Site icon Vistara News

Ulavi Fair: ಜಿಲ್ಲಾಧಿಕಾರಿಗಳ ಆದೇಶ ಧಿಕ್ಕರಿಸಿ ಉಳವಿ ಜಾತ್ರೆಗೆ ಆಗಮಿಸುತ್ತಿರುವ ಚಕ್ಕಡಿ ಗಾಡಿಗಳು

Ulavi Fair karwar Skin disease in cattle

#image_title

ಕಾರವಾರ: ಕರ್ನಾಟಕದ ಪ್ರಸಿದ್ಧ ಜಾತ್ರೆಗಳ ಪೈಕಿ ಒಂದಾದ ಜೋಯಿಡಾ ತಾಲೂಕಿನ ಶ್ರೀ ಕ್ಷೇತ್ರ ಉಳವಿ ಚೆನ್ನಬಸವೇಶ್ವರರ ಜಾತ್ರೆ (Ulavi Fair) ಜ. 28ರಿಂದ ಆರಂಭವಾಗಿದೆ. ರಾಜ್ಯಾದ್ಯಂತ ದನಗಳಿಗೆ ಚರ್ಮಗಂಟು ರೋಗ ಇರುವುದರಿಂದ ಚಕ್ಕಡಿ ಗಾಡಿಗಳು ಬರಬಾರದು ಎಂಬ ಜಿಲ್ಲಾಧಿಕಾರಿಗಳ ಆದೇಶವನ್ನು ಧಿಕ್ಕರಿಸಿ ಉಳವಿ ಜಾತ್ರೆಗೆ ಚಕ್ಕಡಿಗಳ ದಂಡು ಆಗಮಿಸುತ್ತಿವೆ. ಆರೋಗ್ಯವಾಗಿರುವ, ವಾಕ್ಸಿನ್ ಆಗಿರುವ ಎತ್ತುಗಳನ್ನು ಜಾತ್ರೆಗೆ ಬಿಡಲಾಗುತ್ತಿದೆ ಎನ್ನುವ ಸುದ್ದಿ ಕೇಳಿಬರುತ್ತಿದ್ದು, ಇದರಿಂದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ತಮ್ಮ ಎತ್ತುಗಳು ಆರೋಗ್ಯಕರವಾಗಿವೆ, ವಾಕ್ಸಿನ್ ಆಗಿದೆ ಎಂದು ನೂರಾರು ಚಕ್ಕಡಿಗಳು ಬರುವ ಸಾಧ್ಯತೆ ಇದೆ. ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಜಿಲ್ಲಾಧಿಕಾರಿಗಳು ರೋಗ ಹೆಚ್ಚಾಗಬಾರದು ಎನ್ನುವ ಉದ್ದೇಶದಿಂದ ಚಕ್ಕಡಿ ಗಾಡಿಗಳನ್ನು ಉಳವಿ ಜಾತ್ರೆಗೆ ತರಬೇಡಿ ಎನ್ನುವ ಆದೇಶವನ್ನು ಮಾಡಿದ್ದರು. ಈ ಆದೇಶವನ್ನು ಮೀರಿಯೂ ಚಕ್ಕಡಿ ಗಾಡಿಗಳು ಉಳವಿ ಜಾತ್ರೆಗೆ ಬರುತ್ತಿವೆ.

ಇದನ್ನೂ ಓದಿ | Union Budget 2023: ಮಹಿಳಾ ಸಮ್ಮಾನ್‌ ಬಚತ್‌ ಯೋಜನೆ, 7.5% ಬಡ್ಡಿಯ ಉಳಿತಾಯ ಯೋಜನೆ

#image_title

ಆರಂಭದಲ್ಲೇ ಎಚ್ಚರಿಕೆ ನೀಡಿದ್ದ ಜಿಲ್ಲಾಡಳಿತ

ಜಾತ್ರೆ ಆರಂಭದಲ್ಲೇ ಬಹಳಷ್ಟು ಚಕ್ಕಡಿ ಗಾಡಿಗಳು ಉಳವಿಯತ್ತ ಧಾವಿಸುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ, ತಾಲೂಕು ಆಡಳಿತ ಚರ್ಮಗಂಟು ರೋಗ ಬಂದ ಕಾರಣ ಚಕ್ಕಡಿ ಗಾಡಿಗಳನ್ನು ತರಬಾರದು ಎನ್ನುವ ಬೋರ್ಡ್‌ಗಳನ್ನು ಹಾಕಿದ್ದರೂ ಸಹಿತ ರೈತರು ಚಕ್ಕಡಿ ಗಾಡಿಗಳನ್ನು ತರುತ್ತಿದ್ದಾರೆ. ಜಾತ್ರೆಗೆ ಚಕ್ಕಡಿ ತರಲೇಬೇಕು, ಇಲ್ಲವಾದರೆ ದೇವರು ಶಾಪ ನೀಡುತ್ತಾನೆ. ಬೆಳೆ ಉತ್ತಮವಾಗಿ ಬರುವುದಿಲ್ಲ ಎನ್ನುವ ಮೂಢನಂಬಿಕೆಗಳಿಗೆ ಒಳಗಾಗಿ ರೈತರು ಚಕ್ಕಡಿ ಗಾಡಿಗಳನ್ನು ತರುತ್ತಿದ್ದಾರೆ. ಆದರೆ ಮೂಕ ಪ್ರಾಣಿಗಳಾದ ದನಗಳಿಗೆ ಇದರಿಂದ ತೊಂದರೆ ಎದುರಾಗಲಿದೆ.

ಇದನ್ನೂ ಓದಿ | Budget 2023: ಕೆಂಪು ಕೈಮಗ್ಗದ ಸೀರೆಯಲ್ಲಿ ಮಿಂಚಿದ ನಿರ್ಮಲಾ ಸೀತಾರಾಮನ್, ಏನಿದರ ಸುಳಿವು?

ತಾಲೂಕಿನಲ್ಲಿ ವ್ಯಾಪಿಸಿರುವ ಲಿಂಪಿ ಸ್ಕಿನ್ ಡಿಸೀಸ್

ಜೋಯಿಡಾ ತಾಲೂಕಿನ ಹಲವಾರು ಕಡೆಗಳಲ್ಲಿ ಈಗಾಗಲೇ ಚರ್ಮಗಂಟು ರೋಗ ಹರಡಿದ್ದು, ಜಾತ್ರೆಗೆ ಬರುವ ಎತ್ತುಗಳಿಗೂ ಹರಡುವ ಸಾಧ್ಯತೆ ಇದೆ. ಹೀಗಾಗಿ ಜಾತ್ರೆಗೆ ಚಕ್ಕಡಿ ತರಬಾರದು ಎಂದು ತಿಂಗಳುಗಳ ಹಿಂದೆಯೇ ಸರ್ಕಾರದ ಕಡೆಯಿಂದ ಎಸಿ ವಿಜಯಲಕ್ಷ್ಮೀ ರಾಯಕೋಡ ಅವರು ಸಭೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಉಳವಿ ಟ್ರಸ್ಟ್ ಕಮಿಟಿಯವರಿಗೆ ತಿಳಿ ಹೇಳಿದ್ದರು. ಬಯಲು ಸೀಮೆಯಿಂದ ಬರುವ ಒಂದೊಂದು ಎತ್ತುಗಳಿಗೂ ಒಂದರಿಂದ ಎರಡು ಲಕ್ಷ ರೂ. ಮೌಲ್ಯವಿರುತ್ತದೆ. ಜಾತ್ರೆಗೆ ಬಂದು ರೋಗಕ್ಕೆ ತುತ್ತಾಗಿ ಸತ್ತರೆ ರೈತನಿಗೂ ನಷ್ಟ, ಇಲ್ಲಿಯ ಅಧಿಕಾರಿಗಳಿಗೂ ಹಾಗೂ ಜಾತ್ರಾ ಕಮಿಟಿಯವರಿಗೂ ಕೆಟ್ಟ ಹೆಸರು ಎನ್ನುವುದು ಸಾರ್ವಜನಿಕರ ಮಾತು. ಉಳವಿ ಜಾತ್ರೆಗೆ ಬರುವ ಎತ್ತುಗಳ ಬಗ್ಗೆ ಕಾಳಜಿ ಅತ್ಯಗತ್ಯವಾಗಿದ್ದು ಧಾರವಾಡ, ಬೆಳಗಾವಿ ಮೂಲದಿಂದ ಬರುವ ಎತ್ತುಗಳನ್ನು ವಾಪಸ್ ಕಳಿಸಲು ಆಯಾ ಕ್ಷೇತ್ರದ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Exit mobile version