ಕಾಬೂಲ್ : ಅಫ್ಘಾನಿಸ್ತಾನದ ಖೋಸ್ಟ್ ಮತ್ತು ಪಕ್ಟಿಕಾ ಪ್ರಾಂತ್ಯಗಳಲ್ಲಿ ಇಂದು ಭೀಕರ ಭೂಕಂಪನ ಉಂಟಾಗಿದ್ದು ಸುಮಾರು 920 ಮಂದಿ ಮೃತಪಟ್ಟಿದ್ದಾರೆ. 600ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಎರಡು ಪ್ರಾಂತ್ಯಗಳು ಗುಡ್ಡಗಾಡು ಪ್ರದೇಶಗಳಾಗಿದ್ದು, ಭೂಕಂಪ ತೀವ್ರತೆಗೆ ಮನೆಗಳೆಲ್ಲ ಕುಸಿದು ಬಿದ್ದಿವೆ. ಗುಡ್ಡಗಳು ಕುಸಿದಿವೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗಬಹುದು ಎಂದು ಹೇಳಲಾಗಿದೆ. ಅಫ್ಘಾನಿಸ್ತಾನದ ತಾಲಿಬಾನ್ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದರೂ, ಅಂತಾರಾಷ್ಟ್ರೀಯ ಮಟ್ಟದ ಕೆಲವು ಏಜೆನ್ಸಿಗಳು ಅಲ್ಲಿಗೆ ಧಾವಿಸುತ್ತಿವೆ. ಯುಎಸ್‌ನ ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರದ (USGS) ಪ್ರಕಾರ, ಅಫ್ಘಾನಿಸ್ತಾನದ ಆಗ್ನೇಯ ನಗರ ಖೋಸ್ಟ್‌ನಿಂದ ಸುಮಾರು 44ಕಿಮೀ ದೂರದಲ್ಲಿ, ಭೂಮೇಲ್ಮೈನಿಂದ 51ಕಿಮೀ ಆಳದಲ್ಲಿ ಭೂಮಿ ನಡುಗಿದೆ. ರಿಕ್ಟರ್ ಮಾಪಕದಲ್ಲಿ 6.1 ರಷ್ಟು ತೀವ್ರತೆ ದಾಖಲಾಗಿದೆ.
ಭೂಕಂಪಕ್ಕೆ ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ನಲುಗಿದೆ. ಇಲ್ಲಿ ಅತಿಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಮೊಹಮ್ಮದ್ ನಾಸಿಮ್ ಹಕ್ಕಾನಿ ತಿಳಿಸಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ. ಇದು ಬಿಟ್ಟರೆ, ಅಫ್ಘಾನಿಸ್ತಾನದ ಇನ್ನೆರಡು ಪೂರ್ವ ಪ್ರಾಂತ್ಯಗಳಾದ ನಂಗರ್‌ಹಾರ್ ಮತ್ತು ಖೋಸ್ಟ್‌ಗಳಲ್ಲೂ ಅಪಾರ ಸಾವು-ನೋವು ಉಂಟಾಗಿದೆ. ಖೋಸ್ಟ್‌ನಲ್ಲಿ ಸುಮಾರು ೨೫ ಜನರು ಸಾವನ್ನಪ್ಪಿದ್ದಾರೆ. ಮನೆಗಳ ಗೋಡೆಗಳು, ಮೇಲ್ಛಾವಣಿಯೆಲ್ಲ ಕುಸಿದು ಅಪಾರ ಹಾನಿಯಾಗಿದೆ. ಗಾಯಗೊಂಡ ವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ.
ಅಫ್ಘಾನಿಸ್ತಾನದಲ್ಲಿ ಭೂಕಂಪ ಉಂಟಾದ ಪ್ರದೇಶದಲ್ಲಿ ಸಿಲುಕಿರುವ ಜನರನ್ನು, ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್ ಮಾಡುತ್ತಿರುವ ವಿಡಿಯೋಗಳು ಕೂಡ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇನ್ನು ಕೆಲವರಿಗೆ ಸ್ಥಳದಲ್ಲೇ ಚಿಕಿತ್ಸೆಯನ್ನೂ ಕೊಡಲಾಗುತ್ತಿದೆ. ಘಟನಾ ಸ್ಥಳದ ದೃಶ್ಯಗಳು ಮನಕಲಕುವಂತೆ ಇವೆ. ಈ ಪ್ರಾಂತ್ಯಗಳು ಪಾಕಿಸ್ತಾನದ ಗಡಿಯಲ್ಲಿದ್ದು, ಭೂಕಂಪದ ತೀವ್ರತೆ ಅಲ್ಲಿಗೂ ಪಸರಿಸಿದೆ. ಆದರೆ ಪಾಕಿಸ್ತಾನದಲ್ಲಿ ಯಾವುದೇ ಸಾವು-ನೋವು, ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಮತ್ತೆ ಹೆಣ್ಣುಮಕ್ಕಳ ಭೂಗತ ಶಾಲೆಗಳು ಚಾಲೂ: ಹೇಗೆ ನಡೀತಿದೆ?