Site icon Vistara News

Vaikuntha Ekadashi 2023 | ಇಸ್ಕಾನ್‌ನಲ್ಲಿ ಸಂಭ್ರಮದಿಂದ ವೈಕುಂಠ ಏಕಾದಶಿ ಆಚರಣೆ

Vaikuntha Ekadashi 2023

ಬೆಂಗಳೂರು: ನಗರದ ಇಸ್ಕಾನ್‌ ದೇಗುಲಗಳಲ್ಲಿ ವೈಕುಂಠ ಏಕಾದಶಿಯನ್ನು (Vaikuntha Ekadashi 2023) ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಮುಂಜಾನೆಯಿಂದಲೇ ಸಾವಿರಾರು ಸಂಖೈೆಯಲ್ಲಿ ಆಗಮಿಸುತ್ತಿರುವ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.

ವೈಕುಂಠ ಏಕಾದಶಿಯ ಅಂಗವಾಗಿ ನಗರದ ರಾಜಾಜಿನಗರದಲ್ಲಿರುವ ಶ್ರೀ ರಾಧಾ ಕೃಷ್ಣ ಮಂದಿರ ಮತ್ತು ಕನಕಪುರ ರಸ್ತೆಯಲ್ಲಿರುವ ಶ್ರೀ ರಾಜಾಧಿರಾಜ ಗೋವಿಂದ ಮಂದಿರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ 3 ಗಂಟೆಯಿಂದಲೇ ಪೂಜೆ ಪುನಸ್ಕಾರ, ಹೋಮಗಳು ಆರಂಭವಾದವು.

ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಿದ್ದು, ರಾತ್ರಿಯವರೆಗೂ ದೇವರ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಇಸ್ಕಾನ್‌ ತಿಳಿಸಿದೆ. ದೇವರ ದರ್ಶನಕ್ಕೆ ಬರುವಾಗ ಮತ್ತು ದೇವಸ್ಥಾನದೊಳಗೆ ಪ್ರವೇಶಿಸುವಾಗ ಮಾಸ್ಕ್ ಧರಿಸಿರಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಸ್ವರ್ಣ ರಂಗಿನಿಂದ ಲೇಪಿತವಾದ ಭವ್ಯ ವೈಕುಂಠ ದ್ವಾರವನ್ನು ದೇವಸ್ಥಾನದ ಪ್ರವೇಶ ಸ್ಥಳದಲ್ಲಿ ನಿರ್ಮಿಸಲಾಗಿತ್ತು. 15 ಅಡಿ ಎತ್ತರ ಹಾಗೂ 11 ಅಡಿ ಅಗಲದ ವೈಕುಂಠ ದ್ವಾರ ಆಕರ್ಷಕವಾಗಿದ್ದು, ಇಡೀ ದೇವಾಲಯವನ್ನು ವೈಕುಂಠಕ್ಕೆ ಹೋಲಿಕೆಯಾಗುವಂತೆ ರೂಪಿಸಲಾಗಿತ್ತು. ದೇವಾಲಯವನ್ನು ಬಣ್ಣ ಬಣ್ಣದ ಸುಗಂಧಿತ ಪುಷ್ಪಗಳಿಂದ ಸಿಂಗರಿಸಲಾಗಿತ್ತು.

ವೈಕುಂಠ ದ್ವಾರವು ರಾತ್ರಿ 9 ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ ಎಂದು ಇಸ್ಕಾನ್‌ ತಿಳಿಸಿದೆ. ಮಂದಿರಕ್ಕೆ ಭೇಟಿ ನೀಡುವ ಭಕ್ತರು, ದಿನವಿಡಿ ಭಗವಂತನ ಒಂದು ಲಕ್ಷ ನಾಮಗಳನ್ನು ಜಪಿಸಲ್ಪಡುವ ಲಕ್ಷಾರ್ಚನೆ ಸೇವೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ. ಈ ಸೇವೆಗಾಗಿ ಸುಂದರ ಶ್ರೀನಿವಾಸ ಗೋವಿಂದನ ಪ್ರತಿಮೆ ಸಜ್ಜುಗೊಳಿಸಲಾಗಿದೆ. ಸಂಜೆ 5ಕ್ಕೆ ವಿಶ್ವಶಾಂತಿಗಾಗಿ ವೆಂಕಟೇಶ್ವರ ಹೋಮವನ್ನು ನೆರವೇರಿಸಲಾಗುತ್ತಿದ್ದು, ಅನೇಕ ಭಕ್ತರು ಹೋಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ವಿಶೇಷ ಪ್ರಸಾದ ವಿತರಿಸಲಾಗುತ್ತಿದೆ. ವೈಕುಂಠ ಏಕಾದಶಿಯ ಅಂಗವಾಗಿ ವಿಶೇಷ ಪೂಜೆ, ಸಂಕೀರ್ತನೆ, ಉಪನ್ಯಾಸ, ಹೋಮ, ಮಹಾ ಮಂಗಳಾರತಿ ಕಾರ್ಯಕ್ರಮಗಳು ನಡೆಯುತ್ತಿವೆ. ಕೆಲವು ಕಾರ್ಯಕ್ರಮಗಳನ್ನು ಯೂ-ಟೂಬ್‌ನಲ್ಲಿ ಲೈವ್‌ ಮಾಡಲಾಗುತ್ತಿದೆ.

ಇದನ್ನೂ ಓದಿ | Vaikuntha Ekadashi 2023 | ಮನಸ್ಸಿಗೆ ವಿಕುಂಠಿತವಾದ ಗತಿಯನ್ನುಂಟು ಮಾಡುವುದೇ ವೈಕುಂಠ ಏಕಾದಶಿ

Exit mobile version