Site icon Vistara News

ಎರಡು ಚೂರಾಗಿ ಒಡೆದು, ಮುಳುಗಿದ ಬೋಟ್​​; ಮದುವೆಯಿಂದ ಬರುತ್ತಿದ್ದ 103 ಜನರ ದುರ್ಮರಣ

boat capsizes in Nigeria

#image_title

ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು, ಖುಷಿಯಿಂದ ವಾಪಸ್​ ಬರುತ್ತಿದ್ದವರನ್ನು ಹೊತ್ತು ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಳುಗಿ (Boat Capsizes) 103 ಜನ ಮೃತಪಟ್ಟಿದ್ದಾರೆ. ಆ ಬೋಟ್​​ನಲ್ಲಿ ಮಹಿಳೆಯರು, ಮಕ್ಕಳೂ ಇದ್ದರು. ಒಂದು ಅದ್ಧೂರಿ ಮದುವೆ ಮುಗಿಸಿ ವಾಪಸ್​ ತಮ್ಮ ಊರುಗಳಿಗೆ ತೆರಳಲು, ಬೋಟ್​​ನಲ್ಲಿ ಹೊರಟಿದ್ದರು. ಆದರೆ ವಿಧಿ ಆಟವಾಡಿದೆ. ಅಂದಹಾಗೇ, ಈ ಘಟನೆ ನಡೆದಿದ್ದು ಆಫ್ರಿಕನ್​ ದೇಶ ನೈಜೀರಿಯಾದಲ್ಲಿ. ಅಲ್ಲಿನ ಕ್ವಾರಾ ಎಂಬ ರಾಜ್ಯದ ಪಟೇಗಿ ಜಿಲ್ಲೆಯಲ್ಲಿ. ಇಲ್ಲಿ ಹರಿಯುವ ನೈಜರ್ ನದಿ ಈಗ 103 ಜನರನ್ನು ತನ್ನೊಡಲಿಗೆ ಸೆಳೆದುಕೊಂಡಿದೆ. ಇನ್ನೂ 100 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಕಣ್ಮರೆಯಾಗಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಸ್ಥಳೀಯ ಮುಖಂಡ ಅಬ್ದುಲ್ ಗಣ ಲಕ್ಪಾದಾ, ‘ಮೃತಪಟ್ಟವರೆಲ್ಲ ಇಲ್ಲೇ ಸುತ್ತಲಿನ ಹಳ್ಳಿಯವರೇ. ಪರಸ್ಪರ ಸಂಬಂಧಿಕರು, ಕುಟುಂಬದವರು ಇದ್ದಾರೆ. ಒಂದು ಮದುವೆಗೆ ಹೋಗಿ, ತಡರಾತ್ರಿವರೆಗೆ ಪಾರ್ಟಿ ಮಾಡಿದ್ದಾರೆ. ಬಳಿಕ ದೋಣಿ ಹತ್ತಿದ್ದಾರೆ. ಈ ದೋಣಿಯಲ್ಲಿ ಸುಮಾರು 300 ಜನರನ್ನು ತುಂಬಲಾಗಿತ್ತು. ಬೋಟ್​​ನ ಸಾಮರ್ಥ್ಯಕ್ಕೂ ಮೀರಿ ಜನ ಹತ್ತಿದ್ದರಿಂದಲೇ ದೋಣಿ ಸಮತೋಲನ ಕಳೆದುಕೊಂಡಿತು. ನೀರಿನಲ್ಲಿದ್ದ ಮರದ ದಿಮ್ಮಿಗೆ ಬಡಿದು, ಎರಡು ಚೂರಾಗಿ ನೀರಿನಲ್ಲಿ ಮುಳುಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಇವರೆಲ್ಲ ಮದುವೆಗೆ ಬರುವಾಗ ಮೋಟರ್​ಸೈಕಲ್​ನಲ್ಲಿ, ಬೇರೆ ಕೆಲವು ವಾಹನಗಳ ಮೂಲಕ ಮತ್ತೊಂದು ರಸ್ತೆ ಮಾರ್ಗದಲ್ಲಿ ಬಂದಿದ್ದರು. ಆದರೆ ಜೋರಾಗಿ ಮಳೆ ಬಂದ ಕಾರಣ ರಸ್ತೆಗಳೆಲ್ಲ ಜಲಾವೃತವಾಗಿವೆ. ಹೀಗಾಗಿ ದೋಣಿಯನ್ನು ಹತ್ತಿ, ಮತ್ತೊಂದು ದಡಕ್ಕೆ ಹೊರಟಿದ್ದರು ಎಂದೂ ಅಬ್ದುಲ್​ ಗಣ ತಿಳಿಸಿದ್ದಾರೆ.

ಇದನ್ನೂ ಓದಿ: Kerala Boat Tragedy : ಕೇರಳದಲ್ಲಿ ಪ್ರವಾಸಿ ದೋಣಿ ಮುಳುಗಿ 18 ಮಂದಿ ಸಾವು, ಮುಂದುವರಿದ ಶೋಧ

ಎಗ್ಬೋಟಿ ಎಂಬ ಹಳ್ಳಿಯಲ್ಲಿ ಸೋಮವಾರ ಮದುವೆ ಇತ್ತು. ಈ ಮದುವೆ ಮರುದಿನ ಅಂದರೆ ಮಂಗಳವಾರ ಮುಂಜಾನೆ 3ಗಂಟೆ ಹೊತ್ತಿಗೆ ದೋಣಿ ಮುಳುಗಿದೆ. ಹೀಗಾಗಿ ಅವಘಡದ ಬಗ್ಗೆ ತಕ್ಷಣವೇ ಗೊತ್ತಾಗಲೇ ಇಲ್ಲ. ಹಾಗಿದ್ದಾಗ್ಯೂ ನದಿತೀರದಲ್ಲಿ ವಾಸವಾಗಿದ್ದ ಜನರು ಕೂಡಲೇ ಹೋಗಿ ಸುಮಾರು 50 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಅಷ್ಟರಲ್ಲಿ ಅಗ್ನಿಶಾಮಕದಳದವರು, ಪೊಲೀಸರು ಮತ್ತು ಇತರ ರಕ್ಷಣಾ ಸಿಬ್ಬಂದಿ ಅಲ್ಲಿಗೆ ಆಗಮಿಸಿದ್ದರು. ಇತ್ತೀಚಿನ ದಿನಗಳಲ್ಲೇ ಅತ್ಯಂತ ಭಯಾನಕವಾದ ದೋಣಿ ದುರಂತ ಇದಾಗಿದೆ. ನಾಪತ್ತೆಯಾದವರ ಹುಡುಕುವ ಕಾರ್ಯಾಚರಣೆ ನಡೆಯುತ್ತಿದೆ.

Exit mobile version