Site icon Vistara News

ಪಾಕಿಸ್ತಾನ ಸೇನಾ ಹೆಲಿಕಾಪ್ಟರ್​ ಪತನ, 6 ಅಧಿಕಾರಿಗಳ ಸಾವು; ಬಲೂಚ್​ ಹೋರಾಟಗಾರರ ಮೇಲೆ ಅನುಮಾನ

Pak army commander killed

ನವ ದೆಹಲಿ: ಪಾಕಿಸ್ತಾನ ಸೇನಾ ಹೆಲಿಕಾಪ್ಟರ್​​ವೊಂದು ಬಲೂಚಿಸ್ತಾನ​​ದ ಲಾಸ್ಬೆಲಾ ಬಳಿ ಸೋಮವಾರ ರಾತ್ರಿ ಅಪಘಾತಕ್ಕೀಡಾಗಿದೆ. ಈ ಹೆಲಿಕಾಪ್ಟರ್​​ನಲ್ಲಿ ಕ್ವೆಟ್ಟಾ ಕಾರ್ಪ್ಸ್​ (XII Corp)ನ ಕಮಾಂಡರ್​ ಲೆಫ್ಟಿನೆಂಟ್​ ಸರ್ಫ್ರಾಜ್ ಅಲಿ ಸೇರಿ ಒಟ್ಟು ಆರು ಮಂದಿ ಮಿಲಿಟರಿ ಅಧಿಕಾರಿಗಳು ಇದ್ದರು. ಹೆಲಿಕಾಪ್ಟರ್ ದುರಂತದಲ್ಲಿ ಇವರೆಲ್ಲರೂ ಮೃತಪಟ್ಟಿದ್ದಾಗಿ ವರದಿಯಾಗಿದೆ. ಬಲೂಚಿಸ್ತಾನ್​ ಬಂಡುಕೋರರು ಹೆಲಿಕಾಪ್ಟರ್​ರನ್ನು ಹೊಡೆದುರುಳಿಸಿರುವ ಅನುಮಾನ ದಟ್ಟವಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

ಸರ್ಫ್ರಾಜ್ ಅಲಿ, ಬ್ರಿಗೇಡಿಯರ್​ ಅಮ್ಜದ್​ ಹನೀಫ್​ (ಕೋಸ್ಟ್​ ಗಾರ್ಡ್​ ಡಿಜಿ), ಮೇಜರ್​ ಸಯೀದ್​ (ಪೈಲಟ್​), ಮೇಜರ್​ ತಲ್ಹಾ ( ಕೋ-ಪೈಲಟ್​) ಮತ್ತು ನಾಯಕ್​ ಮುದಾಸಿರ್​ ಮೃತರಾಗಿದ್ದಾಗಿ ಪಾಕ್​ ಸೇನೆ ದೃಢಪಡಿಸಿದೆ. ಪ್ರವಾಹ ಪೀಡಿತ ಜನರಿಗೆ ನೆರವು ನೀಡುತ್ತಿದ್ದ ಈ ಹೆಲಿಕಾಪ್ಟರ್​ ಸೋಮವಾರ ರಾತ್ರಿ ವಿಂದರ್ ಮತ್ತು ಸಾಸ್ಸಿ ಪುನ್ನು ಮಧ್ಯದ ಲಾಸ್ಬೆಲಾ ಬಳಿ ಏರ್​ ಟ್ರಾಫಿಕ್​ ಸಂಪರ್ಕಕ್ಕೆ ಸಿಗದಂತಾಗಿದೆ. ಇದೊಂದು ಪರ್ವತ ಪ್ರದೇಶವಾಗಿದ್ದು, ಜನಸಂಖ್ಯೆಯೂ ತೀರ ವಿರಳ. ಅಲ್ಲೀಗ ವಿಮಾನದ ಅವಶೇಷಗಳನ್ನು ಪತ್ತೆಹಚ್ಚಿ, ಮೃತ ದೇಹಗಳನ್ನು ಹುಡುಕುವುದೂ ಸುಲಭವಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಬಲೂಚಿಸ್ತಾನ್​ ಲಿಬರೇಶನ್​ ಆರ್ಮಿಯೇ ಈ ಹೆಲಿಕಾಪ್ಟರ್​ ಟಾರ್ಗೆಟ್​ ಮಾಡಿರುವ ಶಂಕೆ ವ್ಯಕ್ತವಾಗಿದ್ದರೂ ಬಂಡುಕೋರರು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಕ್ವೆಟ್ಟಾ ಕಾರ್ಪ್ಸ್​ ಕಮಾಂಡರ್​ ಸರ್ಫ್ರಾಜ್ ಅಲಿ ಈ ಲಿಬರೇಶನ್​ ಆರ್ಮಿ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಇವರ ಕಾರ್ಯಾಚರಣೆಗೆ ಸದಾ ಅಡ್ಡಿಯಾಗುತ್ತಿದ್ದರು. ಪಾಕಿಸ್ತಾನದ ಅತ್ಯಂತ ದೊಡ್ಡ ಪ್ರಾಂತ್ಯವಾಗಿರುವ ಬಲೂಚಿಸ್ತಾನ ಪ್ರತ್ಯೇಕತೆಗಾಗಿ ಲಿಬರೇಶನ್​ ಆರ್ಮಿ ಸದಾ ಹೋರಾಟ ನಡೆಸುತ್ತಿದೆ. ಹಿಂಸಾತ್ಮಕ ಮಾರ್ಗಗಳನ್ನೂ ಅನುಸರಿಸುತ್ತಿದೆ. ಬಲೂಚಿಸ್ತಾನ್​ದ ರಾಜಧಾರಿ ಕ್ವೆಟ್ಟಾಕ್ಕೆ ಕಮಾಂಡರ್​ ಆಗಿರುವ ಸರ್ಫ್ರಾಜ್ ಅಲಿ ಇವರ ಪ್ರತ್ಯೇಕತೆ ಹೋರಾಟಕ್ಕೆ ಅಡ್ಡಿಯಾಗಿದ್ದ ಕಾರಣ, ಅವರಿರುವ ಹೆಲಿಕಾಪ್ಟರ್​ ಗುರಿಯಾಗಿಸಿ ದಾಳಿ ನಡೆಸಿರಬಹುದು ಎನ್ನಲಾಗಿದೆ. ಸೇನಾ ಅಧಿಕಾರಿಗಳ ಸಾವಿಗೆ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್​ ಅಲಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Al-Jawahiri Dead | ಲಾಡೆನ್‌ ಉತ್ತರಾಧಿಕಾರಿ, 9/11 ಸಂಚುಕೋರ ಜವಾಹಿರಿಯ ಆಟ ಮುಗಿಸಿದ ಅಮೆರಿಕ

Exit mobile version