Site icon Vistara News

ಉತ್ತರ ಕೊರಿಯಾದ ಇಬ್ಬರು ಹೈಸ್ಕೂಲ್​ ಹುಡುಗರು ನೇಣಿಗೆ; ನೆರೆರಾಷ್ಟ್ರದ ನಾಟಕ ವೀಕ್ಷಿಸಿದ್ದಕ್ಕೆ ಮರಣದಂಡನೆ

2 minors executed in North Korea

ದಕ್ಷಿಣ ಕೊರಿಯಾದ ಕೆ-ಡ್ರಾಮಾ, ಕೆ-ಪಾಪ್​ ಸಂಗೀತಗಳೆಲ್ಲ ಉತ್ತರ ಕೊರಿಯಾದಲ್ಲಿ ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿವೆ. ದಕ್ಷಿಣ ಕೊರಿಯಾದ ಸಂಸ್ಕೃತಿ, ಅಲ್ಲಿನ ಸ್ವಾತಂತ್ರ್ಯವನ್ನು ಬಿಂಬಿಸುವ ನಾಟಕಗಳು-ಪಾಪ್​ ಸಂಗೀತಗಳು ಉತ್ತರ ಕೊರಿಯಾ ಪಾಲಿಗೆ ಒಂದು ವಿಷಕಾರಿ ಕ್ಯಾನ್ಸರ್​ ಎಂದು ಹೇಳಿರುವ ಇಲ್ಲಿನ ಸರ್ವಾಧಿಕಾರಿ, ಅಧ್ಯಕ್ಷ ಕಿಮ್ ಜಾಂಗ್​ ಉನ್​, 2021ರಲ್ಲಿಯೇ ಅವುಗಳನ್ನು ನಿಷೇಧಿಸಿದ್ದಾರೆ. ಆದೇಶಕ್ಕೂ ಮೀರಿ ಉತ್ತರ ಕೊರಿಯಾದಲ್ಲಿ ಯಾರಾದರೂ ನೆಟ್​ಫ್ಲಿಕ್ಸ್​ ಅಥವಾ ಇನ್ಯಾವುದೇ ರೂಪದಲ್ಲಿ ಕೆ ಪಾಪ್​-ಕೆ ಡ್ರಾಮಾಗಳನ್ನು ವೀಕ್ಷಿಸಿದರೆ ಅವರಿಗೆ ಜೈಲು ಶಿಕ್ಷೆ, ಗಲ್ಲಿಗೇರಿಸುವ ಶಿಕ್ಷೆಯನ್ನೂ ವಿಧಿಸಲಾಗುತ್ತಿದೆ.

ಇದೀಗ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಆದೇಶವಿದ್ದರೂ ಕದ್ದುಮುಚ್ಚಿ ದಕ್ಷಿಣ ಕೊರಿಯಾದ ನಾಟಕ ನೋಡಿದ ಇಬ್ಬರು ಅಪ್ರಾಪ್ತ ವಯಸ್ಸಿನ ಹುಡುಗರನ್ನು ಗಲ್ಲಿಗೇರಿಸಲಾಗಿದೆ. ಹುಡುಗರಿಬ್ಬರೂ ಹೈಸ್ಕೂಲ್​ ವಿದ್ಯಾರ್ಥಿಗಳು. ಇವರ ಶಾಲೆ ಬೇರೆಬೇರೆಯಾದರೂ, ಉತ್ತರ ಕೊರಿಯಾದ, ಚೀನಾದ ಗಡಿ ಭಾಗದಲ್ಲಿರುವ ಒಂದು ಹೈಸ್ಕೂಲ್​​ನಲ್ಲಿ ಭೇಟಿಯಾಗಿದ್ದರು. ಆಗಿನಿಂದಲೂ ಅವರು ಕೆ ಡ್ರಾಮಾ, ಕೆ ಪಾಪ್​ಗಳನ್ನು ಅವರು ಪರಸ್ಪರ ಹಂಚಿಕೊಂಡು ವೀಕ್ಷಿಸುತ್ತಿದ್ದರು. ಹಾಗೇ, ಬೇರೆ ಕೆಲವು ಹುಡುಗರಿಗೂ ಅವರು ಶೋಗಳನ್ನು ಕಳಿಸಿದ್ದರು. ಉತ್ತರ ಕೊರಿಯಾ ನಿಯಮಕ್ಕೆ ವಿರುದ್ಧವಾಗಿ ಅವರು ದಕ್ಷಿಣ ಕೊರಿಯಾದ ಡ್ರಾಮಾಗಳನ್ನು ವೀಕ್ಷಿಸಿದ್ದಕ್ಕೆ ಪ್ರತಿಯಾಗಿ ಮರಣದಂಡನೆ ವಿಧಿಸಲಾಗಿದೆ.

ದಕ್ಷಿಣ ಕೊರಿಯಾದ ಈ ನಾಟಕಗಳು, ಸಂಗೀತಗಳ ಬಗ್ಗೆಯೆಲ್ಲ ಮೊದಲು ಕಿಮ್​​ಗೆ ಯಾವುದೇ ಅಸಮಾಧಾನ ಇರಲಿಲ್ಲ. ಉತ್ತರ ಕೊರಿಯಾದಲ್ಲೂ ಅದರ ಪ್ರದರ್ಶನಗಳು ನಡೆಯುತ್ತಿದ್ದವು. ಕಿಮ್ ಜಾಂಗ್​ ಉನ್ ಕೂಡ ಪಾಲ್ಗೊಂಡಿದ್ದೂ ಇದೆ. ಆದರೆ ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ನಡುವಿನ ಸಂಬಂಧ 2018ರಿಂದ ಸಂಪೂರ್ಣವಾಗಿ ಹದಗೆಟ್ಟಿದೆ. ನೆರೆದೇಶದ ಮೇಲೆ ಹಗೆ ಸಾಧಿಸುತ್ತಿರುವ ಕಿಮ್​​ ಬರುಬರುತ್ತ ಅಲ್ಲಿನ ಒಂದೊಂದೇ ಶೋಗಳು, ಸಂಗೀತಗಳು, ಗೇಮ್​ಗಳನ್ನೆಲ್ಲ ನಿರ್ಬಂಧಿಸಿದ್ದಾರೆ.

ಉತ್ತರ ಕೊರಿಯಾದಲ್ಲಿ ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ರೊಮ್ಯಾಂಟಿಕ್​ ಆಗಿ ವರ್ತಿಸುವುದು, ಜೋಡಿಗಳು ಪರಸ್ಪರ ಚುಂಬಿಸಿಕೊಳ್ಳುವುದಕ್ಕೆಲ್ಲ ನಿರ್ಬಂಧ ಇದೆ. ಆದರೆ ದಕ್ಷಿಣ ಕೊರಿಯಾದ ನಾಟಕಗಳಲ್ಲಿ ಇಂಥ ರೊಮ್ಯಾಂಟಿಕ್​ ದೃಶ್ಯಗಳನ್ನೆಲ್ಲ ತೋರಿಸಲಾಗುತ್ತದೆ. ಅಲ್ಲಿ ಪ್ರಜೆಗಳಿಗೆ ಇರುವ ಸ್ವಾತಂತ್ರ್ಯವನ್ನು ಡ್ರಾಮಾಗಳ ಮೂಲಕ ತೆರೆದಿಡಲಾಗುತ್ತದೆ. ಉತ್ತರ ಕೊರಿಯಾದ ಜನರು ಅದನ್ನು ನೋಡಿದರೆ, ಕ್ರಮೇಣ ಅವರಿಗೆ ಇಲ್ಲಿನ ಕಾನೂನಿನ ಬಗ್ಗೆ ಅಸಮಾಧಾನ ಹುಟ್ಟಬಹುದು. ನಮಗೆ ಇಂಥ ಸ್ವಾತಂತ್ರ್ಯ ಕೊಡದ ಆಡಳಿತದ ವಿರುದ್ಧ ದಂಗೆ ಏಳಬಹುದು ಎಂಬ ಭಯದಲ್ಲಿಯೇ ಕಿಮ್​ ಹೀಗೆ ನಿಷೇಧದ ಕ್ರಮ ಕೈಗೊಂಡಿದ್ದಾರೆ. ಅದನ್ನು ಮೀರಿದವರ ಜೀವವನ್ನೂ ತೆಗೆಯಲಾಗುತ್ತಿದೆ. ನಿಷೇಧದ ಹೊರತಾಗಿಯೂ ಕೆ ಡ್ರಾಮಾ-ಕೆ ಪಾಪ್​ಗಳನ್ನು ವೀಕ್ಷಿಸಿದ ಹಲವರನ್ನು ಈಗಾಗಲೇ ನೇಣಿಗೇರಿಸಲಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ | ಭಯೋತ್ಪಾದನೆಗೆ ಅಸಹಕಾರ ಅಂತಾರಾಷ್ಟ್ರೀಯ ನೀತಿಯಾಗಲಿ

Exit mobile version