ಯಲ್ಲಾಪುರ: ಕೇರಳದ ಪುಣ್ಯ ಕ್ಷೇತ್ರವಾಗಿರುವ ಶಬರಿಮಲೆಗೆ ಪಾದಯಾತ್ರೆ ಮೂಲಕ ಹೋಗುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬರು ಅಯ್ಯಪ್ಪ ಭಕ್ತರು ಮಂಗಳೂರಿನಿಂದ ವೈಷ್ಣೋದೇವಿಗೆ ಹೋಗಿ ಅಲ್ಲಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ಪ್ರಯಾಣಿಸುತ್ತಿದ್ದಾರೆ. ಮಂಗಳೂರಿನ ಮಂಗಳೂರಿನ ಪ್ರಭಾತ್ ಕುಮಾರ್ ಕರಿಯಪ್ಪ ಎಂಬವರೇ ಈ ಶ್ರದ್ಧಾಳು ಭಕ್ತ.
ಕಳೆದ ಆರು ವರ್ಷದಿಂದ ಪಾದಯಾತ್ರೆ ಮೂಲಕ ಶಬರಿಮಲೆಗೆ ತೆರಳುವ ಅವರು ಈ ಬಾರಿ ಜಮ್ಮು-ಕಾಶ್ಮೀರದಿಂದ ಪಾದಯಾತ್ರೆಯಲ್ಲಿ ಸಾಗುತ್ತಿರುವುದು ವಿಶೇಷವಾಗಿದೆ. ಕಳೆದ ಆ. 24ರಂದು ಮಂಗಳೂರಿನಲ್ಲಿ ಮಾಲಾಧಾರಣೆ ಮಾಡಿ, ಆ.28 ರಂದು ವಿಮಾನದ ಮೂಲಕ ಜಮ್ಮು ಕಾಶ್ಮೀರ ಪ್ರಯಾಣ ಬೆಳೆಸಿದ್ದರು ಪ್ರಭಾತ್ ಕುಮಾರ್. ಅಲ್ಲಿ ಮಾತಾ ವೈಷ್ಣೋದೇವಿಯ ದರ್ಶನ ಮಾಡಿ ಆ. 31ರಂದು ಇರುಮುಡಿ ಕಟ್ಟಿಕೊಂಡು ಅಲ್ಲಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಈವರೆಗೆ 96 ದಿನಗಳ ಪಾದಯಾತ್ರೆ ಮಾಡುತ್ತ ಸುಮಾರು 3,200ಕಿ.ಮೀ ಕ್ರಮಿಸಿ, ಗುರುವಾರ ಯಲ್ಲಾಪುರ ಪಟ್ಟಣಕ್ಕೆ ಬಂದು ತಲುಪಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಭಾತ್ ಕುಮಾರ್, ಭೂ ಮಂಡಲದ ಸಕಲ ಜೀವರಾಶಿಗಳ ಸುಖ-ಶಾಂತಿಗಾಗಿ ಶಬರಿಮಲೆ ಯಾತ್ರೆ ಮಾಡುತ್ತಿದ್ದೇನೆ. ಈ ಹಿಂದೆ ಐದು ಬಾರಿ ನಾನಾ ಪುಣ್ಯಕ್ಷೇತ್ರಗಳಿಂದ ಪಾದ ಯಾತ್ರೆ ಆರಂಭ ಮಾಡಿ ಶಬರಿಮಲೆಗೆ ತೆರಳಿದ್ದು, ಈ ಬಾರಿ ದೂರದ ಜಮ್ಮು ಕಾಶ್ಮೀರದ ವೈಷ್ಣೋದೇವಿ ಮಂದಿರದಿಂದ ಶಬರಿಮಲೆಗೆ ಪಾದಯಾತ್ರೆಯನ್ನು ಕೈಗೊಂಡಿದ್ದೇನೆ. ಮಂಗಳೂರಿನ ಶಿವಪದವು ಪಂಚಮುಖಿ ಮಹಾಗಣಪತಿ ಮತ್ತು ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಚರಣ್ ಮಹಾರಾಜರ ಮಾರ್ಗದರ್ಶನದಲ್ಲಿ ಈ ಪಾದಯಾತ್ರೆ ನಡೆಸುತ್ತಿರುವುದಾಗಿ ಹೇಳಿದರು.
ಪ್ರತಿ ನಿತ್ಯ 30 ಕಿ.ಮೀ ಯಾತ್ರೆ
ಮಂಗಳೂರು, ಕಾಸರಗೋಡು ಮಾರ್ಗವಾಗಿ ಸುಮಾರು 4000ಕಿ.ಮೀ ಗಳನ್ನು ಕ್ರಮಿಸಿ ಜ.10ರಂದು ಶಬರಿಮಲೆ ತಲುಪಿ ಮಣಿಕಂಠನ ದರ್ಶನ ಪಡೆಯುವ ಮೂಲಕ ಪಾದಯಾತ್ರೆ ಸಂಪನ್ನವಾಗಲಿದೆ ಎಂದರು. ಪ್ರತಿ ನಿತ್ಯ 25 ರಿಂದ 30 ಕಿ.ಮೀ ಸಾಗುವ ಈ ಯಾತ್ರೆ ಕಷ್ಟಕರವಾಗಿದ್ದರು, ಒಂದು ರೀತಿಯ ಮನಃಶಾಂತಿಯನ್ನು ನೀಡಿದೆ. ದಾರಿಯುದ್ದಕ್ಕೂ ಜನರ ಸಹಾಯ, ಕಾಣದ ಕೈಗಳಿಂದ ದಾನ ಪಡೆಯುತ್ತ ಸಾಗುತ್ತಿರುವ ಪಾದಯಾತ್ರೆಯನ್ನು ಜೀವನದಲ್ಲಿ ಮರೆಯಲು ಅಸಾಧ್ಯ ಎಂದು ಹೇಳಿದರು.
ಇದನ್ನೂ ಓದಿ | ಕೃಷ್ಣ ಮಠದಲ್ಲಿ ಪರ್ಯಾಯಕ್ಕೆ ಬಾಳೆ ಮುಹೂರ್ತ; ಶಿಷ್ಯನ ಜತೆಯಾಗಿ ಪರ್ಯಾಯ ಮಾಡುವೆ ಎಂದ ಪುತ್ತಿಗೆ ಶ್ರೀ