Site icon Vistara News

Ulavi jatra : ಶ್ರೀ ಚೆನ್ನಬಸವೇಶ್ವರ ಮಹಾರಥ ಎಳೆಯುವುದರೊಂದಿಗೆ ಉಳವಿ ಜಾತ್ರಾ ಮಹೋತ್ಸವಕ್ಕೆ ತೆರೆ

Ulavi Fair Sri Chennabasaveshwara Zoida

#image_title

ಜೋಯಿಡಾ: ಶ್ರೀ ಚೆನ್ನಬಸವೇಶ್ವರ ಮಹಾರಾಜ ಕೀ ಜೈ ಎನ್ನುತ್ತಾ ಲಕ್ಷಾಂತರ ಭಕ್ತರು ಶ್ರೀ ಚೆನ್ನಬಸವೇಶ್ವರ ಮಹಾರಥೋತ್ಸವದ ರಥ ಎಳೆಯುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಶ್ರೀ ಕ್ಷೇತ್ರ ಉಳವಿಯಲ್ಲಿ ಜಾತ್ರಾ (Ulavi Fair) ಮಹೋತ್ಸವವು ಭಕ್ತಿಭಾವಗಳೊಂದಿಗೆ ಸೋಮವಾರ (ಫೆ.೬) ಸಂಪನ್ನಗೊಂಡಿತು.

ದೇವಸ್ಥಾನದ ರಥ ಬೀದಿಯಲ್ಲಿ ಸಾವಿರಾರು ಭಕ್ತಾದಿಗಳು ರಥ ಎಳೆಯುವ ಹಗ್ಗಕ್ಕೆ ಕೈ ಜೋಡಿಸಿ ಎಳೆಯುತ್ತಾ ಒಂದೇ ಉಸಿರಿನಲ್ಲಿ ಎಲ್ಲರೂ ಶ್ರೀ ಚೆನ್ನಬಸವೇಶ್ವರರಿಗೆ ಜಯಕಾರ ಹಾಕಿದರು. ಕಿಕ್ಕಿರಿದು ತುಂಬಿದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಉಳವಿ ಶ್ರೀ ಚೆನ್ನಬಸವೇಶ್ವರರ ಮಹಾರಥೋತ್ಸವ ನಡೆಯುವುದರೊಂದಿಗೆ ಉಳವಿ ಶ್ರೀ ಚೆನ್ನಬಸವೇಶ್ವರನ ಜಾತ್ರಾ ಮಹೋತ್ಸವಕ್ಕೆ ತಾತ್ಕಾಲಿಕ ತೆರೆ ಬಿದ್ದಿತು.

ಉಳವಿ ಆಡಳಿತ ಮಂಡಳಿಯ ಅಧ್ಯಕ್ಷ ಗಂಗಾಧರ ಕಿತ್ತೂರು, ಉಪಾಧ್ಯಕ್ಷ ಸಂಜಯ ಕಿತ್ತೂರು, ಬಿ.ಸಿ ಉಮಾಪತಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಲಾ ಮಿರಾಶಿ, ಉಪಾಧ್ಯಕ್ಷ ಮಂಜುನಾಥ ಮೋಖಾಶಿ, ಶಂಕ್ರಯ್ಯ ಕಲ್ಮಠ, ಆಡಳಿತ ಮಂಡಳಿಯವರು ಮಹಾರಥಕ್ಕೆ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಭಕ್ತಾದಿಗಳೊಂದಿಗೆ ರಥ ಎಳೆದು ಚಾಲನೆ ನೀಡಿದರು.

ನಂತರ ನೆರೆದ ಸಾವಿರಾರು ಭಕ್ತಾದಿಗಳು ನಾ ಮುಂದೆ, ತಾ ಮುಂದೆ ಎನ್ನುವಂತೆ ಮಹಾರಥದ ಹಗ್ಗಕ್ಕೆ ಕೈ ಹಿಡಿಯಲು ಮುಂದಾಗುತ್ತಾ ರಥವನ್ನು ರಥ ಬೀದಿಯಿಂದ ವೀರಭದ್ರ ದೇವಸ್ಥಾನದವರೆಗೂ ಧರ ಧರನೇ ಎಳೆದು ಪುನಃ ಶ್ರೀ ಚೆನ್ನಬಸವೇಶ್ವರ ದೇವಸ್ಥಾನದ ಆವರಣದವರೆಗೆ ತರುವ ಮೂಲಕ ಲಕ್ಷಾಂತರ ಭಕ್ತರ ಆದಿದೈವ ಶ್ರೀ ಚೆನ್ನಬಸವೇಶ್ವರನ ಮಹಾರಥೋತ್ಸವ ಸಂಪನ್ನಗೊಳಿಸಿದರು.

ರಥ ಬೀದಿಯಲ್ಲಿ ದೊರೆಯುವ ಬಾಳೆಹಣ್ಣು, ಉತ್ತತ್ತಿ, ಮೂಸಂಬಿಗಳನ್ನು ಖರೀದಿಸಿ ರಥಕ್ಕೆ ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗೆ ಚೆನಬಸವೇಶ್ವರನಲ್ಲಿ ಬೇಡಿಕೊಳ್ಳುತ್ತಿರುವುದು ಕಂಡುಬಂದಿತ್ತು. ಫಲ ಪುಷ್ಪ, ತೆಂಗಿನಕಾಯಿಗಳ ಅಂಗಡಿಗಳು, ವಿಭೂತಿ ಗಟ್ಟಿಗಳು, ಕುಂಕುಮ, ವಿವಿಧ ಬಗೆಯ ರಂಗು ರಂಗಿನ ದೇವರ ಚಿತ್ರಗಳಿರುವ ಹಾರಗಳು, ಕಂಕಣಗಳು, ಪೋಟೋಗಳು, ಮಕ್ಕಳ ಆಟಿಕೆಯ ಸಾಮಗ್ರಿಗಳ ಅಂಗಡಿಗಳು ಸಾಲುಗಳಲ್ಲಿ ಇದ್ದು ಜಾತ್ರೆಗೆ ಹೆಚ್ಚಿನ ರಂಗು ತಂದಿತ್ತು.

ಇದನ್ನೂ ಓದಿ: Pathaan Movie : ಹನ್ನೆರಡೇ ದಿನಗಳಲ್ಲಿ 830 ಕೋಟಿ ರೂ. ದಾಟಿದ ಪಠಾಣ್‌ ಕಲೆಕ್ಷನ್‌

ಪೊಲೀಸ್ ಬಿಗಿ ಬಂದೊಬಸ್ತ್: ಈ ವರ್ಷ ಉಳವಿ ಜಾತ್ರೆಗೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿತ್ತು. ದಾಂಡೇಲಿ ಡಿ.ವೈ.ಎಸ್.ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ 7 ಸಿಪಿಐ, 24 ಪಿಎಸ್ಐ ಸೇರಿದಂತೆ 300ಕ್ಕೂ ಅಧಿಕ ಪೊಲೀಸರನ್ನು ಜಾತ್ರಾ ಬಂದೋಬಸ್ತಿಗಾಗಿ ನಿಯೋಜಿಸಲಾಗಿತ್ತು. ಜೋಯಿಡಾ ಸಿಪಿಐ ಮಹಾಂತೇಶ ಹೊಸಪೇಟೆ ಮತ್ತು ರಾಮನಗರ ಪಿ.ಎಸ್.ಐ ಬಸವರಾಜ ಮಾಬನೂರ ಮುಂತಾದವರು ಸುಗಮ ಸಂಚಾರ ನಡೆಸಲು ಮುತುವರ್ಜಿ ವಹಿಸಿದ್ದರು.

ಇದನ್ನೂ ಓದಿ: Adani Group: ಹೂಡಿಕೆದಾರರ ವಿಶ್ವಾಸ ವೃದ್ಧಿಗೆ ಅವಧಿಗೆ ಮುನ್ನ 8,900 ಕೋಟಿ ರೂ. ಸಾಲ ಮರು ಪಾವತಿಗೆ ಅದಾನಿ ಸಜ್ಜು

Exit mobile version