Site icon Vistara News

ಇರಾಕ್​​ನಲ್ಲಿ ಉಗ್ರರೂಪ ತಾಳಿದ ಮುಕ್ತದಾ ಅಲ್​ ಸದರ್ ಬೆಂಬಲಿಗರು; 23 ಮಂದಿ ಪ್ರತಿಭಟನಾಕಾರರು ಸಾವು

Iraq

ಬಾಗ್ದಾದ್​​: ಇರಾಕ್​​ನ ಮಹಾನ್ ನಾಯಕ, ಶಿಯಾ ಸಮುದಾಯದ ಪ್ರಭಾವಿ ನಾಯಕ ಮುಕ್ತದಾ ಅಲ್​ ಸದರ್​ ಕಳೆದ ತಿಂಗಳು ಇರಾಕ್ ಅಧ್ಯಕ್ಷ ಸ್ಥಾನಕ್ಕೆ ಏರಲು ಪ್ರಯತ್ನಿಸಿ ವಿಫಲರಾಗಿದ್ದರು. ಅವರು ಬಹುಮತ ಸಾಬೀತು ಪಡಿಸಲು ಸಾಧ್ಯವಾಗಿರಲಿಲ್ಲ. ಅದಾದ ಮೇಲೆ ಅವರು ಸರ್ಕಾರ ರಚನೆ ಸಂಬಂಧ ಮಾತುಕತೆಯಿಂದ ದೂರವೇ ಉಳಿದಿದ್ದರು. ಆಗಿನಿಂದಲೂ ಅವರ ಬೆಂಬಲಿಗರು ದೊಡ್ಡ ಹೋರಾಟ ನಡೆಸುತ್ತಲೇ ಇದ್ದಾರೆ. ಜುಲೈನಲ್ಲಿ ಮುಕ್ತದಾ ಅಲ್​ ಸದರ್​ ಅಧ್ಯಕ್ಷ ಸ್ಥಾನಕ್ಕೆ ಬಹುಮತ ಸಾಬೀತಾಗದ ಬೆನ್ನಲ್ಲೇ ನೂರಾರು ಸಂಖ್ಯೆಯ ಬೆಂಬಲಿಗರು ಸಂಸತ್ತಿಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದರು. ಅಂದಿನಿಂದಲೂ ಹೋರಾಟ ನಡೆಯುತ್ತಲೇ ಬಂದು, ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ.

ಮುಕ್ತದಾ ಅಲ್​ ಸದರ್​ ಅವರು ತಾವು ರಾಜಕೀಯದಿಂದಲೇ ದೂರ ಇರುತ್ತೇನೆ. ಇನ್ನು ಇರಾಕ್​ ರಾಜಕಾರಣದಲ್ಲಿ ನಾನು ಮುಂದುವರಿಯುವುದಿಲ್ಲ ಎಂದು ಸೋಮವಾರ ಘೋಷಣೆ ಮಾಡುತ್ತಿದ್ದಂತೆ ಬೆಂಬಲಿಗರ ಪ್ರತಿಭಟನೆ ಹಿಂಸಾಚಾರ ಸ್ವರೂಪ ತಳೆದಿದೆ. ಬಾಗ್ದಾದ್​​ನಲ್ಲಿರುವ ಅಧ್ಯಕ್ಷರ ಭವನಕ್ಕೆ ನುಗ್ಗಿ, ಮನಬಂದಂತೆ ವರ್ತಿಸಿದ್ದಾರೆ. ಅವರನ್ನು ತಡೆಯಲು ಇರಾಕ್​ ಭದ್ರತಾ ಪಡೆಗಳು ಕೂಡ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಘರ್ಷದಲ್ಲಿ ಇದುವರೆಗೆ 23 ಮಂದಿ ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. ಇವರನ್ನೆಲ್ಲ ಭದ್ರತಾ ಪಡೆ ಸಿಬ್ಬಂದಿ ಗುಂಡು ಹೊಡೆದು ಕೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಗೇ, ಈ ಗಲಾಟೆಯಲ್ಲಿ 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.ಅ

ಥೇಟ್​ ಶ್ರೀಲಂಕಾದಲ್ಲಿ ಅಲ್ಲಿನ ಅಧ್ಯಕ್ಷರ ವಿರುದ್ಧ ನಡೆದ ಪ್ರತಿಭಟನೆ ಮಾದರಿಯಲ್ಲೇ ಇರಾಕ್​​ನಲ್ಲೂ ಮುಕ್ತದಾ ಅಲ್​ ಸದರ್​ ಬೆಂಬಲಿಗರು ಪ್ರತಿಭಟನೆಗೆ ಇಳಿದಿದ್ದಾರೆ. ಅಧ್ಯಕ್ಷರ ಅರಮನೆ ಭವನಕ್ಕೆ ನುಗ್ಗಿ, ಅಲ್ಲಿ ಹಾಕಿದ್ದ ಸಿಮೆಂಟ್ ಬ್ಯಾರಿಕೇಡ್​​ಗಳನ್ನು ಹಗ್ಗದಿಂದ ಎಳೆದಿದ್ದಾರೆ. ಗೇಟ್​ಗಳನ್ನು ಮುರಿದು ಹಾಕಿದ್ದಾರೆ. ಆ ಭವನದಲ್ಲಿದ್ದ ಐಷಾರಾಮಿ ಸಲೂನ್​​ಗಳಿಗೆ ನುಗ್ಗಿದ್ದಾರೆ. ಹಾಗೇ, ಅಮೃತಶಿಲೆಯ ಸಭಾಂಗಣಗಳಿಗೆ ಹೋಗಿ ಕುಳಿತಿದ್ದಾರೆ. ಒಟ್ಟಾರೆ ಎಲ್ಲ ಕಡೆದ ದಾಂಧಲೆ ಹುಟ್ಟುಹಾಕಿದ್ದಾರೆ. ಇರಾಕ್​ ಪರಿಸ್ಥಿತಿ ಬಿಗಡಾಯಿಸಿದೆ. ಪ್ರತಿಭಟನೆ ಮಾಡದಂತೆ ಮುಕ್ತದಾ ಬೆಂಬಲಿಗರಿಗೆ ಕರೆ ಕೊಟ್ಟಿದ್ದರೂ ಅವರು ಮಾತು ಕೇಳುತ್ತಿಲ್ಲ.

ಇದನ್ನೂ ಓದಿ: Al-Jawahiri Dead | ಲಾಡೆನ್‌ ಉತ್ತರಾಧಿಕಾರಿ, 9/11 ಸಂಚುಕೋರ ಜವಾಹಿರಿಯ ಆಟ ಮುಗಿಸಿದ ಅಮೆರಿಕ

Exit mobile version