Site icon Vistara News

Yoga Day 2023 : ವಚನಾನಂದ ಶ್ರೀ ಸೇರಿದಂತೆ ಯೋಗ ಸಾಧಕರಿಗೆ ರಾಜ್ಯಪಾಲರ ಆತಿಥ್ಯ

vachanananda swamiji raj bhavan karnataka

#image_title

ಬೆಂಗಳೂರು: ಯೋಗದ ಬಗ್ಗೆ ಬಹಳ ಆಸಕ್ತಿ ಹೊಂದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶ್ವಾಸಗುರು ಖ್ಯಾತಿಯ, ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹಾಗೂ ಇತರ ಯೋಗ ಪಟುಗಳನ್ನು (Yoga Day 2023) ಗುರುವಾರ ರಾಜಭವನಕ್ಕೆ ಆಹ್ವಾನಿಸಿ ಆತಿಥ್ಯ ನೀಡಿದ್ದಾರೆ.

ಯೋಗ ದಿನಾಚರಣೆಯಂದು ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಪಾಲರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀಗಳಿಗೆ ಆಹ್ವಾನ ನೀಡಿದ್ದು, 2023ನೇ ಸಾಲಿನ ʻಯೋಗರತ್ನʼ ಪ್ರಶಸ್ತಿ ಪುರಸ್ಕೃತರೊಂದಿಗೆ ಶ್ರೀಗಳು ರಾಜಭವನಕ್ಕೆ ಭೇಟಿ ನೀಡಿದ್ದರು.

ಯೋಗ ಸಾಧಕರನ್ನು ಆತ್ಮೀಯವಾಗಿ ಬರಮಾಡಿಕೊಂಡ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಯೋಗದ ಕುರಿತು ಹಲವು ಸಂಗತಿಗಳ ಬಗ್ಗೆ ಈ ಸಾಧಕರೊಂದಿಗೆ ಚರ್ಚಸಿದಿದ್ದಾರೆ. ಈ ಸಂದರ್ಭದಲ್ಲಿ ಶ್ವಾಸಗುರುಗಳು ಯೋಗದ ಪ್ರಚಾರಕ್ಕಾಗಿ ಕೈಗೊಂಡಿರುವ ಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ʻʻಕಳೆದ ವರ್ಷ ತಾವು ಯೋಗರತ್ನ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದನ್ನು ನೆನಪಿಸಿಕೊಂಡ ರಾಜ್ಯಪಾಲರು ಪ್ರತಿ ವರ್ಷ ಅಪರೂಪದ ಯೋಗಿಗಳನ್ನು ಹೇಗೆ ಗುರುತಿಸುತ್ತೀರಿ ಎಂಬುದರ ಕುರಿತು ಅಚ್ಚರಿ ವ್ಯಕ್ತಪಡಿಸಿದಾರೆʼʼ ಎಂದು ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಇಂದಿನ ಆಧುನಿಕ ಯುಗದಲ್ಲಿ ಯೋಗವನ್ನು ಸರಿಯಾಗಿ ಅನುಸರಿಸುತ್ತಿಲ್ಲ. ಇದಕ್ಕೆ ಒಂದು ರೀತಿಯ ನಿರ್ಲಕ್ಷ್ಯ ಅಥವಾ ಉದಾಸೀನ ಕಾರಣವಾಗಿದೆ. ಯೋಗದ ಬಗೆಗಿನ ಈ ಉದಾಸೀನತೆಯನ್ನು ನಿವಾರಿಸಲೆಂದೇಶ್ರೀ ವಚನಾನಂದ ಸ್ವಾಮೀಜಿ ಬೆಂಗಳೂರಿನಲ್ಲಿ ಶ್ವಾಸಯೋಗ ಕೇಂದ್ರವನ್ನು ಸ್ಥಾಪಿಸಿ ಯೋಗವನ್ನು ಜನಪ್ರಿಯಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಯೋಗ ಕೇಂದ್ರದ ನೇತೃತ್ವದಲ್ಲಿ ನಡೆದ ಯೋಗಥಾನ್‌ಗಳು, ಯೋಗ ಶಿಬಿರಗಳು, ಯೋಗ ರಥಯಾತ್ರೆಗಳು ಸಾವಿರಾರು, ಲಕ್ಷಾಂತರ ಜನರು ಯೋಗಕ್ಕೆ ಆಕರ್ಷಿಸಿದೆ. ಯುವಜನತೆ  ಯೋಗದತ್ತ ಮುಖ ಮಾಡುವಂತಾಗಿದೆ. ಸಂಸ್ಥೆಯು ಪ್ರತಿ ವರ್ಷ ಯೋಗ ಸಾಧಕರನ್ನು ಮತ್ತು ಯೋಗಕ್ಕೆ ಅಪೂರ್ವ ಕೊಡುಗೆ ನೀಡಿದವರನ್ನು ಗುರುತಿಸಿ ʻಯೋಗರತ್ನʼ ಪ್ರಶಸ್ತಿ ನೀಡುತ್ತಾ ಬಂದಿದೆ.

ಅಗಸ್ ಇಂದ್ರ ಉದಯನ್‌ಗೆ ಪ್ರಶಸ್ತಿ

ಈ ಬಾರಿಯ ಯೋಗರತ್ನ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬುಧವಾರ ಸಂಜೆ ಇಂಡೋನೇಷ್ಯಾದ ಗಾಂಧಿವಾದಿ, ಯೋಗ ಸಾಧಕ ಅಗಸ್ ಇಂದ್ರ ಉದಯನ್ ಅವರಿಗೆ ನೀಡಿ ಗೌರವಿಸಲಾಗಿದೆ.

1976ರಲ್ಲಿಯೇ ಇಂಡೋನೇಷ್ಯಾದ ಬಾಲಿಯಲ್ಲಿ ಗಾಂಧಿ ಆಶ್ರಮ ಸ್ಥಾಪಿಸಿ, ಗಾಂಧಿ ತತ್ವದ ಆಧಾರದ ಮೇಲೆ ನಡೆಸಿಕೊಂಡು ಬರುತ್ತಿರುವವರು ಅಗಸ್ ಇಂದ್ರ ಉದಯನ್ ಯೋಗವನ್ನೂ ಪ್ರಚಾರ ಮಾಡುತ್ತಿದ್ದಾರೆ. ಮಹಾತ್ಮ ಗಾಂಧೀಜಿಯವರ ಅಹಿಂಸಾ, ಸತ್ಯ ಮತ್ತು ಕರುಣಾ ತತ್ವಾದರ್ಶಗಳಿಂದ ಪ್ರಭಾವಿತರಾಗಿರುವ ಇವರು ತಮ್ಮ ಆಶ್ರಮದಲ್ಲಿ ಹಠಯೋಗ, ವಿನ್ಯಾಸಯೋಗ, ಅಷ್ಟಾಂಗ ಯೋಗ ವಿದ್ಯೆಯನ್ನ ಸಾವಿರಾರು ಜನರಿಗೆ ಧಾರೆ ಎರೆಯುತ್ತಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್ ಗುರೂಜಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ ಕೆ ಗೋವಿಂದರಾಜ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಲಿಂಗೈಕ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಸ್ಮರಣೆಗೆ ಅರ್ಪಿಸಲಾಗಿತ್ತು. ಕರ್ನಾಟಕದ ಮೂಲೆಮೂಲೆಗಳಿಂದ ಆಗಮಿಸಿದ್ದ ಐವತ್ತಕ್ಕೂ ಮಠಪೀಠಗಳ ಸ್ವಾಮೀಜಿಗಳ ಸಾನಿದ್ಯದಲ್ಲಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರಿಗೆ ಸಮರ್ಪಿಸಿದ ಗುರುಕಾಣಿಕೆಯನ್ನು ಶ್ರೀ ಹರ್ಷಾನಂದ ಸ್ವಾಮೀಜಿಯವರು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ʻʻಶ್ವಾಸಗುರು ಹಿಮಾಲಯದ ಯೋಗಿಗಳ ಸನ್ನಿಧಿಯಲ್ಲಿ” ಮತ್ತು ʻʻಶ್ವಾಸಗುರು – ದ ಮೇಕಿಂಗ್ ಆಫ್ ದ ಹಿಮಾಲಯನ್ ಮಾಸ್ಟರ್ʼʼ ಎಂಬ ಕಾಫಿಟೇಬಲ್‌ ಪುಸ್ತಕವನ್ನು ಶ್ರೀ ಶ್ರೀ ರವಿಶಂಕರ್‌ ಗುರೂಜಿ ಬಿಡುಗಡೆ ಮಾಡಿದರು.

ಇದನ್ನೂ ಓದಿ : Yoga Day 2023 : ಸಮತೆ- ಮಾನವೀಯತೆ ಕಲಿಸುವ ಯೋಗಾಯೋಗ

Exit mobile version