ಬೆಂಗಳೂರು: ಇಲ್ಲಿನ ಪ್ರಸಿದ್ಧ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ (Dodda ganapati temple) ಪೂಜಾ ಸಾಮಗ್ರಿ ಮಳಿಗೆಗಳ ಟೆಂಡರ್‌ಗೆ ಸಂಬಂಧಿಸಿ ಭಾರಿ ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪ್ರತಿಭಟನೆಗೆ ಇಳಿದಿದ್ದಾರೆ. ತಾವು ೧೦ ಲಕ್ಷ ರೂ.ಗೆ ಟೆಂಡರ್ ಕೂಗಿದ್ದರೂ ೮.೫ ಲಕ್ಷ ರೂ.ಗೆ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಿರುವ ಮಹಿಳೆ ೧೦ ಲಕ್ಷ ರೂ. ನಗದು ಹಣವನ್ನು ದೇವಸ್ಥಾನದ ಮುಂದಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ಲತಾ ಎಂಬ ಮಹಿಳೆ ಟೆಂಡರ್ ವಿಚಾರದಲ್ಲಿ ಮೋಸವಾಗಿದೆ, ಅಧಿಕಾರಿಗಳು ಕಳ್ಳಾಟ ನಡೆಸಿದ್ದಾರೆ ಎಂದು ಆರೋಪಿಸಿ ಮುಜರಾಯಿ ಇಲಾಖೆ ವಿರುದ್ಧ ಸಿಡಿದೆದ್ದಿದ್ದಾರೆ. ಈ ನಡುವೆ ಮುಜರಾಯಿ ಇಲಾಖೆ ಅಧಿಕಾರಿಗಳ ಕಳ್ಳಾಟವನ್ನು ಪ್ರಶ್ನಿಸಿದ ಮಹಿಳೆಯನ್ನು ಅಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಪೂಜಾ ಸಾಮಗ್ರಿಗಳ ಮಳಿಗೆಗಳ ಟೆಂಡರ್‌ನಲ್ಲಿ ಭಾಗವಹಿಸಿದ್ದ ಲತಾ ದಂಪತಿ ೧೦ ಲಕ್ಷ ರೂ.ಗೆ ಟೆಂಡರ್ ಹರಾಜು ಕೂಗಿದ್ದರು ಎನ್ನಲಾಗಿದೆ. ಆದರೆ, ಟೆಂಡರನ್ನು ಅವರಿಗೆ ಕೊಡದೆ ೮.೫ ಲಕ್ಷ ರೂ. ಕೂಗಿದವರಿಗೆ ಟೆಂಡರ್ ನೀಡಿದ್ದಾರೆ ಎನ್ನುವುದು ದಂಪತಿಗಳ ಆಕ್ರೋಶ. ೮.೫ ಲಕ್ಷ ರೂ.ಗೆ ಟೆಂಡರ್ ಪಡೆದವರು ಅಧಿಕಾರಿಗಳಿಗೆ ಲಂಚ ಕೊಟ್ಟಿದ್ದಾರೆ. ಹೀಗಾಗಿ ಇಲ್ಲಿ ಅವರ ಪರವಾಗಿ ಟೆಂಡರ್ ನೀಡಲಾಗಿದೆ ಎನ್ನುವುದು ಅವರ ನೇರ ಆರೋಪ.
ನವೆಂಬರ್ ೨೧ ರಿಂದ ಒಂದು ವರ್ಷ ತನಕ ಈ ಟೆಂಡರ್ ಅವಧಿ ಇರಲಿದೆ. ಇದೇ ತಿಂಗಳು ೨೧ ರಿಂದ ಮೂರು ದಿನಗಳ ಕಾಲ ಬಸವನಗುಡಿ ಕಡ್ಲೆ ಪರಿಷೆ ಜಾತ್ರೆ ಶುರುವಾಗಲಿದೆ. ಹೀಗಾಗಿ ಪೂಜಾ ಸಾಮಗ್ರಿ ಮಳಿಗೆಗೆ ಭಾರಿ ಬೇಡಿಕೆ ಇದೆ.
ಇದನ್ನೂ ಓದಿ | ಬೆಂಗಳೂರು | ದೊಡ್ಡ ಗಣಪತಿ ದೇವಸ್ಥಾನದ ವಿವಾದಾತ್ಮಕ ಟೆಂಡರ್ ರದ್ದು