ತಿರುಪತಿ: ಬೇಸಿಗೆ ರಜೆ ಮುಗಿಯುತ್ತಿರುವುದರಿಂದ ಇಲ್ಲಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ನಿರೀಕ್ಷೆಯನ್ನು ಮೀರಿದ್ದು, ದೇವರ ದರ್ಶನಕ್ಕಾಗಿ ಗಂಟೆಗಟ್ಟಲೆ ಕಾಯುವಂತಾಗಿದೆ. ಕೆಲವೆಡೆ ಸರತಿಯ ಸಾಲಿನಲ್ಲಿ ತಳ್ಳಾಟ, ಕಾಲ್ತುಳಿತ ಕೂಡ ನಡೆದಿದೆ.
ಕಳೆದ ಎರಡು ದಿನಗಳಿಂದ ಟಿಕೆಟ್ ಪಡೆಯದೇ ಬಂದ ಭಕ್ತರ ಸಂಖ್ಯೆ ಇದ್ದಕ್ಕಿದ್ದಹಾಗೆ ಹೆಚ್ಚಾಗಿದ್ದು, ಸುಮಾರು 2 ಕಿ.ಮೀ. ಉದ್ದದ ಕ್ಯೂ ಸೃಷ್ಟಿಯಾಗಿದೆ. ಮೆಟ್ಟಿಲುಗಳನ್ನು ಹತ್ತಿ ಬೆಟ್ಟವೇರಿ ಬಂದ ಭಕ್ತರಿಗೂ ದೇವರ ದರ್ಶನ ದೊರೆಯದಂತಾಗಿದೆ. ಭಕ್ತರು ದೇವರ ದರ್ಶನಕ್ಕಾಗಿ ಸುಮಾರು 48 ಗಂಟೆಗಳಿಂದ ಕಾಯುತ್ತಲೇ ಇದ್ದಾರೆ.
ಹೀಗಾಗಿ ಇನ್ನೊಂದೆರಡು ದಿನಗಳ ಕಾಲ ತಿರುಪತಿ ಯಾತ್ರೆ ಕೈಗೊಳ್ಳದಂತೆ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಮನವಿ ಮಾಡಿದೆ. ದೇವರ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ವಿಐಪಿ ದರ್ಶನವನ್ನು ರದ್ದುಪಡಿಸಲಾಗಿದ್ದು, ಸರತಿಯ ಸಾಲಿನಲ್ಲಿ ನಿಂತಿರುವ ಭಕ್ತರಿಗೆ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ| ಅಯೋಧ್ಯೆಯ ರಾಮ ಮಂದಿರದ ಗರ್ಭ ಗೃಹಕ್ಕೆ ಜೂನ್ 1 ರಂದು ಸಿಎಂ ಯೋಗಿ ಆದಿತ್ಯನಾಥ್ ಶಿಲಾನ್ಯಾಸ
ಸದ್ಯ ಗಂಟೆಗೆ 4,500 ಭಕ್ತರಿಗೆ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತಿದೆ. ಆದರೆ 8 ಸಾವಿರಕ್ಕೂ ಹೆಚ್ಚು ಹೊಸದಾಗಿ ಭಕ್ತರು ಸರತಿಯ ಸಾಲಿಗೆ ಸೇರ್ಪಡೆಯಾಗುತ್ತಿದ್ದಾರೆ. ವೈಕುಂಠ ಏಕಾದಶಿಯಲ್ಲಿಯೂ ಸೇರದಷ್ಟು ಭಕ್ತರು ಬೆಟ್ಟಕ್ಕೆ ಬಂದಿರುವುದರಿಂದ ಪರಿಸ್ಥಿತಿಯನ್ನು ನಿರ್ವಹಿಸುವುದು ಕಷ್ಟವಾಗಿದೆ ಎಂದು ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಧರ್ಮ ರೆಡ್ಡಿ ತಿಳಿಸಿದ್ದಾರೆ.
“ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷದಿಂದ ದೇವರ ದರ್ಶನ ಮಾಡದಿದ್ದ ಭಕ್ತರು ಬೇಸಿಗೆ ರಜೆಯು ಮುಗಿಯುವುದರ ಒಳಗೆ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಹೀಗಾಗಿ ಕಳೆದ ಎರಡು ವಾರಗಳಿಂದ ನಿರೀಕ್ಷೆಗೂ ಮೀರಿ ಭಕ್ತರ ಆಗಮನವಾಗುತ್ತಿದೆ. ವಾರಾಂತ್ಯದಲ್ಲಿಯಂತೂ ಸುಮಾರು 70 ಸಾವಿರಕ್ಕೂ ಹೆಚ್ಚು ಮಂದಿಗೆ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ” ಎಂದು ಟಿಟಿಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲೇ ಟಿಕೆಟ್ ಪಡೆದು ಬಂದವರಿಗೆ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ. ಟಿಕೆಟ್ ಪಡೆಯದೇ ಬಂದವರು ದರ್ಶನಕ್ಕಾಗಿ ಗಂಟೆಗಟ್ಟಲೆ ಕಾಯುವಣಂತಾಗಿದೆ ಎಂದು ಅವರು ವಿವರಿಸಿದ್ದಾರೆ.
ಕೋಟಿ ಕೋಟಿ ಸಂಗ್ರಹ
ಪ್ರಪಂಚದ ಅತ್ಯಂತ ಶ್ರೀಮಂತ ದೇಗುಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿದಷ್ಟು ಕಾಣಿಕೆ ಸಂಗ್ರಹ ಹೆಚ್ಚಾಗುತ್ತಿದೆ. ಕಳೆದ ಗುರುವಾರ ಒಂದೇ ದಿನ 5.43 ಕೋಟಿ ಸಂಗ್ರಹವಾಗಿದೆ ಎಂದು ಟಿಟಿಡಿ ತಿಳಿಸಿದೆ. ಕಳೆದ ಶನಿವಾರ 4 ಕೋಟಿಗೂ ಹೆಚ್ಚು ಹಣ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿರಬಹುದು ಎಂದು ಅಂದಾಜಿಸಲಾಗಿದೆ.