ಅಫ್ಘಾನಿಸ್ತಾನದ ಕಾಬೂಲ್ನಲ್ಲಿರುವ ಶಿಕ್ಷಣ ಕೇಂದ್ರವೊಂದರ ಮೇಲೆ ಆತ್ಮಾಹುತಿ ದಾಳಿಯಾಗಿದ್ದು, ಇದರಲ್ಲಿ 100ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾಗಿ ವರದಿಯಾಗಿದೆ. ವಿದ್ಯಾರ್ಥಿಗಳ ಶವಗಳನ್ನೆಲ್ಲ ಅಲ್ಲಿಯೇ ಇಡಲಾಗಿದ್ದು, ಪಾಲಕರ ಗೋಳಾಟ, ಆಕ್ರಂದನ ಮುಗಿಲುಮುಟ್ಟಿದೆ. ಅಫ್ಘಾನ್ ಪತ್ರಕರ್ತರೊಬ್ಬರು ತಮ್ಮ ಟ್ವಿಟರ್ನಲ್ಲಿ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಅಂದಹಾಗೇ, ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಶಿಯಾ ಮತ್ತು ಹಜಾರಾ ಸಮುದಾಯದವರೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿರುವ ಕಾಜ್ ಎಂಬ ಶಿಕ್ಷಣ ಕೇಂದ್ರದಲ್ಲಿ. ಇದು ಕಾಬೂಲ್‌ನ ಪಶ್ಚಿಮ ಭಾಗದಲ್ಲಿರುವ ದಷ್ಟ್-ಇ-ಬರ್ಚಿ ಎಂಬ ಪ್ರದೇಶದಲ್ಲಿದೆ. ಕಾಜ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 19 ಮಂದಿ ಮೃತಪಟ್ಟು, ಸುಮಾರು 27 ಜನರು ಗಂಭೀರವಾಗಿ ಗಾಯಗೊಂಡಿದ್ದಾಗಿ ವರದಿಯಾಗಿತ್ತು. ಆದರೆ ಸ್ಥಳೀಯ ಪತ್ರಕರ್ತ ಬಿಲಾಲ್ ಸರ್ವರಿ ಎಂಬುವರು ಟ್ವೀಟ್ ಮಾಡಿ ‘ನಾವು ಬೆಳಗ್ಗೆಯಿಂದ ಇಲ್ಲಿಯವರೆಗೆ ಸುಮಾರು 100 ಮಕ್ಕಳ ಮೃತದೇಹಗಳನ್ನು ಎಣಿಸಿದ್ದೇವೆ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ‘ಮಕ್ಕಳಿಗೆ ಅಣುಕು ಪರೀಕ್ಷೆ ನಡೆಯುತ್ತಿತ್ತು. ಹಾಗಾಗಿ ಕ್ಲಾಸ್ ರೂಮುಗಳೆಲ್ಲ ತುಂಬಿದ್ದವು. ಇದೇ ವೇಳೆಯಲ್ಲಿಯೇ ಬಾಂಬ್ ದಾಳಿಯಾಗಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಬಾಂಬ್ ದಾಳಿ ಆಗುವುದಕ್ಕೂ ಮುನ್ನ ವಿದ್ಯಾರ್ಥಿಗಳು (ಹೆಣ್ಣುಮಕ್ಕಳೇ ಹೆಚ್ಚಾಗಿದ್ದಾರೆ) ಕ್ಲಾಸ್ ರೂಮಿನಲ್ಲಿ ತುಂಬಿ, ಎಲ್ಲರೂ ಒಟ್ಟಾಗಿ ಏನನ್ನೋ ಹೇಳುತ್ತ, ನಗುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಬಾಂಬ್ ಸ್ಫೋಟದ ಬಳಿಕ ಪಾಲಕರು ದೊಡ್ಡದಾಗಿ ಅಳುತ್ತ ಸಂಕಟಪಡುವ ದೃಶ್ಯ, ತರಗತಿ ಕೋಣೆಯೆಲ್ಲ ರಕ್ತಮಯವಾಗಿರುವ ವಿಡಿಯೋ ನೋಡಿದರೆ ಕರುಳು ಕಿತ್ತುಬರುವಂತಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದಾಗಿನಿಂದಲೂ ಪದೇಪದೆ ದಾಳಿ ನಡೆಯುತ್ತಲೇ ಇದೆ. ಅದರಲ್ಲೂ ಶಿಯಾ ಮತ್ತು ಹಜಾರಾ ಸಮುದಾಯದವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಹಲವು ಬಾರಿ ಮಸೀದಿ, ಮದರಸಾಗಳ ಮೇಲೆ ಬಾಂಬ್ ದಾಳಿ ನಡೆದು, ಅನೇಕರು ಪ್ರಾಣ ತೆತ್ತಿದ್ದಾರೆ. ಆದರೆ ಈಗ ಮಕ್ಕಳನ್ನು ಗುರಿಯಾಗಿಸಿ ಮಾಡಲಾದ ಆತ್ಮಾಹುತಿ ಬಾಂಬ್ ದಾಳಿ ತುಂಬ ಭೀಕರ ಎನ್ನಿಸಿದೆ.
ಇದನ್ನೂ ಓದಿ: ಕಾಬೂಲ್‌ನ ಮದ್ರಸಾದಲ್ಲಿ ಸ್ಫೋಟ, 20 ಮಂದಿ ಸಾವು