Site icon Vistara News

Ugadi 2024: ಬಂತಿದೋ ಹೊಸ ಯುಗಾದಿ; ಬೇವು-ಬೆಲ್ಲ ತಿನ್ನೋದನ್ನ ಮರೆಯಬೇಡಿ!

Ugadi 2024

ಹಬ್ಬಗಳ ದೇಶವೆಂದು (Ugadi 2024) ಭಾರತವನ್ನು ಸುಮ್ಮನೆ ಹೇಳುವುದಲ್ಲ. ಇಲ್ಲಿನ ಬಹುತೇಕ ಸಮುದಾಯಗಳ ಹೊಸ ವರ್ಷಾರಂಭದ ದಿನವೇ ಹಬ್ಬ; ಆಮೇಲೆ ವರ್ಷವಿಡೀ ಒಂದಲ್ಲೊಂದು ಕಾರಣಕ್ಕೆ ಹಬ್ಬ! ಹೊಸವರ್ಷದ ಆರಂಭ, ಸುಗ್ಗಿಯ ಸಂಭ್ರಮ ಇವೆಲ್ಲ ಮೇಳೈಸುವ ಕಾಲವೆಂದರೆ ಚೈತ್ರಮಾಸದ ಆಜೂಬಾಜು ಇದ್ದೇವೆ ಎಂದೇ ಲೆಕ್ಕ. ಆಗಲೇ ಬರುವುದು ಹೊಸ ಸಂವತ್ಸರ ತರುವ ಯುಗಾದಿ ಹಬ್ಬ. ಹೊಸ ವರ್ಷದ ದಿನವಾದ ಎಪ್ರಿಲ್‌ 9ರಂದು ಶೋಭಕೃತ್‌ ಸಂವತ್ಸರ ಮುಗಿದು ಹೊಸದಾದ ಕ್ರೋಧಿನಾಮ ಸಂವತ್ಸರ ಆರಂಭಗೊಳ್ಳುತ್ತದೆ. ಹೊಸ ಯುಗದ ಆದಿ ಅಥವಾ ಆರಂಭವನ್ನು ಸೂಚಿಸುವಂತೆ ʻಯುಗಾದಿʼ ಎಂಬ ಪದ ಬಳಕೆಯಲ್ಲಿದೆ. ಚೈತ್ರಮಾಸದ ಆರಂಭದಲ್ಲಿ ಅಂದರೆ, ಚೈತ್ರ ಶುಕ್ಲ ಪ್ರತಿಪದೆಯಂದು ಹೊಸ ಸಂವತ್ಸರದ ಆಚರಣೆ ಮಾಡಲಾಗುತ್ತದೆ. ಇದು ವಸಂತ ಋತುವಿನ ಆಗಮನವನ್ನೂ ಸೂಚಿಸುತ್ತದೆ. ಈ ಬಾರಿಯ ಪ್ರತಿಪದೆಯ ತಿಥಿಯು ಎಪ್ರಿಲ್‌ 8ರಂದು ಮಧ್ಯಾಹ್ನ 3.20ಕ್ಕೆ ಆರಂಭಗೊಂಡು, ಎಪ್ರಿಲ್‌ 9ರ ಮಧ್ಯಾಹ್ನ 12ರವರೆಗೆ ಇರಲಿದೆ. ಇದು ಚೈತ್ರ ನವರಾತ್ರಿಯ ಆರಂಭದ ಸಮಯವೂ ಹೌದು.

ಮಹಾರಾಷ್ಟ್ರದಲ್ಲಿ ಗುಡಿಪಡ್ವಾ

ಮಹಾರಾಷ್ಟ್ರದಲ್ಲಿ ಈ ದಿನವನ್ನು ಗುಡಿಪಡ್ವಾ ಎಂದು ಕರೆಯಲಾಗುತ್ತದೆ. ಕರ್ನಾಟಕ ಮಾತ್ರವಲ್ಲದೆ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮುಂತಾದ ದಕ್ಷಿಣದ ರಾಜ್ಯಗಳಲ್ಲಿ ಇದು ಯುಗಾದಿ ಎಂದೇ ಕರೆಸಿಕೊಳ್ಳುತ್ತದೆ. ಇದೀಗ ಚಾಂದ್ರಮಾನ ಯುಗಾದಿಯಾದರೆ, ಸೌರಮಾನ ಯುಗಾದಿಯಂತೆ ʻವಿಶುʼ ಹಬ್ಬ ಕೇರಳ ಸೇರಿದಂತೆ ಹಲವೆಡೆ ಆಚರಣೆಯಲ್ಲಿದೆ.

ಆಚರಣೆಯೇನು?

ಬದುಕಲ್ಲಿ ಸಮರಸ ಇರಬೇಕೆಂಬ ಉನ್ನತ ಆದರ್ಶವನ್ನು ಹಿಂದೂ ಸಂವತ್ಸರದ ಆದಿಯಲ್ಲೇ ಸೂಚಿಸುವಂತೆ, ಬೇವು-ಬೆಲ್ಲ ತಿನ್ನುವುದು ಈ ಹಬ್ಬದ ಪ್ರಮುಖ ಆಚರಣೆಗಳಲ್ಲಿ ಒಂದು. ಜೊತೆಗೆ ಮೈ-ಮನಗಳೆಲ್ಲ ಹಗುರಾಗುವಂಥ ಅಭ್ಯಂಗ ಸ್ನಾನ, ಪಂಚಾಗ ಶ್ರವಣ, ಹೊರಗೆ ಮಾವಿನ ತೋರಣ, ಒಳಗೆ ರುಚಿಕಟ್ಟಾದ ಹೋಳಿಗೆ-ಹೂರಣ… ಇವು ಸ್ಥೂಲವಾಗಿ ಯುಗಾದಿಯ ಆಚರಣೆಯ ಮುಖ್ಯಾಂಶಗಳು. ಆದರೆ ಪ್ರಾದೇಶಿಕವಾಗಿ ಇದರ ಆಚರಣೆಯಲ್ಲಿ ಸಹಜವಾಗಿ ಭಿನ್ನತೆಯಿದೆ.

ಹಬ್ಬದ ಸಂಭ್ರಮ

ಬೆಳಗಿನ ರಂಗೋಲಿ, ತೋರಣಗಳಿಂದಲೇ ಹಬ್ಬದ ಸಂಭ್ರಮ ಪ್ರಾರಂಭವಾಗುತ್ತದೆ. ನಂತರ ಮೈಗೆಲ್ಲ ಕೊಬ್ಬರಿ ಅಥವಾ ಎಳ್ಳೆಣ್ಣೆ ಇಲ್ಲವೇ ಬೇವಿನ ಎಣ್ಣೆಯ ಸ್ನಾನದ ಸಂಭ್ರಮ. ಇಷ್ಟಾದ ಮೇಲೆ ಹಬ್ಬಕ್ಕೆ ಹೊಸ ಬಟ್ಟೆಯಿಲ್ಲದಿದ್ದರೆ ಹೇಗೆ? ವಸಂತ ಋತುವಿನ ಆಗಮನಕ್ಕೆ ಪೂರಕವಾಗಿ ಎಲ್ಲೆಡೆ ಹೊಸ ಹಸಿರು, ನವ ಚಿಗುರು ನಳನಳಿಸುತ್ತಿರುತ್ತದೆ. ಅದಕ್ಕೆ ತಕ್ಕಂತೆ, ಹೊಸ ಹುಣಸೆಹಣ್ಣಿನ ಪಾನಕ, ಮಾವಿನಕಾಯಿ ಚಿತ್ರಾನ್ನ, ಬಗೆಬಗೆಯ ಹೋಳಿಗೆಗಳು, ಬೇವು-ಬೆಲ್ಲದ ಮಿಶ್ರಣದ ಸೇವನೆ ಸಾಮಾನ್ಯವಾಗಿ ಹೆಚ್ಚಿನ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಇದರ ಮಹತ್ವ ಏನು?

ಎಣ್ಣೆಸ್ನಾನ ಅಥವಾ ಅಭ್ಯಂಗ ಸ್ನಾನದ ಪ್ರಯೋಜನ ಹಲವು ರೀತಿಯಲ್ಲಿದೆ. ಬೇಸಿಗೆಯಲ್ಲಿ ಕಾಡುವ ಹಲವು ಚರ್ಮ ರೋಗಗಳ ನಿವಾರಣೆಯ ಉದ್ದೇಶ ಇದರಲ್ಲಿ ಪ್ರಮುಖವಾಗಿದ್ದರೂ, ಹದವಾಗಿ ಎಣ್ಣೆ ನೀವಿ ನಂತರ ಝಳಕ ಮಾಡುವುದರಿಂದ ದೇಹಸ್ವಾಸ್ಥ್ಯ ವೃದ್ಧಿಸುತ್ತದೆ; ಧನಾತ್ಮಕ ಚಿಂತನೆಗಳತ್ತ ಮನಸ್ಸನ್ನು ಪ್ರೇರೇಪಿಸುತ್ತದೆ; ಮೈ-ಮನಗಳಿಗೆ ಚೈತನ್ಯ ತುಂಬುತ್ತದೆ. ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೇವಿನ ಮಹತ್ವವಂತೂ ಬಹಳಷ್ಟು ರೀತಿಯಲ್ಲಿದೆ. ಇದರ ಬ್ಯಾಕ್ಟೀರಿಯ ನಿರೋಧಕ ಗುಣಗಳು ಚರ್ಮ ರೋಗಗಳನ್ನು ನಿವಾರಿಸಿ, ಕೂದಲಿನ ಆರೋಗ್ಯ ವೃದ್ಧಿಸಿ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಇದು ಸದೃಢಗೊಳಿಸುತ್ತವೆ. ಮೂಳೆಗಳನ್ನು ಸದೃಢಗೊಳಿಸುವ ಬೆಲ್ಲವೂ ಹತ್ತಾರು ರೀತಿಯಲ್ಲಿ ಪ್ರಯೋಜನಕಾರಿ.

ಪಂಚಾಂಗ ಶ್ರವಣ

ಪರಂಪರಾಗತ ಆಚರಣೆಗಳ ಪೈಕಿ ಪಂಚಾಗ ಶ್ರವಣವೂ ಒಂದು. ಹೊಸ ಪಂಚಾಗ ಬಂದಾಕ್ಷಣ ಆಯಾ ವರ್ಷದ ಮಳೆ, ಬೆಳೆ, ಯಾವೆಲ್ಲ ವಸ್ತುಗಳು ತುಟ್ಟಿ, ಯಾವುದೆಲ್ಲ ಅಗ್ಗ, ಯಾವ ಹಬ್ಬಗಳು ಎಂದಿಗೆ ಬರುತ್ತವೆ, ರಾಶಿಗಳ ಆಧಾರದ ಮೇಲೆ ವರ್ಷ ಭವಿಷ್ಯವೇನು, ಯಾರಿಗೆಲ್ಲ ಕಂಕಣಬಲ, ನೌಕರಿ, ಯಶಸ್ಸು ಮುಂತಾದ ಹಲವು ವಿಷಯಗಳ ವಿಸ್ತರಣೆ ಮಾಡುವುದು ಬಹಳಷ್ಟು ಪ್ರಾಂತ್ಯಗಳಲ್ಲಿ ಚಾಲ್ತಿಯಲ್ಲಿದೆ.

Exit mobile version