ತುಮಕೂರು : ಸೂತಕವು ದೇವರಿಗೆ ಆಗಲ್ಲ ಎಂದು ಬಾಣಂತಿ, ಹಸುಗೂಸನ್ನೇ ಊರಿನಿಂದ ಹೊರಗಿಟ್ಟ ಕುಟುಂಬಸ್ಥರು ಇದೀಗ ಮೌಡ್ಯ ಆಚರಣೆಯಿಂದಾಗಿ ಮಗುವನ್ನೇ ಕಳೆದುಕೊಂಡಿದ್ದಾರೆ. ತುಮಕೂರು (Tumkur News) ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ (kadugollara Tradition) ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ವಿಪರೀತ ಶೀತದಿಂದ (cold weather) ಬಳಲಿ ಮೃತಪಟ್ಟಿದೆ.
ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಸುಗೂಸು ಜು.26ರಂದು ಪ್ರಾಣಬಿಟ್ಟಿದೆ. ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಬಾಣಂತಿ, ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿದ್ದರು. ಮಳೆ, ಗಾಳಿಯಿದ್ದರೂ ತಾಯಿ, ಮಗು ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಯೇ ವಾಸವಿದ್ದರು. ಇದೀಗ ಮೌಡ್ಯತೆಯೇ ಮಗುವಿನ ಜೀವ ತೆಗೆದಿದೆ.
ಮನುಷ್ಯ ಎಷ್ಟೇ ಆಧುನಿಕತೆಯತ್ತ ಮುಖ ಮಾಡುತ್ತಿದ್ದರೂ ಕೆಲವು ಕಡೆಗಳಲ್ಲಿ ಮೌಡ್ಯಾಚರಣೆಗಳು ಮಾತ್ರ ಇಂದಿಗೂ ರೂಢಿಯಲ್ಲಿವೆ. ದೇವರು, ಸಂಪ್ರದಾಯದ ಹೆಸರಿನಲ್ಲಿ ಮನುಷ್ಯರನ್ನೇ ಕೀಳಾಗಿ ಕಾಣುವ ಪರಿಪಾಠ ಇನ್ನೂ ಕೆಲವು ಸಮುದಾಯಗಳಲ್ಲಿ ಹಾಗೆಯೇ ಇದೆ. ಗೊಲ್ಲರಹಟ್ಟಿಯಲ್ಲಿ ವಾಸಿಸುವ ಕಾಡುಗೊಲ್ಲರಲ್ಲಿ ಇಂದಿಗೂ ಕೂಡ ಸೂತಕದ ಸಂಪ್ರದಾಯ ಆಚರಣೆಯಲ್ಲಿದೆ. ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಎಳೆ ಬಾಣಂತಿ ಮತ್ತು ಹಸುಗೂಸನ್ನೇ ಊರಿನಿಂದ ಹೊರಗಿಡುತ್ತಾರೆ. ಎರಡು ತಿಂಗಳು ಊರ ಹೊರಗೆ ನಿರ್ಮಿಸಿರುವ ಚಿಕ್ಕ ಗುಡಿಸಲಿನಲ್ಲಿಯೇ ಇರಬೇಕು.
ಇದನ್ನೂ ಓದಿ: Lok Sabha Election 2024 : ಬಿಜೆಪಿಯಿಂದ ಹೊರಗೆ ಕಾಲಿಟ್ಟರೇ ಸುಮಲತಾ?
ಅವಳಿ ಮಕ್ಕಳನ್ನು ಕಳೆದುಕೊಂಡ ತಾಯಿ
ಗ್ರಾಮದ ಸಿದ್ದೇಶ್ ಅವರ ಪತ್ನಿ ವಸಂತ ಕಳೆದ ತಿಂಗಳು 22ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವಸಂತಗೆ ಹೆರಿಗೆ ಆಗಿತ್ತು. ಈ ವೇಳೆ ಒಂದು ಮಗು ಸಾವನ್ನಪ್ಪಿದ್ದರೆ, ಇನ್ನೊಂದು ಮಗು ಬದುಕುಳಿದಿತ್ತು. ಏಳು ತಿಂಗಳಿಗೆ ಹೆರಿಗೆ ಆಗಿದ್ದರಿಂದ ಫ್ರೀ ಮ್ಯಾಚುರ್ಡ್ ಬೇಬಿಯನ್ನು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿಡಲಾಗಿತ್ತು. ಕಳೆದ ಜು.14 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆಸ್ಪತ್ರೆಯಿಂದ ಬರುತ್ತಿದ್ದಂತೆ ಕುಟುಂಬಸ್ಥರು ತಾಯಿ ಮತ್ತು ಮಗುವನ್ನು ಊರಾಚೆ ಇರುವ ಗುಡಿಸಲಿಗೆ ರವಾನೆ ಮಾಡಿದ್ದರು. ಹೀಗಾಗಿ ಬಾಣಂತಿ ವಸಂತ ಮತ್ತು ಹಸುಗೂಸು ಉಸಿರುಗಟ್ಟಿಸುವಂತಹ ಸಣ್ಣ ಗುಡಿಸಲಿನಲ್ಲೇ ಹಗಲು, ರಾತ್ರಿ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ವಿಪರೀತ ಮಳೆ, ಗಾಳಿಗೆ ಮಗು ಅನಾರೋಗ್ಯಕೀಡಾಗಿ ಇದೀಗ ಪ್ರಾಣಬಿಟ್ಟಿದೆ.
ಊರಿಗೆ ಕೇಡು ಬರುವ ಭೀತಿ
ನಮ್ಮ ದೇವರಿಗೆ ಸೂತಕ ಆಗಲ್ಲ. ಹಾಗಾಗಿ ನಾವು ಬಾಣಂತಿಯನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಸೂತಕದ ಬಾಣಂತಿ ಊರಿಗೆ ಬಂದರೆ ಕೇಡು ಆಗುತ್ತದೆ ಎಂಬುದು ಈ ಊರಿನವರ ನಂಬಿಕೆ. ಕಾಡುಗೊಲ್ಲರ ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಸೂತಕ ಆಗಲ್ಲ. ಹಿಂದಿನಿಂದಲ್ಲೂ ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮಳೆ, ಗಾಳಿ ಏನೇ ಬರಲಿ, ಅವರು ಇದ್ದರೂ, ಸತ್ತರೂ ಊರಿಂದ ಆಚೆಯೇ ಇರಬೇಕು. ಮನೆಯೊಳಗೆ ಬಿಟ್ಟುಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಊರಿನವರ ಉತ್ತರ.
ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಆಶಾ ಕಾರ್ಯಕರ್ತೆ ಕೂಡ ಈ ಗುಡಿಸಲಿಗೇ ಬಂದು ತಪಾಸಣೆ ನಡೆಸಿ ಹೋಗುತ್ತಿದ್ದರು. ಆದರೆ ಇದೀಗ ಮೌಡ್ಯಾಚರಣೆಗೆ ತಾಯಿ ವಸಂತ ಹಸುಗೂಸನ್ನು ಕಳೆದುಕೊಂಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ