ಟೋಕಿಯೋ: ಜಪಾನ್ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ನಿಧನ ಇಡೀ ಜಗತ್ತಿನ ಪಾಲಿಗೆ ಆಘಾತಕಾರಿ. ಜಪಾನ್ ಪ್ರಧಾನಿಯಾಗಿ ಸುದೀರ್ಘ ಅವಧಿ ಆಡಳಿತ ನಡೆಸಿದವರೊಬ್ಬರು ಹೀಗೆ ರಸ್ತೆಯಲ್ಲಿ, ಬಿಗಿ ಭದ್ರತೆ ಇದ್ದಾಗ್ಯೂ ಗುಂಡೇಟು ತಿಂದು ಸಾಯುತ್ತಾರೆ ಎಂದರೆ ಅದು ಗಂಭೀರ ವಿಷಯವೇ ಹೌದು. ವಿವಿಧ ದೇಶಗಳ ನಾಯಕರೆಲ್ಲ ಅಬೆ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಆದರೆ ಚೀನಾ ದೇಶದ ಹಲವು ನಾಗರಿಕರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಅಬೆಯನ್ನು ಕೊಂದವನನ್ನು ಹೀರೋ ಎಂದು ಹೊಗಳಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.
ವೈಬೋ ಎನ್ನುವ, ಚೀನಾ ಮೂಲದ ಸಾಮಾಜಿಕ ಜಾಲತಾಣವೊಂದು ಇದೆ. ಟ್ವಿಟರ್ ಮಾದರಿಯಲ್ಲೇ ಇದು ಕಾರ್ಯನಿರ್ವಹಿಸುತ್ತದೆ. ಅದರಲ್ಲೀಗ ಚೀನಾದ ಪ್ರಜೆಗಳು ಅಬೆ ಸಾವನ್ನು ಸಂಭ್ರಮಿಸುತ್ತಿದ್ದಾರೆ. ಬೆಳಗ್ಗೆ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದಂತೆ, ವೈಬೋದಲ್ಲಿ ಚೀನಾ ದೇಶದ ಹಲವರು ಅಬೆ ಸಾಯಲಿ ಎಂದೇ ಪೋಸ್ಟ್ ಹಾಕಿದ್ದರು. ಹಾಗೇ, ಚಿಕಿತ್ಸೆ ಫಲಿಸದೆ ಅವರು ಮೃತಪಡುತ್ತಿದ್ದಂತೆ ಅದನ್ನೂ ಸಂಭ್ರಮಿಸಿದ್ದಾರೆ.
ಅಬೆ ಸಾವನ್ನು ಚೀನಾ ನಾಗರಿಕರು ಹೇಗೆಲ್ಲ ಸಂಭ್ರಮಿಸುತ್ತಿದ್ದಾರೆ. ಅವರ ಸಾವನ್ನು ಬಯಸಿ ಏನೆಲ್ಲ ಕಮೆಂಟ್ ಮಾಡಿದ್ದರು ಎಂಬುದರ ಸ್ಕ್ರೀನ್ ಶಾಟ್ಗಳನ್ನು ಆಸ್ಟ್ರೇಲಿಯಾ ಮೂಲದ ಚೀನಾದ ರಾಜಕೀಯ ವ್ಯಂಗ್ಯಚಿತ್ರಕಾರ, ಕಲಾವಿದ, ಹಕ್ಕುಗಳ ರಕ್ಷಣಾ ಹೋರಾಟಗಾರ ಬಾಡಿಯುಸಾ (Badiucao) ಎಂಬುವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಆ ಸ್ಕ್ರೀನ್ ಶಾಟ್ನಲ್ಲಿ ಚೈನೀಸ್ ಭಾಷೆಯನ್ನು ನೀವು ನೋಡಬಹುದು. ಅನೇಕರು ಜಪಾನ್ನ ಈಗಿನ ಪ್ರಧಾನಿಯೂ ಸಾಯಬೇಕು ಎಂದು ಹೇಳಿದ್ದಾರೆ. ಉತ್ತರ ಕೊರಿಯಾ ಸರ್ವಾಧಿಕಾರಿಯೂ ಸತ್ತು ಹೋಗಲಿ ಎಂದು ಶಪಿಸಿದವರೂ ಇದ್ದಾರೆ.
ಇನ್ನು ಚೀನಾ ಸರ್ಕಾರ ಜಪಾನ್ ಮಾಜಿ ಪ್ರಧಾನಿ ಸಾವಿಗೆ ಸಂತಾಪ ಸೂಚಿಸಿದೆ. ಶಿಂಜೊ ಅಬೆ ಸಾವು ಆಘಾತ ಉಂಟು ಮಾಡಿದೆ. ಅವರ ಸಾವಿಗೆ ಸಂತಾಪ ಸೂಚಿಸುತ್ತೇವೆ. ಶಿಂಜೊ ಅಬೆ ಕುಟುಂಬಕ್ಕೆ ಈ ನೋವು ಸಹಿಸುವ ಶಕ್ತಿ ಸಿಗಲಿ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರರು ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ: ಗುಂಡೇಟಿನಿಂದ ಗಾಯಗೊಂಡಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನ; ಪಿಎಂ ಮೋದಿ ಸಂತಾಪ