ಹಾಸನ: ಹಾಸನಾಂಬೆ ದರ್ಶನಕ್ಕೆ ಭಾನುವಾರ ಭಕ್ತ ಸಾಗರವೇ ಹರಿದುಬಂದಿತ್ತು. ವಾರಾಂತ್ಯವಾಗಿದ್ದರಿಂದ ಮೂರನೇ ದಿನದ ಮಧ್ಯರಾತ್ರಿಯಿಂದಲೇ ದೇವಿ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರಿಂದ ದೇಗುಲದಲ್ಲಿ (Hasanamba Temple) ಜನ ಜಾತ್ರೆ ಸೃಷ್ಟಿಯಾಗಿತ್ತು.
ನವೆಂಬರ್ 3ರಂದು ಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ನವೆಂಬರ್ 15ರ ಮುಂಜಾನೆವರೆಗೂ ಭಕ್ತರು ದರ್ಶನ ಪಡೆಯಬಹುದಾಗಿದೆ. ಇಂದು ಕೂಡ ಅಪಾರ ಸಂಖ್ಯೆಯಲ್ಲಿ ಹಾಸನಾಂಬೆ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.
ಸರತಿ ಸಾಲುಗಳಲ್ಲಿ ನಿಂತು ಭಕ್ತರು ಹಾಸನಾಂಬೆ ದರ್ಶನ ಪಡೆಯುತ್ತಿದ್ದಾರೆ. ಇನ್ನು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಕುಟುಂಬ ಸಮೇತ ಆಗಮಿಸಿ ತಾಯಿ ದರ್ಶನ ಪಡೆದರು. ಪ್ರತೀ ವರ್ಷವೂ ಹಾಸನಾಂಬೆ ದರ್ಶನಕ್ಕೆ ಆಗಮಿಸುವ ಮಾಧುಸ್ವಾಮಿ ಅವರು, ಈ ಹಿಂದೆ ಹಾಸನ ಜಿಲ್ಲೆಯ ಉಸ್ತುವಾರಿಯಾಗಿದ್ದಾಗ, ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿದ್ದರು.
ಹಾಸನಾಂಬೆ ದರ್ಶನಕ್ಕೆ ಮಳೆ ಅಡ್ಡಿ
ಮಧ್ಯಾಹ್ನದ ವೇಳೆ ದಿಢೀರ್ ಸುರಿದ ಮಳೆಗೆ ಭಕ್ತರು ಹೈರಾಣಾದರು. ಮಳೆ ಹಿನ್ನೆಲೆಯಲ್ಲಿ ಟೆಂಟ್ ಹಾಕಿ ಸಮಸ್ಯೆ ಆಗದಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಆದರೂ ದೇಗುಲದ ಆವರಣದಲ್ಲಿ ನಿಂತಿದ್ದ ಕೆಲ ಭಕ್ತರಿಗೆ ದರ್ಶನಕ್ಕೆ ಮಳೆ ಅಡ್ಡಿಯಾಯಿತು. ನೈವೇದ್ಯಕ್ಕಾಗಿ ದರ್ಶನ ಸ್ಥಗಿತವಾಗಿದ್ದ ಸಂದರ್ಭದಲ್ಲಿ ದಿಢೀರ್ ಮಳೆ ಸುರಿಯಿತು. ದಿಢೀರ್ ಮಳೆಯಿಂದ ಮಳೆನೀರಲ್ಲಿ ನೆನೆಯುತ್ತಲೇ ಭಕ್ತರು ನಿಂತಿದ್ದರು.
ಇದನ್ನೂ ಓದಿ | Hasanamba Temple : ನಾವೇನು ದನ ಕಾಯೋಕೆ ಇದ್ದೀವಾ! ಹಾಸನಾಂಬ ಉತ್ಸವದಲ್ಲಿ ಡಿಸಿಗೆ ಶಾಸಕ ಸ್ವರೂಪ್ ಪ್ರಕಾಶ್ ಕ್ಲಾಸ್
ಇಳಿ ವಯಸ್ಸಿನಲ್ಲೂ ಆಗಸಕ್ಕೆ ಹಾರಿದ ವೃದ್ಧೆ
ಹಾಸನ: 76ರ ಇಳಿ ವಯಸ್ಸಿನಲ್ಲಿಯೂ ವೃದ್ಧೆಯೊಬ್ಬರು ಪ್ಯಾರಾಗ್ಲೈಡಿಂಗ್ ಮಾಡಿ ನೋಡುಗರು ಹುಬ್ಬೇರುವಂತೆ ಮಾಡಿದರು. ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಅಜ್ಜಿ ತಮ್ಮ ಸಾಹಸದ ಮೂಲಕ ಯುವಕ, ಯುವತಿಯರ ನಾಚುವಂತೆ ಮಾಡಿದರು. ಹಾಸನದ ಬೂವನಹಳ್ಳಿ ಏರ್ ಪೋರ್ಟ್‌ನಲ್ಲಿ ಹಾಸನಾಂಬ ಉತ್ಸವ ಹಿನ್ನೆಲೆಯಲ್ಲಿ ಪ್ಯಾರಾಗ್ಲೈಡಿಂಗ್, ಪ್ಯಾರಾಸೈಲಿಂಗ್ ಆಯೋಜಿಸಲಾಗಿದೆ. ಬೆಂಗಳೂರು ಮೂಲದ ಅಜ್ಜಿಯ ಸಾಹಸ ನೋಡುಗರ ಗಮನ ಸೆಳೆಯಿತು.