಿಧಾನಸಭೆಗೆ ಕಳುಹಿಸಿದರೆ ಬೆಂಕಿ ಹೊತ್ತುತ್ತದೆ. ರಾಜಕೀಯ ಧರ್ಮದ ಬುನಾದಿಯ ಮೇಲೆ ಅದು ನಡೆಯಬೇಕು. ಸಂವಿಧಾನ ಸಹ ಧರ್ಮದ ಬುನಾದಿಯ ಮೇಲೆ ನಿಂತಿದೆ ಎಂದು ಹೇಳಿದರು.

ಗದಗ ತೋಂಟದ ಸಿದ್ಧರಾಮ ಸ್ವಾಮೀಜಿ, ಗವಿಸಿದ್ದೇಶ್ವರ ಮಹಾಸಂಸ್ಥಾನದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಡಿ.ಎಸ್.ಯಡಿಯೂರಪ್ಪ, ಸಂಸದರಾದ ದೇವೇಂದ್ರಪ್ಪ, ಸಿದ್ಧೇಶ್ವರ, ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ರೈತ ಮುಖಂಡ ಬಸವರಾಜ, ಮಾಜಿ ಸಚಿವ ಎಚ್.ಆಂಜನೇಯ ಇದ್ದರು.

ಇದನ್ನೂ ಓದಿ | ಇದೇ ನನ್ನ ಕೊನೆಯ ಚುನಾವಣೆ, ಇನ್ನು ಸ್ಪರ್ಧಿಸಲ್ಲ, ಆದ್ರೆ ರಾಜಕೀಯ ನಿವೃತ್ತಿ ಪಡೆಯಲ್ಲ: ಸಿದ್ದರಾಮಯ್ಯ

Exit mobile version