Site icon Vistara News

Bilvapatre Vana: ಕಾಫಿ ನಾಡಿನಲ್ಲಿದೆ ಐತಿಹಾಸಿಕ ಬಿಲ್ವಪತ್ರೆ ವನ; 3 ಎಕರೆಯಲ್ಲಿವೆ 920 ಮರಗಳು!

The historic Bilvapatre Vana is located in Chikkamagaluru district

|‌ ಕಾವೇರಿ ಭಾರದ್ವಾಜ್
ನಮ್ಮ ದೇಶದಲ್ಲಿ ಸಂತರು, ಪವಾಡ ಪರುಷರ ಸಂಖ್ಯೆ ಬಹುದೊಡ್ಡದು. ಪ್ರಕೃತಿ ಪೂಜೆ, ಆರಾಧನೆಗಳಿಗೆ ಈ ನೆಲದಲ್ಲಿ ಸುದೀರ್ಘ ಇತಿಹಾಸವಿದೆ. ಆರೋಗ್ಯದ ಅಂಶಗಳನ್ನು ಹೊಂದಿರುವ ಬಿಲ್ವಪತ್ರೆ ಈಶ್ವರನಿಗೆ ಬಲು ಪ್ರಿಯವಾದುದು. ಇಂತಹ ಬಿಲ್ವಪತ್ರೆಯ ವನಔು (Bilvapatre Vana) ಕಾಫಿ ನಾಡಿನ ಕಲ್ಮರುಡೇಶ್ವರ ಮಠದಲ್ಲಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಗ್ರಾಮದಲ್ಲಿ ಗೌರಿ ಕಾಲುವೆಯ ಸಮೀಪದಲ್ಲಿರುವ ಈ ಮಠದ ಬಳಿ ಎತ್ತ ನೋಡಿದರೂ ಹಸಿರು ಕಾಣುತ್ತದೆ. ಶಕುನಗಿರಿಯ ಬೆಟ್ಟದ ತಪ್ಪಲಿನಲ್ಲಿ ಇರುವ ಈ ಕ್ಷೇತ್ರವು 1400 ವರ್ಷಗಳ ಇತಿಹಾಸವನ್ನು ಹೊಂದಿದೆ. ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಗಳು ಇಲ್ಲಿ ಜೀವಂತ ಐಕ್ಯರಾಗಿದ್ದು, ಬೇಡಿ ಬಂದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುತ್ತಿದ್ದಾರೆ ಎಂಬ ಪ್ರತೀತಿಯೂ ಇದೆ.

ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಗಳು ಮೂಲತಃ ಚಿಕ್ಕಮಗಳೂರು ತಾಲೂಕು ಸಖರಾಯಪಟ್ಟಣ ಹೋಬಳಿ ಸಿಂಧಗೆರೆ ಬಳಿಯ ಕರಡಿಗವಿ ಮಠದ ಪೀಠಾಧಿಪತಿಗಳಾಗಿದ್ದು, ಅಲ್ಲಿಯೇ ತಮ್ಮ ಸಾಧನೆಯನ್ನು ಮಾಡಿ ಲೋಕ ಕಲ್ಯಾಣಕ್ಕಾಗಿ ಸಖರಾಯಪಟ್ಟಣದಲ್ಲಿ ಬಂದು ನೆಲೆನಿಂತು ಜೀವಂತ ಸಂಜೀವಿನಿ ಸಮಾಧಿಯಾದರೆಂಬುದು ಇಲ್ಲಿನ ಚರಿತ್ರೆ.
ಕರಡಿಗವಿ ಕ್ಷೇತ್ರದಲ್ಲಿ ಶಿಷ್ಯ ಪರಂಪರೆಯು ಮುಂದುವರಿದುಕೊಂಡು ಬಂದಿದೆ. ಸಖರಾಯಪಟ್ಟಣ ಕ್ಷೇತ್ರದಲ್ಲಿ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಗಳೇ ಜೀವಂತ ಲಿಂಗೈಕ್ಯರಾಗಿರುವುದರಿಂದ ಶಿಷ್ಯ ಸ್ವಾಮಿಗಳು ಕಾಣಸಿಗುವುದಿಲ್ಲ.

ಇದನ್ನೂ ಓದಿ | Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?

ಅಪರೂಪದ ಬಿಲ್ವಪತ್ರೆ ಮರಗಳ ತಾಣ

ವಿಶೇಷವೆಂದರೆ ಇಲ್ಲಿ ಮೂರು ಎಕರೆ ಪ್ರದೇಶದಲ್ಲಿ ಸರಿಸುಮಾರು 920 ಬಿಲ್ವಪತ್ರೆ ಮರಗಳನ್ನು ಕಾಣಬಹುದು. ನಾಗಲಿಂಗ ವೃಕ್ಷ ಮತ್ತು ಬಿಲ್ವ ವೃಕ್ಷಗಳು ಸಾಧಾರಣವಾಗಿ ಎಲ್ಲೆಂದರಲ್ಲಿ ಬೆಳೆಯುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಇಲ್ಲಿ ಒಂದೇ ಪ್ರದೇಶದಲ್ಲಿ ಇಷ್ಟು ಬಿಲ್ವಪತ್ರೆ ವೃಕ್ಷಗಳು ಕಾಣಸಿಗುವುದು ಬಹಳ ಅಪರೂಪ. ಈ ಬಿಲ್ವ ಪತ್ರೆ ಮರಗಳನ್ನು ಯಾವುದೇ ವ್ಯಕ್ತಿ ನೆಟ್ಟು ಬೆಳಸಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.

ಕ್ಷೇತ್ರವಾಸಿಗಳಾದ ಸ್ವಾಮಿಗಳು ತಮ್ಮ ಕಮಂಡಲದಿಂದ ತೀರ್ಥವನ್ನು ಪ್ರೋಕ್ಷಣೆ ಮಾಡಿ, ಈ ಬಿಲ್ವ ಪತ್ರೆ ಉದ್ಯಾನವನ್ನು ರೂಪಿಸಿದರು ಎಂಬುದು ಇಲ್ಲಿಯ ಭಕ್ತರ ನಂಬಿಕೆ. ಸುತ್ತಮುತ್ತಲಿನ ಯಾವುದೇ ಶಿವ ಪೂಜೆಗೆ ಇಲ್ಲಿಂದ ಬಿಲ್ವಪತ್ರೆಯನ್ನು ಕೊಂಡೊಯ್ಯಲು ಮುಕ್ತ ಅವಕಾಶವಿದೆ.

ಸುತ್ತಮುತ್ತಲ ಭಕ್ತರು ಯಾವುದೇ ಹೊಸ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವಾಗ, ಭೂಮಿ ವ್ಯವಹಾರ, ಜಮೀನಿನಲ್ಲಿ ಬೋರ್‌ವೆಲ್ ಕೊರೆಸುವಾಗ, ಮದುವೆ ಒಪ್ಪಂದಗಳ ಸಂದರ್ಭದಲ್ಲಿ, ಆರೋಗ್ಯದಲ್ಲಿ ಏರುಪೇರಾದಾಗ, ಕೌಟುಂಬಿಕ ಸಮಸ್ಯೆಗಳು ಎದುರಾದಾಗ ಹಾಗೂ ಇನ್ನಿತರ ಯಾವುದೇ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬಂದು ಪ್ರಸಾದ ಕೇಳುವ ಪರಿಪಾಠವಿದೆ. ದೇವರ ಎಡಭಾಗದಲ್ಲಿ ಸ್ವತಃ ಭಕ್ತರೇ ಕುಳಿತು ಪ್ರಸಾದ ಕೇಳುವ ಸಂಪ್ರದಾಯ ಇಂದಿಗೂ ನಡೆದು ಬಂದಿದೆ.

ಇದನ್ನೂ ಓದಿ | ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ

ಸ್ಥಳೀಯರ ಪ್ರಕಾರ ಬಿಲ್ವ ಪತ್ರೆ ಉದ್ಯಾನವನದ ಇನ್ನೊಂದು ವಿಶೇಷವೇನೆಂದರೆ, ಶಿಶಿರ ಋತುವಿನಲ್ಲಿ ಬಿಲ್ವ ಪತ್ರೆಗಳು ಉದ್ಯಾನವದ ಏಕಮುಖವಾಗಿ ಉದುರಲು ಪ್ರಾರಂಭವಾಗಿ, ವಸಂತ ಋತುವಿನಲ್ಲಿ ಅದೇ ದಿಕ್ಕಿನಿಂದಲೇ ಹಸಿರು ಚಿಗುರಲು ಪ್ರಾರಂಭವಾಗುತ್ತದೆ. ಇನ್ನು ಗ್ರೀಷ್ಮ ಋತುವಿನಲ್ಲಿ ಸಂಪೂರ್ಣ ಹಚ್ಚ ಹಸಿರಾಗಿರುತ್ತದೆ. ಈ ಹಿಂದೆ ಸ್ವಾಮಿಗಳು ತೀರ್ಥವನ್ನು ಪ್ರೋಕ್ಷಣೆ ಮಾಡಿದ ದಿಕ್ಕಿನಲ್ಲೇ ಈ ಸಂಗತಿಯು ನಡೆಯುತ್ತಿದೆ ಎಂಬುದು ಭಕ್ತರ ನಂಬಿಕೆ.

ಇಲ್ಲಿ ಪ್ರತಿದಿನ ಪೂಜೆ, ಅಭಿಷೇಕ ನಡೆಯುತ್ತದೆ. ಜತೆಗೆ ನಿತ್ಯ ದಾಸೋಹವೂ ಇದೆ. ವಿಶೇಷ ಸಂದರ್ಭಗಳಲ್ಲಿ ಸಹಸ್ರಾರು ಜನ ಭಕ್ತರು ದೂರದ ಊರುಗಳಿಂದ ಬಂದು ತಮ್ಮ ಹರಕೆ, ಮುಡಿಪುಗಳನ್ನು ಸಲ್ಲಿಸುತ್ತಾರೆ. ಪ್ರತಿ ವರ್ಷವೂ ಶ್ರಾವಣ ಮಾಸ, ಕಾರ್ತಿಕ ಮಾಸ, ಮತ್ತು ಶಿವರಾತ್ರಿಯಂದು ಉತ್ಸವಗಳು ನೆರವೇರಿಸಲಾಗುತ್ತಿದ್ದು, ದೀಪಾವಳಿಯ ನಂತರ ಕಡೇ ಕಾರ್ತಿಕದಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ.

Exit mobile version